ವೈರಸ್ ಸಂಶೋಧಕರ ಮೇಲೆ ಚೀನೀ ಹ್ಯಾಕರ್​ಗಳ ದೃಷ್ಟಿ- ಶಂಕೆ ವ್ಯಕ್ತಪಡಿಸಿದ ಅಮೆರಿಕ

Corona vaccine
Published on

ವಾಷಿಂಗ್ಟನ್​: ಚೀನಾ ಸರ್ಕಾರದ ಜತೆಗೆ ನಂಟು ಹೊಂದಿರುವ ಹ್ಯಾಕರ್​​ಗಳು COVID19 ವೈರಸ್​ ಕುರಿತ ಸಂಶೋಧನೆ ನಡೆಸುವ ಸಂಘಟನೆಗಳು, ಸಂಶೋಧಕರ ಕಂಪ್ಯೂಟರ್​ಗಳನ್ನು ಹ್ಯಾಕ್ ಮಾಡುವುದಕ್ಕೆ ಪ್ರಯತ್ನಿಸುತ್ತಿರಬಹುದು ಎಂದು ಅಮೆರಿಕದ ಎಫ್​ಬಿಐ ಮತ್ತು ಡಿಪಾರ್ಟ್​ಮೆಂಟ್ ಆಫ್ ಹೋಮ್​ಲ್ಯಾಂಡ್ ಸೆಕ್ಯುರಿಟಿ ಬುಧವಾರ ಶಂಕೆ ವ್ಯಕ್ತಪಡಿಸಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ನಿಖರವಾಗಿ ಯಾವುದೇ ಹ್ಯಾಕರ್​ಗಳತ್ತ ಈ ಸಂಸ್ಥೆಗಳು ಬೊಟ್ಟುಮಾಡದೇ ಹೋದರೂ, ಕೋವಿಡ್​ 19 ಸಂಬಂಧಿಸಿದ ಕೆಲಸ ಮಾಡುತ್ತಿರುವವರು ತಮ್ಮ ಕಂಪ್ಯೂಟರ್​ಗಳ ಸುರಕ್ಷತೆ ಬಗ್ಗೆ ಜಾಗರೂಕರಾಗಿರುವುದು ಅವಶ್ಯ ಎಂದು ಎಚ್ಚರಿಸಿವೆ.

ಕೋವಿಡ್ 19ಕ್ಕೆ ಸಂಬಂಧಿಸಿ ನಮ್ಮ ದೇಶದ ಪ್ರಯತ್ನಗಳನ್ನು ತಡೆಯಲು ಚೀನಾದ ಪ್ರಯತ್ನವಿರುವ ಕಾರಣ ಏನು ಬೇಕಾದರೂ ಆಗಬಹುದು. ಸಂಶೋಧನಾ ಸಂಸ್ಥೆ, ಮತ್ತು ಅಮೆರಿಕದ ಸಾರ್ವಜನಿಕರು, ಈ ದಾಳಿಯನ್ನು ತಡೆಯುವುದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಪರಿಣತಿ ಹೊಂದಿದವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ರೀತಿ ಎಚ್ಚರಿಸುತ್ತಿರುವುದಾಗಿ ಅಮೆರಿಕದ ಸೈಬರ್ ಸೆಕ್ಯುರಿಟಿ ಆ್ಯಂಡ್ ಇನ್​ಫ್ರಾಸ್ಟ್ರಕ್ಚರ್ ಸೆಕ್ಯುರಿಟಿ ಏಜೆನ್ಸಿ ಹೇಳಿಕೆಯೊಂದರಲ್ಲಿ ಎಚ್ಚರಿಸಿದೆ.

ಅಮೆರಿಕ ಪುನರುಚ್ಚರಿಸುತ್ತಿರುವ ಚೀನಾದಿಂದ ದೇಶಕ್ಕೆ ವಿಶೇಷವಾಗಿ ಟೆಕ್ನಾಲಜಿ ಮತ್ತು ಟ್ರೇಡ್​ ವಿಚಾರದಲ್ಲಿ ಬೆದರಿಕೆ ಇದೆ ಎಂಬುದನ್ನು ಈ ಹೇಳಿಕೆ ಪ್ರತಿಧ್ವನಿಸಿದೆ. ಕೋವಿಡ್ 19 ವಿಚಾರದಲ್ಲಿ ಮಾಧ್ಯಮಗಳ ಗಮನಸೆಳೆದು ಕೆಲಸ ಮಾಡುತ್ತಿರುವ ಸಂಶೋಧನಾ ಸಂಸ್ಥೆಗಳಿಗೆ ಹೆಚ್ಚಿನ ಬೆದರಿಕೆ ಇದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕದ ಡಿಪಾರ್ಟ್​ಮೆಂಟ್ ಆಫ್ ಜಸ್ಟೀಸ್ ಕೂಡ ಎಚ್ಚರಿಸಿದೆ.

ಆದಾಗ್ಯೂ, ಅಮೆರಿಕದ ಆರೋಪಗಳನ್ನು ಚೀನಾ ತಳ್ಳಿ ಹಾಕಿದ್ದು, ವೈರಸ್ ಸಂಬಂಧಿಸಿದ ಯಾವುದೇ ಡೇಟಾ ಕಳವು ಮಾಡಲು ಅಥವಾ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿಲ್ಲ. ನಾವು ಕೋವಿಡ್ 19 ಚಿಕಿತ್ಸೆ ಮತ್ತು ಔಷಧ ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಜಗತ್ತನ್ನೇ ಮುನ್ನಡೆಸುತ್ತಿದ್ದೇವೆ ಎಂದು ಹೇಳಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net