

ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ವಸ್ತುಗಳು ಪರಿಸರಕ್ಕೆ ಮಾರಕವೇ. ಅದು ಗೊತ್ತಿದ್ದೂ ಸಾರ್ವಜನಿಕರು ತಮ್ಮ ದೈನಂದಿನ ಬದುಕಿನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಅವುಗಳ ಮೇಲೆ ಸ್ಥಳೀಯ ಆಡಳಿತಗಳು ಸಾಕಷ್ಟು ನಿರ್ಬಂಧಗಳನ್ನು ಹೇರಿದ್ದರೂ ಬಳಕೆ ಮಾತ್ರ ನಿಂತಿಲ್ಲ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ‘ಭವಿಷ್ಯವನ್ನು ಪ್ಲಾಸ್ಟಿಕ್ ಚೀಲಗಳಿಂದ ಮುಕ್ತಗೊಳಿಸಿ, ಮರುಬಳಕೆ ಮಾಡಬಹುದಾದ ಪರ್ಯಾಯ ವಸ್ತು ಆಯ್ಕೆ ಮಾಡಿಕೊಳ್ಳಿ’ ಎಂಬ ಘೋಷವಾಕ್ಯದೊಂದಿಗೆ ‘ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ’ವನ್ನು ಆಚರಿಸಲಾಗುತ್ತಿದೆ.
ಏಕ ಬಳಕೆಯ ಪ್ಲಾಸ್ಟಿಕ್ ಇಂದು ಜಾಗತಿಕ ಸಮಸ್ಯೆಯಾಗಿದ್ದು, ಪರಿಸರ, ವನ್ಯಜೀವಿಗಳು ಹಾಗೂ ಜಲಚರಗಳಿಗೆ ಮಾರಕವಾಗಿದೆ. ಅವ್ಯಾಹತವಾಗಿರುವ ಇದರ ಬಳಕೆ ತಡೆಗಟ್ಟುವುದು ಆಡಳಿತ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಜನರು ಜಾಗೃತರಾಗಿ ಪರಿಸರಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಿದೆ. ಪರಿಸರಸ್ನೇಹಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕಿದೆ.
ಎಲ್ಲಕ್ಕಿಂತ ಮೊದಲು ಪ್ಲಾಸ್ಟಿಕ್ ಉತ್ಪಾದನೆಗೆ ಕಡಿವಾಣ ಹಾಕಬೇಕಿದೆ. ಇಲ್ಲವಾದಲ್ಲಿ ಸುಲಭವಾಗಿ ಹಾಗೂ ಅತಿ ಕಡಿಮೆ ಬೆಲೆ ಲಭ್ಯವಾಗುವ ಪ್ಲಾಸ್ಟಿಕ್ ಚೀಲಗಳ ಬಳಕೆಯಿಂದ ಜನ ದೂರವಿರುವುದು ಕಷ್ಟ. ಅದಲ್ಲದೆ ಪ್ಲಾಸ್ಟಿಕ್ ಉದ್ಯಮದಲ್ಲಿ ಲಕ್ಷಾಂತರ ಜನರು ಜೀವನ ಕಟ್ಟಿಕೊಂಡಿರುವುದರಿಂದ ಅದನ್ನು ದಿಢೀರನೆ ಸಂಪೂರ್ಣ ನಿಷೇಧಿಸುವುದು ಕಷ್ಟವೇ. ಹಾಗಾಗಿ ಪ್ಲಾಸ್ಟಿಕ್ಗೆ ಪರ್ಯಾಯವಾದ ಉತ್ಪನ್ನಗಳನ್ನು ತಯಾರಿಸಿ ಮಾರಲು ಉತ್ಪಾದನಾ ಉದ್ಯಮಗಳಿಗೆ ಮತ್ತು ಮಾರಾಟಗಾರರಿಗೆ ತಿಳಿವಳಿಕೆ ನೀಡಬೇಕಿದೆ. ಜೊತೆಗೆ, ಪ್ಲಾಸ್ಟಿಕ್ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಬೇಕಿದೆ. ಪ್ಲಾಸ್ಟಿಕ್ ಪುಡಿ ಮಾಡಿ ಡಾಂಬರ್, ಪಿವಿಸಿ ಪೈಪ್ಗಳ ತಯಾರಿಕೆಯಂತಹ ಉಪಯುಕ್ತ ಕಾರ್ಯಗಳಿಗೆ ಬಳಸಬೇಕಿದೆ. ಇಂತಹ ಉದ್ಯಮಗಳಿಗೆ ಉತ್ತೇಜನ ನೀಡುವ ಕಾರ್ಯ ತುರ್ತಾಗಿ ಆಗಬೇಕಿದೆ ಎನ್ನುತ್ತಾರೆ ಪರಿಸರ ತಜ್ಞರು.
