

ಬೆಂಗಳೂರು: ಕೈಗಾರಿಕೆಗಳಲ್ಲಿ ರೊಬೊಟಿಕ್ಸ್ ತಂತ್ರಜ್ಞಾನದ ಪಾತ್ರ ಕುರಿತು ಉದ್ಯಮಿ ಮೋಹನದಾಸ್ ಪೈ ಮತ್ತಿತರರೊಂದಿಗೆ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಚರ್ಚೆ ನಡೆಸಿದರು.
ರೊಬೊಟಿಕ್ಸ್ ಮತ್ತು ಉತ್ಪಾದನೆಯಲ್ಲಿ ಬುದ್ಧಿಮತ್ತೆಯ ನಾವೀನ್ಯತೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಉದ್ಯಮಿಗಳಾದ ಅಭಯ್ ಜೈನ್ ಮತ್ತು ಉಮಾಕಾಂತ್ ಸೋನಿ ಅವರು ಉಪಸ್ಥಿತರಿದ್ದರು.
ರೋಬೋಟಿಕ್ ತಂತ್ರಜ್ಞಾನ ಬಳಸಿ ಕೈಗಾರಿಕೆಗಳನ್ನು ಹೇಗೆ ಕ್ರಾಂತಿಗೊಳಿಸಬಹುದು ಮತ್ತು ಸುಸ್ಥಿರ ಪರಿಹಾರಗಳನ್ನು ಹೇಗೆ ರೂಪಿಸಬಹುದು ಎಂಬ ಕುರಿತು ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು.
ಉತ್ಪಾದನೆಯ ಭವಿಷ್ಯವನ್ನು ರೂಪಿಸುವ ಉದಯೋನ್ಮುಖ ಪ್ರವೃತ್ತಿಗಳು, ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದು ಉತ್ಕೃಷ್ಟ ಅನುಭವ ದೊರೆತಿದೆ ಎಂದು ಹೇಳಿದ್ದಾರೆ.
ರೋಬೋಟಿಕ್ಸ್ ಕಾರ್ಯತಂತ್ರದ ದೃಷ್ಟಿ ಮತ್ತು ಸಹಯೋಗದೊಂದಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಬಹುದು. ಜತೆಗೆ ಅರ್ಥಪೂರ್ಣ ಪರಿಣಾಮವನ್ನು ಪಡೆಯಬಹುದೆಂಬುದು ನನಗೆ ಮನವರಿಕೆಯಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.