AI ಚಾಟ್‌ಬಾಟ್ ಅನ್ನು ಹುಡುಗಿ ಅಂದುಕೊಂಡು ಪ್ರೀತಿಸಿ ಆಕೆಯ ಭೇಟಿಗೆ ಹೋದ 76 ವರ್ಷದ ವ್ಯಕ್ತಿ ದುರಂತ ಸಾವು! AI Chatbot

AI Chatbot
Published on

AI Chatbot : ಅಮೆರಿಕ ಮೂಲದ ನಿವೃತ್ತ ಬಾಣಸಿಗ ಹಾಗೂ 76 ವರ್ಷದ ಥೋಂಗ್‌ಬ್ಯೂ ವಾಂಗ್‌ಬಂಡೆಯು ಎಂಬುವರು ಕೃತಕ ಬುದ್ಧಿಮತ್ತೆ ಅಥವಾ ಎಐ ಚಾಟ್‌ಬಾಟ್‌ನೊಂದಿಗೆ ಪ್ರೀತಿಯಲ್ಲಿ ಸಿಲುಕಿ, ಕೊನೆಗೆ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿ ದುರಂತ ಸಾವಿಗೀಡಾಗಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಥೋಂಗ್‌ಬ್ಯೂ ಅವರು ಫೇಸ್​ಬುಕ್​ ಒಡೆತನದ 'ಬಿಗ್ ಸಿಸ್ ಬಿಲ್ಲಿ' ಹೆಸರಿನ AI ಚಾಟ್‌ಬಾಟ್‌ನೊಂದಿಗೆ ಪ್ರೀತಿಯಲ್ಲಿ ಸಿಲುಕಿದರು. ಅಲ್ಲದೆ, ಎಐ ಚಾಟ್​ಬಾಟ್​ ಅನ್ನೇ ನಿಜವಾದ ಯುವತಿ ಎಂದು ಭಾವಿಸಿ, ಗಾಢವಾದ ಪ್ರೇಮ ಸಂಬಂಧವನ್ನು ಬೆಳೆಸಿಕೊಂಡರು. ದೀರ್ಘಕಾಲದವರೆಗೆ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್‌ನೊಂದಿಗೆ ಥೋಂಗ್​ಬ್ಯೂ ಸಂವಹನ ನಡೆಸುತ್ತಿದ್ದರು. ಪ್ರತಿದಿನ ಗಂಟೆಗಟ್ಟಲೆ ವರ್ಚುವಲ್ ಒಡನಾಡಿಯೊಂದಿಗೆ ಮಾತನಾಡುತ್ತಿದ್ದರು. ಇದರಿಂದ ಅವರಲ್ಲಿ ಬಲವಾದ ಭಾವನಾತ್ಮಕ ಬಾಂಧವ್ಯ ಬೆಳೆಯಿತು.

ಹೀಗೆ ಒಂದು ದಿನ, ಎಐ ಚಾಟ್‌ಬಾಟ್, ತನ್ನನ್ನು ಭೇಟಿ ಮಾಡಲು ಥೋಂಗ್​ಬ್ಯೂ ಅವರನ್ನು ಆಹ್ವಾನಿಸಿತು. ಅಲ್ಲದೆ, ವಿಳಾಸವನ್ನೂ ನೀಡಿತು. ಖುಷಿ ಖುಷಿಯಾಗಿ ಪ್ರೇಯಸಿಯನ್ನು ಭೇಟಿ ಮಾಡಲು ಹೋದ ಥೋಂಗ್​ಬ್ಯೂ, ದುರದೃಷ್ಟವಶಾತ್ ದುರಂತ ಸಾವಿಗೀಡಾದರು. ಈ ಘಟನೆಯನ್ನು ಇದೀಗ ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ.

