ಖಲಿಸ್ತಾನಿ ಉಗ್ರನ ಹತ್ಯೆಗೆ ಅಮೆರಿಕದಲ್ಲಿ ಸಂಚು ಆರೋಪ: ಭಾರತೀಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

Khalistani Terrorist
Published on

ವಾಷಿಂಗ್ಟನ್​: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ಮೂಲದ 52 ವರ್ಷದ ನಿಖಿಲ್​ ಗುಪ್ತಾ ವಿರುದ್ಧ ಯುಎಸ್​ ಜಸ್ಟೀಸ್​ ಡಿಪಾರ್ಟ್ಮೆಂಟ್​ ಪ್ರಕರಣ ದಾಖಲಿಸಿದೆ.

ಪನ್ನುನ್ ಕೊಲೆಯ ಸಂಚನ್ನು ಯುಎಸ್​ ವಿಫಲಗೊಳಿಸಿದ್ದು, ಪನ್ನುನ್ ತೊಡೆದುಹಾಕಲು ಭಾರತ ಸರ್ಕಾರ ಸಂಚಿನಲ್ಲಿ ಭಾಗಿಯಾಗಿದೆ ಎಂಬ ಕಳವಳದ ಮೇಲೆ ಯುಎಸ್​, ಭಾರತಕ್ಕೆ ಎಚ್ಚರಿಕೆ ನೀಡಿದೆ ಎಂದು ಫೈನಾನ್ಶಿಯಲ್​ ಟೈಮ್ಸ್​ ವರದಿ ಮಾಡಿದ ಒಂದು ವಾರದ ಬೆನ್ನಲ್ಲೇ ನಿಖಿಲ್​ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ಯುಎಸ್​ ಜಸ್ಟೀಸ್​ ಡಿಪಾಟ್ಮೆಂಟ್​ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ವರ್ಷದ ಆರಂಭದಲ್ಲಿ, ಭಾರತದಲ್ಲಿ ಮತ್ತು ಇತರೆಡೆಗಳಲ್ಲಿ ಗುಪ್ತಾ ಸೇರಿದಂತೆ ಇತರರೊಂದಿಗೆ ಕೆಲಸ ಮಾಡುವ ಭಾರತೀಯ ಸರ್ಕಾರಿ ಉದ್ಯೋಗಿ, ನ್ಯೂಯಾರ್ಕ್ ನಗರದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುಎಸ್​ ಪ್ರಜೆ, ವಕೀಲ ಮತ್ತು ರಾಜಕೀಯ ಕಾರ್ಯಕರ್ತನನ್ನು ಅಮೆರಿಕ ನೆಲದಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದರು ಎಂದು ಆರೋಪ ಮಾಡಿದೆ.

ಭಾರತ ಸರ್ಕಾರದ ಉದ್ಯೋಗಿ ತನ್ನನ್ನು "ಭದ್ರತಾ ನಿರ್ವಹಣೆ" ಮತ್ತು "ಗುಪ್ತಚರ" ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಫೀಲ್ಡ್ ಆಫೀಸರ್ ಎಂದು ಹೇಳಿಕೊಂಡಿದ್ದನು. ಒಂದು ವೇಳೆ ಗುಪ್ತಾ ವಿರುದ್ಧದ ಆರೋಪ ಸಾಬೀತಾದರೆ, ಕೊಲೆಗೆ ಸುಪಾರಿ ಮತ್ತು ಕೊಲೆ ಮಾಡಲು ಸಂಚು ರೂಪಿಸಿದ ಆರೋಪಗಳ ಮೇಲೆ ಕನಿಷ್ಠ 20 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಯುಎಸ್ ಅಟಾರ್ನಿ ಮ್ಯಾಥ್ಯೂ ಜಿ ಓಲ್ಸೆನ್ ಹೇಳಿದ್ದಾರೆ.

ಅಮೆರಿಕ ಅಧಿಕಾರಿಗಳ ಪ್ರಕಾರ ಹತ್ಯೆಯನ್ನು ನಡೆಸಲು ಒಬ್ಬ ಹಂತಕನಿಗೆ $100,000 ಪಾವತಿಸಲು ಗುಪ್ತಾ ಒಪ್ಪಿಕೊಂಡಿದ್ದನು. 2023ರ ಜೂನ್ 9ರಂದು ಈಗಾಗಲೇ $15,000 ಮುಂಗಡ ಪಾವತಿಯನ್ನು ಮಾಡಲಾಗಿತ್ತು. ಪನ್ನುನ್​ನನ್ನು ನ್ಯೂಯಾರ್ಕ್ ನಗರದಲ್ಲೇ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಪನ್ನುನ್​, ಭಾರತದಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಗುಂಪಾಗಿರುವ ಸಿಖ್‌ಗಳಿಗೆ ಸಾರ್ವಭೌಮ ರಾಜ್ಯವನ್ನು ಸ್ಥಾಪಿಸಲು ಸಾರ್ವಜನಿಕವಾಗಿ ಪ್ರತಿಪಾದಿಸಿದ ಭಾರತೀಯ ಮೂಲದ ಯುಎಸ್ ಪ್ರಜೆ ಎಂದು ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆ ಡಾಮಿಯನ್ ವಿಲಿಯಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪ ಬಂದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಭಾರತ, ಅಮೆರಿಕದ ನೆಲದಲ್ಲಿ ಸಿಖ್ ಉಗ್ರರನ್ನು ಕೊಲ್ಲಲು ಸಂಚು ರೂಪಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿರುವುದಾಗಿ ಹೇಳಿದೆ. ಈ ವಿಷಯದ ಎಲ್ಲಾ ಸಂಬಂಧಿತ ಅಂಶಗಳನ್ನು ಪರಿಶೀಲಿಸಲು ಭಾರತವು ನವೆಂಬರ್ 18 ರಂದು ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚನೆ ಮಾಡಿದೆ.

ಯಾರು ಈ ಪನ್ನುನ್​

ಪಂಜಾಬ್​ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್​, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್​ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2021ರ ಫೆಬ್ರವರಿ 3ರಂದು ಪನ್ನುನ್​ ವಿರುದ್ಧ ಎನ್​ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್​ 29ರಂದು ಸರ್ಕಾರ ಘೋಷಣೆ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net