ಇದರೊಂದಿಗೆ ಪ್ಲಾಸ್ಟಿಕ್ ಬಳಕೆಯಿಂದ ಜೀವಸಂಕುಲದ ಮೇಲಾಗುವ ದುಷ್ಪರಿಣಾಮ, ಭವಿಷ್ಯದಲ್ಲಿ ಎದುರಾಗುವ ಅಪಾಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿಸಿ, ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಸಬೇಕಿದೆ. ಬೀದಿ ನಾಟಕ, ಭಿತ್ತಿ ಪತ್ರ ಮತ್ತಿತರ ವಿಧಾನ ಬಳಸಿ ಜನರಲ್ಲಿ ಅರಿವು ಮೂಡಿಸಬೇಕಿದೆ. ಜನರು ಸ್ವಯಂಪ್ರೇರಿತರಾಗಿ ಪರಿಸರಸ್ನೇಹಿ ವಸ್ತುಗಳನ್ನು ಬಳಸುವ ಅಭ್ಯಾಸ ರೂಢಿಸಿಕೊಳ್ಳಬೇಕಿದೆ ಎಂಬುದು ತಜ್ಞರ ಸಲಹೆ.
ಜಲಚರಗಳಿಗೆ ಮಾರಕ: ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳಿಂದ ಜಲಮೂಲಗಳು ಕಲುಷಿತವಾಗುತ್ತಿವೆ. ಈ ಪ್ಲಾಸ್ಟಿಕ್ ವಸ್ತುಗಳು ಕೆರೆ, ನದಿ ಹಾಗೂ ಸಮುದ್ರ ಸೇರಿ ಅಲ್ಲಿನ ಜಲಚರಗಳಿಗೂ ಹಾನಿಯುಂಟು ಮಾಡುತ್ತಿವೆ. ಪ್ರತಿ ವರ್ಷ ಉತ್ಪಾದನೆಯಾಗುವ ಪ್ಲಾಸ್ಟಿಕ್ನಲ್ಲಿ 14 ದಶಲಕ್ಷ ಟನ್ ಅಧಿಕ ಪ್ಲಾಸ್ಟಿಕ್ ಸಾಗರ ಸೇರುತ್ತಿದ್ದು, ವಿಷಕಾರಿ ಮೈಕ್ರೋಪ್ಲಾಸ್ಟಿಕ್ ಆಗಿ ಪರಿವರ್ತನೆಯಾಗುತ್ತಿದೆ. ಇದರ ಸೇವನೆಯಿಂದ ಚಲಚರಗಳು ಸಾವನ್ನಪ್ಪುತ್ತಿವೆ. ಮಾನವನ ಆಹಾರ ಸರಪಳಿಯ (ಮೀನು, ಏಡಿ, ಸೀಗಡಿ ಇತ್ಯಾದಿ) ಮೇಲೂ ತೀವ್ರ ಪರಿಣಾಮ ಬೀರುತ್ತಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧ ಎಂಬ ಕೂಗು ಹಲವು ದಶಕಗಳಿಂದ ಕೇಳುತ್ತಿದೆ. ಆದರೆ ಬಳಕೆ ನಿಂತಿಲ್ಲ . ಹೀಗೆ ಸುಮ್ಮನೇ ಕೂಗುವುದರಿಂದ ಪ್ರಯೋಜನವಿಲ್ಲ. ಹಾಗೆಯೇ ಎಲ್ಲ ರೀತಿಯ ಪ್ಲಾಸ್ಟಿಕ್ ನಿಷೇಧ ಸಾಧ್ಯವಿಲ್ಲ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮಾತ್ರ ನಿಷೇಧಿಸಬೇಕು. ಇಲ್ಲವೆ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಡಾಂಬರು ತಯಾರಿಕೆ ಮತ್ತಿತರ ಪರ್ಯಾಯ ಕಾರ್ಯಗಳಿಗೆ ಬಳಸಬೇಕು - ಸುರೇಶ್ ಹೆಬ್ಳೀಕರ್ ಪರಿಸರ ತಜ್ಞ
