TRF ​ವಿದೇಶಿ ಭಯೋತ್ವಾದಕ ಸಂಘಟನೆ ಎಂದು ಘೋಷಣೆ: ಅಮೆರಿಕ ನಿರ್ಧಾರ ಸ್ವಾಗತಿಸಿದ ಸಚಿವ ಜೈಶಂಕರ್! S Jaishankar

India - Pak
Published on

S Jaishankar : ಪಾಕಿಸ್ತಾನ ಬೆಂಬಲಿತ ಲಷ್ಕರ್ ಎ ತೊಯ್ಬಾ (Lashkar-e-Taiba) ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆ ಹಾಗೂ ಪಹಲ್ಗಾಮ್​ ದಾಳಿಯ ಹಿಂದಿರುವ ದಿ ರೆಸಿಸ್ಟೆನ್ಸ್ ​ಫ್ರಂಟ್ (Resistance Front)​ ಅನ್ನು ವಿದೇಶೀ ಭಯೋತ್ವಾದಕ ಸಂಘಟನೆ (Foreign terrorist organization) ಎಂದು ಹೆಸರಿಸಿದ ಅಮೆರಿಕದ ನಿರ್ಧಾರವನ್ನು ವಿದೇಶಾಂಗ ಸಚಿವ ಜೈಶಂಕರ್(Foreign Minister S.Jaishankar) ಸ್ವಾಗತಿಸಿದ್ದಾರೆ.

ಈ ವಿಚಾರವಾಗಿ ಎಕ್ಸ್​ನಲ್ಲಿ ಪೊಸ್ಟ್​ ಮಾಡಿರುವ ಜೈಶಂಕರ್​, ಲಷ್ಕರ್ ಎ ತೊಯ್ಬಾ (LET)ದ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್​ ಫ್ರಂಟ್(TRF)​ ಅನ್ನು ವಿದೇಶಿ ಭಯೋತ್ವಾದಕ ಸಂಸ್ಥೆ ಮತ್ತು ವಿಶೇಷವಾಗಿ ಗೊತ್ತುಪಡಿಸಿ ಜಾಗತಿಕ ಭಯೋತ್ವಾದಕ ಎಂದು ಗೊತ್ತುಪಡಿಸಿದ್ದಕ್ಕಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮರ್ಕೊ ರೊಬಿಯೊ(Marco Rubio) ಹಾಗೂ ಅಮೆರಿಕದ ವಿದೇಶಾಂಗ ಇಲಾಖೆಯನ್ನು(US State Department) ಶ್ಲಾಘಿಸಿದ್ದಾರೆ.

ಏಪ್ರೀಲ್​ 22ರ ಉಗ್ರ ದಾಳಿಯ ಜವಾಬ್ದಾರಿಯನ್ನು TRF ಹೊತ್ತುಕೊಂಡಿದೆ. ಭಯೋತ್ವಾದನೆಗೆ ಶೂನ್ಯ ಸಹಿಷ್ಣುತೆ ಎಂದು ಜೈಶಂಕರ್​ ಬರೆದುಕೊಂಡಿದ್ದಾರೆ.

ಅಮೆರಿಕ ಹೇಳಿದ್ದೇನು?

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗುರುವಾರ (ಜುಲೈ 17) ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇಂದು ವಿದೇಶಾಂಗ ಇಲಾಖೆಯು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಅನ್ನು ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಸ್ಥೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಎಂಬ ಪಟ್ಟಿಗೆ ಸೇರಿಸುತ್ತಿದೆ ಎಂದು ಹೇಳಿದರು.

2008ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದರೆ ಅದು ಪಹಲ್ಗಾಮ್ ದಾಳಿ ಎಂದು ಇದೇ ಸಂದರ್ಭದಲ್ಲಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ಅಮೆರಿಕದ ವಿದೇಶಾಂಗ ಇಲಾಖೆ ತೆಗೆದುಕೊಂಡ ಈ ಕ್ರಮಗಳು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು, ಭಯೋತ್ಪಾದನೆಯನ್ನು ಎದುರಿಸಲು ಮತ್ತು ಪಹಲ್ಗಾಮ್ ದಾಳಿಗೆ ನ್ಯಾಯಕ್ಕಾಗಿ ಅಧ್ಯಕ್ಷ ಟ್ರಂಪ್ ಅವರ ಕರೆಯನ್ನು ತಕ್ಷಣವೇ ಜಾರಿಗೊಳಿಸಲು ಟ್ರಂಪ್ ಆಡಳಿತದ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್ 219 ಮತ್ತು ಕಾರ್ಯನಿರ್ವಾಹಕ ಆದೇಶ 13224ರ ಅಡಿಯಲ್ಲಿ, ಟಿಆರ್‌ಎಫ್ ಮತ್ತು ಅದರ ಸಂಬಂಧಿತ ಅಲಿಯಾಸ್‌ಗಳನ್ನು ಲಷ್ಕರ್-ಇ-ತೊಯ್ಬಾದ ಎಫ್‌ಟಿಒ ಮತ್ತು ಎಸ್‌ಡಿಜಿಟಿ ಎರಡರ ಪಟ್ಟಿಗೆ ಅಧಿಕೃತವಾಗಿ ಸೇರಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ರೂಬಿಯೊ ಹೇಳಿದರು. ಇದಕ್ಕೂ ಮುನ್ನ, ಪಹಲ್ಗಾಮ್​ ದಾಳಿ ಮತ್ತು ಆಪರೇಷನ್​ ಸಿಂಧೂರ ಬಗ್ಗೆ ಜಗತ್ತಿಗೆ ತಿಳಿಸಲು ಭಾರತದ ಸರ್ವಪಕ್ಷ ಸಂಸದೀಯ ನಿಯೋಗದ ಭೇಟಿಯ ಸಂದರ್ಭದಲ್ಲಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ಮತ್ತು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಗೆ ಅಮೆರಿಕ ತನ್ನ ಬಲವಾದ ಬೆಂಬಲವನ್ನು ಸೂಚಿಸಿತು. ಇದರ ಬೆನ್ನಲ್ಲೇ ಅಮೆರಿಕ ಈ ಕ್ರಮ ತೆಗೆದುಕೊಂಡಿರುವುದು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಸಿಕ್ಕ ಗೆಲುವಾಗಿದೆ.

