

PM Modi: ಗಾಜಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಸೆಪ್ಟೆಂಬರ್,30) ಸ್ವಾಗತಿಸಿದ್ದಾರೆ.ಅಲ್ಲದೆ, ಇಸ್ರೇಲಿ ಮತ್ತು ಪ್ಯಾಲೆಸ್ಟೀನಿಯನ್ ಜನರಿಗೆ ಸುಸ್ಥಿರ ಶಾಂತಿಗಾಗಿ ಮಾರ್ಗವನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಸಮಗ್ರ ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ಯಾಲೆಸ್ಟೀನಿಯನ್ ಮತ್ತು ಇಸ್ರೇಲಿ ಜನರಿಗೆ ಸುಸ್ಥಿರ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಕಾರ್ಯಸಾಧ್ಯವಾದ ಮಾರ್ಗವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಗಾಜಾ ಮತ್ತು ಇಸ್ರೇಲ್ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಭದ್ರಪಡಿಸಿಕೊಳ್ಳಲು ಟ್ರಂಪ್ರ ಈ ಕ್ರಮಕ್ಕೆ ಸಂಬಂಧಪಟ್ಟ ಎಲ್ಲರೂ ಬೆಂಬಲ ನೀಡುತ್ತಾರೆ ಎಂಬ ಆಶಯವನ್ನು ಮೋದಿ ವ್ಯಕ್ತಪಡಿಸಿದ್ದಾರೆ.
ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ವೇತಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಂಪ್ ಸಮ್ಮುಖದಲ್ಲಿ ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ಯೋಜನೆಯನ್ನು ಅಮೆರಿಕ ಅಧ್ಯಕ್ಷರು ಘೋಷಿಸಿದರು. ನಂತರ ಶಾಂತಿ ಪ್ರಸ್ತಾಪವನ್ನು ಇಸ್ರೇಲ್ ಅಂಗೀಕರಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಯೋಜನೆಯು ಗಾಜಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಮತ್ತು ಆ ಪ್ರದೇಶದಲ್ಲಿ ತನ್ನ ನೆರೆಹೊರೆಯವರಿಗೆ ಬೆದರಿಕೆ ಉಂಟುಮಾಡುವ ಉಗ್ರರಿಂದ ಭಯೋತ್ಪಾದನಾ ಮುಕ್ತ ವಲಯವನ್ನಾಗಿ ಮಾಡಲು ಕರೆ ನೀಡುತ್ತದೆ.
ಟ್ರಂಪ್ರ ಈ ಯೋಜನೆಯು ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳಲು ಮತ್ತು ಹಮಾಸ್‌ನಿಂದ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಕರೆ ನೀಡಿದೆ. ಯುದ್ಧದ ನಂತರ, ಗಾಜಾವನ್ನು ತಾಂತ್ರಿಕ ರಾಜಕೀಯೇತರ ಪ್ಯಾಲೇಸ್ಟಿನಿಯನ್ ಸಮಿತಿಯ ತಾತ್ಕಾಲಿಕ ಪರಿವರ್ತನಾ ಆಡಳಿತದ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಇದು ಗಾಜಾದಲ್ಲಿನ ಜನರಿಗೆ ಸಾರ್ವಜನಿಕ ಸೇವೆಗಳು ದಿನನಿತ್ಯದ ನಿರ್ವಹಣೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದು ಈ ಯೋಜನೆ ತಿಳಿಸುತ್ತದೆ.
ಈ ಯೋಜನೆಯ ಪ್ರಕಾರ, ಹಮಾಸ್ ಮತ್ತು ಎಲ್ಲಾ ಬಣಗಳು ಗಾಜಾದ ಆಡಳಿತದಲ್ಲಿ ನೇರವಾಗಿ, ಪರೋಕ್ಷವಾಗಿ ಅಥವಾ ಯಾವುದೇ ರೂಪದಲ್ಲಿ ಪಾತ್ರವನ್ನು ಹೊಂದಿರಬಾರದು ಎಂದು ಹೇಳುತ್ತದೆ. (ಏಜೆನ್ಸೀಸ್)