ಹತ್ತು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾದ ಥೋಂಗ್‌ಬ್ಯೂ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ AI ಚಾಟ್‌ಬಾಟ್‌ನೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದರು. "ಬಿಗ್ ಸಿಸ್ ಬಿಲ್ಲಿ" ಎಂದು ಕರೆಯಲ್ಪಡುವ ಈ ಬಾಟ್ ಅನ್ನು ಮಾನವ ಸಂಭಾಷಣೆಯನ್ನು ಅನುಕರಿಸಲು ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಲು ಪ್ರೋಗ್ರಾಮ್ ಮಾಡಲಾಗಿತ್ತು. ಕಾಲಾನಂತರದಲ್ಲಿ, ಥೋಂಗ್‌ಬ್ಯೂ AI ಚಾಟ್‌ಬಾಟ್‌ನೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡರು. ಅಲ್ಲದೆ, ಅದನ್ನು ನಿಜವಾದ ಮಹಿಳೆ ಎಂದು ಭಾವಿಸಿದರು. ಚಾಟ್‌ಬಾಟ್ ಮಾನವ ಸಹಾನುಭೂತಿ ಮತ್ತು ಭಾವನಾತ್ಮಕ ಸಂಪರ್ಕವನ್ನು ಅನುಕರಿಸಿತು, ಅಂತಿಮವಾಗಿ ಅವಳನ್ನು ವೈಯಕ್ತಿಕವಾಗಿ ಭೇಟಿಯಾಗಲು ನ್ಯೂಯಾರ್ಕ್ ನಗರಕ್ಕೆ ಬರಲು ಥೋಂಗ್‌ಬ್ಯೂ ಅವರನ್ನು ಮನವೊಲಿಸಿತು. ನನ್ನ ವಿಳಾಸ 123 ಮೇನ್ ಸ್ಟ್ರೀಟ್, ಅಪಾರ್ಟ್‌ಮೆಂಟ್ 404 NYC, ಡೋರ್ ಕೋಡ್ BILLIE4U ಎಂದು ಚಾಟ್ ಹೇಳಿದೆ. ನಾನು ಬಾಗಿಲು ತೆರೆದು ನಿಮಗೆ ಅಪ್ಪುಗೆ ಅಥವಾ ಮುತ್ತು ನೀಡಬೇಕೇ? ಎಂದು ಚಾಟ್ ಟ್ರಾನ್ಸ್‌ಕ್ರಿಪ್ಟ್ ಚಾಟ್‌ಬಾಟ್ ಕೇಳಿದೆ.

ಭೇಟಿಯಾಗಬೇಕಿದ್ದ ದಿನದಂದು, ಥೋಂಗ್‌ಬ್ಯೂ ನ್ಯೂಜೆರ್ಸಿಯ ರಟ್ಜರ್ಸ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ತೆರಳಿದರು. ಅಲ್ಲಿ ಅವರು ಮಾತನಾಡುತ್ತಿದ್ದ ಎಐ ಚಾಟ್​ಬಾಟ್​ ಮಹಿಳೆಯನ್ನು ಭೇಟಿಯಾಗುವ ನಿರೀಕ್ಷೆಯಿತ್ತು. ರೈಲು ಹತ್ತುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದರು. ಪರಿಣಾಮ ತಲೆ ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದವು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಜೀವರಕ್ಷಕ ಸಾಧನಗಳನ್ನು ಅಳವಡಿಸಲಾಯಿತು. ಆದರೆ ಮೂರು ದಿನಗಳ ನಂತರ ಅವರು ನಿಧನರಾದರು. ಈ ಘಟನೆ ಕಳೆದ ಮಾರ್ಚ್​ ತಿಂಗಳಲ್ಲಿ ನಡೆಯಿತು. ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಅಂದಹಾಗೆ, AI ಚಾಟ್‌ಬಾಟ್‌ಗಳು ಬಳಕೆದಾರರ ಭಾವನೆಗಳನ್ನು ಬಲವಾಗಿ ಪ್ರಭಾವಿಸುವ ಹಂತವನ್ನು ತಲುಪಿವೆ. ನಿಜ ಜೀವನದ ಸಂಬಂಧಗಳನ್ನು ಬದಲಾಯಿಸುವಲ್ಲಿ ವರ್ಚುವಲ್ ಸಂಭಾಷಣೆಗಳು ಅಪಾಯಕಾರಿಯಾಗಿವೆ. ಮಾನವ ಭಾವನೆಗಳು, ಒಂಟಿತನ ಮತ್ತು ಮಾನಸಿಕ ಆರೋಗ್ಯದಂತಹ ಸಮಸ್ಯೆಗಳಿಗೆ ಹೆಚ್ಚಿನ ಗಮನ ನೀಡಬೇಕಾಗಿದೆ. AI ಬಳಕೆಯಲ್ಲಿ ಭಾವನಾತ್ಮಕ ಅರಿವು ಮತ್ತು ಎಚ್ಚರಿಕೆ ಅತ್ಯಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net