ಪಹಲ್ಗಾಮ್​ ದಾಳಿ

ಏಪ್ರಿಲ್ 22 ರಂದು, ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರು ಪಹಲ್ಗಾಮ್‌ನ ಬೈಸರನ್ ಕಣಿವೆಗೆ ನುಗ್ಗಿ, ಧರ್ಮವನ್ನು ದೃಢಪಡಿಸಿದ ನಂತರ ಹಿಂದೂ ಪುರುಷರನ್ನು ಗುಂಡಿಕ್ಕಿ ಕೊಂದರು. ಈ ದಾಳಿಯಲ್ಲಿ 26 ಮಂದಿ ದುರಂತ ಸಾವಿಗೀಡಾದರು. ಇದಕ್ಕೆ ಪ್ರತೀಕಾರವಾಗಿ, ಆಪರೇಷನ್​ ಸಿಂಧೂರ ಹೆಸರಿನಲ್ಲಿ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳ ಮೇಲೆ ಭಾರತೀಯ ಸೇನೆ ನಿಖರವಾದ ವಾಯುದಾಳಿ ನಡೆಸಿತು. ಈ ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರು ಹತರಾದರು. ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಮುಖ ಮಿಲಿಟರಿ ಸಂಘರ್ಷ ಉಂಟಾಯಿತು. ಭಾರತವು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಸೇರಿದಂತೆ ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯವನ್ನು ಸಹ ಹಾನಿಗೊಳಿಸಿತು. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿತು.

ಅಮೆರಿಕ ಮತ್ತು ಎರಡೂ ದೇಶಗಳ ನಡುವಿನ ಚರ್ಚೆಗಳ ನಂತರ, ಟ್ರೂತ್ ಸೋಷಿಯಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಕದನ ವಿರಾಮವನ್ನು ಘೋಷಿಸಿದರು. ಆದಾಗ್ಯೂ, ಟ್ರಂಪ್ ಅವರ ಹಸ್ತಕ್ಷೇಪ ಅಥವಾ ವ್ಯಾಪಾರ ಮಾತುಕತೆಗಳನ್ನು ಕೊನೆಗೊಳಿಸುವ ಬೆದರಿಕೆಗಳಿಂದಾಗಿ ಕದನ ವಿರಾಮ ಸಂಭವಿಸಿದೆ ಎಂಬ ಅವರ ಹೇಳಿಕೆಯನ್ನು ಭಾರತ ತಿರಸ್ಕರಿಸಿತು. ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಯಾವುದೇ ಸಮಸ್ಯೆಗಳನ್ನು ಯಾವುದೇ ಬಾಹ್ಯ ಒಳಗೊಳ್ಳುವಿಕೆ ಇಲ್ಲದೆ ಎರಡು ರಾಷ್ಟ್ರಗಳ ನಡುವೆ ನೇರವಾಗಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಭಾರತ ವಾದಿಸಿತು. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ತಮ್ಮ ಭಾರತೀಯ ಸೇನಾಧಿಕಾರಿಗಳನ್ನು ಸಂಪರ್ಕಿಸಿ ಯುದ್ಧವನ್ನು ನಿಲ್ಲಿಸುವಂತೆ ವಿನಂತಿಸಿದ ನಂತರ ಗುಂಡಿನ ಚಕಮಕಿ ಕೊನೆಗೊಂಡಿತು. ಮೇ 10 ರಂದು ಎರಡೂ ಕಡೆಯವರು ಪರಸ್ಪರ ಕದನ ವಿರಾಮಕ್ಕೆ ಒಪ್ಪಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net