ಅಮೆರಿಕ ಫಲಿತಾಂಶ ವಿಳಂಬ ಸಾಧ್ಯತೆ: ಮೆಲ್ ಇನ್ ಮತಪತ್ರ ಮೂಲಕ ದೊಡ್ಡ ಸಂಖ್ಯೆಯಲ್ಲಿ ಮತ ಚಲಾವಣೆ

Trump-Joe Biden
Published on

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಈವರೆಗೆ 58.7 ಮಿಲಿಯನ್​ಗಿಂತಲೂ (5.87 ಕೋಟಿ) ಅಧಿಕ ಮಂದಿ ಮತ ಚಲಾಯಿಸಿದ್ದು, ಈ ಪ್ರಮಾಣ 2016ರ ಚುನಾವಣೆಯ ಆರಂಭಿಕ ಮತದಾನಕ್ಕೆ ಹೋಲಿಸಿದರೆ ಅಧಿಕವಾಗಿದೆ. ಆದರೆ ಅಭೂತಪೂರ್ವ ಸಂಖ್ಯೆಯಲ್ಲಿ ಮೇಲ್ ಇನ್ ಮತಪತ್ರಗಳು ಬಂದಿರುವುದರಿಂದಾಗಿ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಿ, ಫಲಿತಾಂಶ ಪ್ರಕಟಣೆ ನ.3ಕ್ಕಿಂತ ವಿಳಂಬವಾಗುವ ಸಾಧ್ಯತೆ ಇದೆ.

ಅಮೆರಿಕ ಮೂಲದ ಎಡಿಸನ್ ರಿಸರ್ಚ್ ಆಂಡ್ ಕ್ಯಾಟಲಿಸ್ಟ್, 50 ರಾಜ್ಯಗಳು ಮತ್ತು ವಾಷಿಂಗ್ಟನ್ ಡಿಸಿಯಲ್ಲಿನ ಚುನಾವಣಾಧಿಕಾರಿಗಳ ಸಮೀಕ್ಷೆಯ ಪ್ರಕಾರ, 2016ರಲ್ಲಿ ಚುನಾವಣಾ ಪೂರ್ವವಾಗಿ 58.3 ಮಿಲಿಯನ್ (5.83 ಕೋಟಿ) ಮತಗಳು ಚಲಾವಣೆಯಾಗಿದ್ದವು. ಈ ಬಾರಿ 2016ರ ಎಲ್ಲ ಆರಂಭಿಕ ದಾಖಲೆಗಳು ಸರಿಗಟ್ಟಿವೆ. ಕರೊನಾ ಬಿಕ್ಕಟ್ಟಿನ ಮಧ್ಯೆಯೂ ಎಲ್ಲ ರಾಜ್ಯಗಳು ದಾಖಲೆ ಪ್ರಮಾಣದಲ್ಲಿ ಮತದಾನ ಪ್ರಮಾಣವನ್ನು ವರದಿ ಮಾಡುತ್ತಿವೆ.

ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮೇಲ್ ಇನ್ ಮತಪತ್ರಗಳು ಬಂದಿದ್ದು, ಇವುಗಳ ಎಣಿಕೆ ವಿಳಂಬವಾದರೆ ಚುನಾವಣೆ ಅಂತ್ಯಗೊಂಡ ರಾತ್ರಿಯೇ ಫಲಿತಾಂಶ ಹೊರ ಬೀಳುವ ಸಾಧ್ಯತೆ ಕಡಿಮೆ. ತಜ್ಞರ ಅಂದಾಜಿನ ಪ್ರಕಾರ, ಮತ ಎಣಿಕೆಯ ಸಂಪೂರ್ಣ ಪ್ರಕ್ರಿಯೆ ಮಾರನೇಯ ದಿನ ಬೆಳಗ್ಗೆ ಅಥವಾ ಮಧ್ಯಾಹ್ನದವರೆಗೂ ನಡೆಯಬಹುದು ಎನ್ನಲಾಗಿದೆ. ಮೆಲ್ ಇನ್ ಮತಪತ್ರಗಳಲ್ಲಿ ಶೇ. 54ರಷ್ಟು ಮತಗಳು 16 ರಾಜ್ಯಗಳಿಂದ ಬಂದಿದ್ದು, ಈ ರಾಜ್ಯಗಳು ಅಧ್ಯಕ್ಷೀಯ ಚುನಾವಣೆ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅದರಲ್ಲೂ ಈ ಬಾರಿ ಕಿರಿಯ ಮತದಾರರು ಅಂದರೆ 18 ರಿಂದ 29 ವರ್ಷದೊಳಗಿನವರು ಹೆಚ್ಚಿನ ಪ್ರಮಾಣದಲ್ಲಿ ಆಸಕ್ತಿ ತೋರಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net