

ಸೊರಬ: ವ್ಯಕ್ತಿಯು ತನ್ನ ಆದಾಯದಲ್ಲಿ ಕೊಂಚ ಭಾಗವನ್ನು ಸಮಾಜದ ಸತ್ಕಾರ್ಯಗಳಿಗೆ ಬಳಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಏಕವಿಂಶತಿ ದಿನದ ಪೂಜೆಯ ಫಲಪ್ರಾಪ್ತಿಗಾಗಿ ನಡೆದ ಗಣಹೋಮ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಚಾರ ಬಯಸದ ನಿಸ್ವಾರ್ಥ ಸೇವೆ ಫಲದಾಯಕ. ಮನುಷ್ಯ ಪರೋಪಕಾರ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಾಳೆಯ ಬದುಕು ಸ್ಫೂರ್ತಿದಾಯಕ ಆಗಿರಬೇಕೇ ವಿನಃ ಚಿಂತೆಯಿಂದ ಕೂಡಿರಬಾರದು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ದೇವಿಗೆ ವಿಶಿಷ್ಟ ಸ್ಥಾನವಿದೆ. ನವರಾತ್ರಿ ಸಂದರ್ಭದಲ್ಲಿ 21 ದಿನ ದೇವಿಯ ಆರಾಧನೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದವರಿಗೆ ಯಲ್ಲಮ್ಮ ದೇವಿ ಕೃಪಾಕಟಾಕ್ಷವಿರಲಿ ಎಂದು ಆಶಿಸಿದರು.
ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಕೈಗೊಂಡ ಕಾರ್ಯಗಳು ಯಶಸ್ವಿ ಆಗಬೇಕಾದರೆ ಕಾಯ, ವಾಚಾ ಹಾಗೂ ಮನಸಾ ಶುದ್ಧವಾಗಿರಬೇಕು. ಹಿಡಿದ ಕೆಲಸವನ್ನು ಶುದ್ಧ ಮನಸ್ಸಿನಿಂದ ಮಾಡುವ ಪ್ರವೃತ್ತಿ ಅತ್ಯಗತ್ಯ. ಈ ದಿಸೆಯಲ್ಲಿ ಬಸವಾದಿ ಶರಣರು ಸಹ ಕಾಯಕಕ್ಕೆ ಮಹತ್ವ ನೀಡಿದ್ದರು ಎಂದರು.
ಶ್ರೀ ಯಲ್ಲಮ್ಮ ಮತ್ತು ಶ್ರೀ ಪಾರ್ವತಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಚಂದ್ರಶೇಖರ ಮಾತನಾಡಿ, ದೈವೀಸ್ವರೂಪ ಸುಂದರಮ್ಮ ಅವರ ಆಶಯದಂತೆ 41 ವರ್ಷಗಳಿಂದ ನೆಲೆಗೊಂಡಿರುವ ಶ್ರೀ ಯಲ್ಲಮ್ಮ ದೇವಸ್ಥಾನದ ನವೀಕರಣ ಕೈಗೊಳ್ಳಲಾಗಿದೆ. 25 ಅಡಿ ಎತ್ತರದ ಗೋಪುರ, ಮುಖ ಮಂಟಪ ಹಾಗೂ ದಶಾವತಾರದ ಮೂರ್ತಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಪುರೋಹಿತ ಸಂದೀಪ್ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಸ್ಥಾನದ ಕಾರ್ಯದರ್ಶಿ ವಾಸುದೇವ, ಖಜಾಂಚಿ ಮಧುರಾಯ ಜಿ. ಶೇಟ್, ಉಪಾಧ್ಯಕ್ಷ ಜಗದೀಶ ಕಲಾಲ್, ಪ್ರಮುಖರಾದ ಎಂ.ಎನ್.ಗುರುಮೂರ್ತಿ, ನಟರಾಜ ಉಪ್ಪಿನ, ಗುಡ್ಡಪ್ಪ ಶ್ರೇಷ್ಠಿ, ದಾಮೋದರ, ಎಂ. ರಂಗನಾಥ, ವಿನೋದ ವಾಲ್ಮೀಕಿ, ಅಶೋಕ ಶೇಟ್, ಮಹೇಶ್ ಖಾರ್ವಿ, ಕಾಳಿಂಗರಾಜ ಶ್ರೇಷ್ಠಿ, ಬಿ.ಎಂ.ವೆಂಕಟೇಶ ಶ್ರೇಷ್ಠಿ, ಎಂ.ಕೆ.ವಿಶ್ವನಾಥ, ರಾಮಪ್ಪ ತರಕಾರಿ ಇತರರಿದ್ದರು.