

ಸಾಗರ: ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ದೇವರಾಜ ಅರಸು ಅವರು ನೀಡಿದ ಕೊಡುಗೆ ಸದಾಕಾಲ ನೆನಪಿನಲ್ಲಿ ಉಳಿಯುವಂಥದ್ದು ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.
ಸಾಗರದ ದೇವರಾಜ ಅರಸು ಕಲಾಭವನದಲ್ಲಿ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜಯಂತಿ ಉದ್ಘಾಟಿಸಿ ಮಾತನಾಡಿದರು.
ಉಳುವವನೇ ಹೊಲದೊಡೆಯ ಕಾಯ್ದೆಯಿಂದ ಲಕ್ಷಾಂತರ ರೈತ ಕುಟುಂಬಗಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಯಿತು. ಇಂದಿನ ರಾಜಕಾರಣಿಗಳು ಅರಸು ಅವರ ಆಡಳಿತ ಶೈಲಿಯನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಸಾಗರ ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, 1974ರಲ್ಲಿ ದೇವರಾಜ ಅರಸು ಸಿಎಂ ಆಗಿದ್ದ ಸಂದರ್ಭ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದು ಲಕ್ಷಾಂತರ ಗೇಣಿ ರೈತರಿಗೆ ಭೂಮಿ ಹಕ್ಕು ಸಿಕ್ಕಿತು. ನಾವು ರೈತರ ಮನೆಮನೆಗೆ ಹೋಗಿ ಅವರ ಮನವೊಲಿಸಿ ಅರ್ಜಿ ಹಾಕಿಸಿ ಅವರಿಗೆ ಭೂಮಿ ದೊರಕಿಸಿಕೊಟ್ಟ ಸಂತೃಪ್ತಿ ನಮಗಿದೆ ಎಂದು ಹೇಳಿದರು.
ರಂಗಕರ್ಮಿ ಪರಶುರಾಮ ಸೂರನಗದ್ದೆ, ಎಸ್‌ಎಸ್‌ಎಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಡಿ.ದೇವರಾಜ ಅರಸು ಅವರು ಕುರಿತು ಉಪನ್ಯಾಸಕ ಡಾ. ರತ್ನಾಕರ ಸಿ. ಕುನುಗೋಡು ಉಪನ್ಯಾಸ ನೀಡಿದರು. ತಹಸೀಲ್ದಾರ್ ಎಚ್.ಜೆ.ರಶ್ಮಿ, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ರಾಜೇಶ್ವರಿ, ಸುರೇಶ್ ಸಹಾನೆ, ಪರಮೇಶ್ವರ ದೂಗೂರು, ಮಂಜಪ್ಪ. ಹೊಳಿಯಪ್ಪ, ಮಹೇಶ್ ಇತರರಿದ್ದರು.