ಒಮ್ಮೆ ಮಾತ್ರ ಬಳಸಿ ಬಿಸಾಡುವ ಪ್ಲಾಸ್ಟಿಕ್ ಚೀಲಗಳಿಗೆ ಏಕಬಳಕೆ ಪ್ಲಾಸ್ಟಿಕ್ ಎನ್ನುತ್ತಾರೆ. ಈ ರೀತಿಯ ಪ್ಲಾಸ್ಟಿಕ್ ಚೀಲಗಳನ್ನು ಸರಿಯಾಗಿ ವಿಲೇವಾರಿ ಮಾಡಲಾಗುವುದಿಲ್ಲ. ಮರುಬಳಕೆಯೂ ಸಾಧ್ಯವಿಲ್ಲ. ಹಾಗಾಗಿ ಇದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಕಡ್ಡಿ, ಕವರ್, ಬಲೂನ್ಗಳ ಕಡ್ಡಿ, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ- ಐಸ್ಕ್ರೀಂ ಸ್ಟಿಕ್, ಸ್ಪೂನ್, ಪ್ಲೇಟ್ ಸೇರಿದಂತೆ ಹಲವು ಬಗೆಯ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳಿವೆ. ಜಗತ್ತಿನಾದ್ಯಂತ ಪ್ರತಿ ವರ್ಷ 300 ದಶಲಕ್ಷ ಟನ್ ಅಧಿಕ ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತಿದೆ.
ಪ್ಲಾಸ್ಟಿಕ್ ಚೀಲ ರಹಿತ ಜಗತ್ತನ್ನು ನಿರ್ವಿುಸುವ ನಿಲುವಿನೊಂದಿಗೆ ಪ್ರತಿ ವರ್ಷ ಜುಲೈ 3ರಂದು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ ಆಚರಿಸಲಾಗುತ್ತದೆ. 1997ರಲ್ಲಿ ಸಾಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಬೃಹತ್ ರಾಶಿ ಪತ್ತೆಯಾದ ನಂತರ, ಜಗತ್ತಿನಾದ್ಯಂತ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಕೆಲ ದೇಶಗಳು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದವು. ಇದರನ್ನು ಗಂಭೀರವಾಗಿ ಪರಿಗಣಿಸಿದ ಬಾಂಗ್ಲಾದೇಶ 2002ರಲ್ಲಿ ಏಕಬಳಕೆ ಪ್ಲಾಸ್ಟಿಕ್ಗೆ ನಿಷೇಧಿಸಿ, ಪ್ಲಾಸ್ಟಿಕ್ ನಿಷೇಧಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಜನರನ್ನು ಜಾಗೃತಗೊಳಿಸಲು ಹಾಗೂ ದೇಶಗಳನ್ನು ಉತ್ತೇಜಿಸಲು ಪ್ರತಿ ವರ್ಷ ಪ್ಲಾಸ್ಟಿಕ್ ಚೀಲ ಮುಕ್ತ ದಿನ ಆಚರಿಸಲಾಗುತ್ತಿದೆ.