

ಎದೆ, ಸೊಂಟ ಮತ್ತು ಬೆನ್ನಿಗೆ ವ್ಯಾಯಾಮ ನೀಡುವ ಹಾಗೂ ಕಾಲಿನ ನರಗಳಿಗೆ ಶಕ್ತಿ ನೀಡುವ ಯೋಗಾಸನವೆಂದರೆ 'ಊರ್ಧ್ವಮುಖ ಶ್ವಾನಾಸನ'. ಈ ಆಸನದ ಅಭ್ಯಾಸದಿಂದ ಶ್ವಾಸಕೋಶಗಳ ಮತ್ತು ಥೈರಾಯ್ಡ್ ಗ್ರಂಥಿಯ ಆರೋಗ್ಯ ಹೆಚ್ಚುತ್ತದೆ.
ಪ್ರಯೋಜನಗಳು: ಶ್ವಾಸಕೋಶ ಮತ್ತು ಎದೆಯ ಇತರ ಭಾಗಗಳು ಎಳೆತಕ್ಕೆ ಒಳಗಾಗಿ ಶ್ವಾಸಕೋಶಗಳಿಗೆ ಸಮರ್ಪಕವಾಗಿ ವಾಯುಸಂಚಾರವಾಗುತ್ತದೆ. ಇದರಿಂದ ಅವು ಬಲಿಷ್ಠಗೊಂಡು, ಅಸ್ತಮಾ ನಿಯಂತ್ರಣವಾಗುತ್ತದೆ. ದೇಹದ ಎಲ್ಲಾ ಭಾಗಗಳು ಎಳೆತಕ್ಕೆ ಒಳಗಾಗಿ, ಥೈರಾಯ್ಡ್ ಗ್ರಂಥಿಯ ಆರೋಗ್ಯ ವರ್ಧಿಸುತ್ತದೆ. ಸೊಂಟದ ಭಾಗ ಬಲಿಷ್ಠವಾಗುತ್ತದೆ. ಬೆನ್ನುಹುರಿಗೆ ಆರೋಗ್ಯ ಒದಗಿಬರುತ್ತದೆ. ಬೆನ್ನಿನ ಬಿಗಿತ, ಸಯಾಟಿಕ ನಿಯಂತ್ರಣವಾಗುತ್ತವೆ.
ಅಭ್ಯಾಸಕ್ರಮ: ಜಮಖಾನದ ಮೇಲೆ ಮಕರಾಸನದಲ್ಲಿ ಮಲಗಬೇಕು. ಕಾಲುಗಳನ್ನು ಜೋಡಿಸಬೇಕು, ಪಾದಗಳ ಹತ್ತಿರ ಸ್ವಲ್ಪ ಅಂತರ ಇಟ್ಟುಕೊಳ್ಳಬೇಕು. ಭುಜಗಳ ಕೆಳಗೆ ಎರಡೂ ಕೈಗಳನ್ನು ನೆಲಕ್ಕೆ ಒತ್ತಿಡಬೇಕು. ಹಣೆ ನೆಲಕ್ಕೆ ಒತ್ತಿ, ಉಸಿರನ್ನು ತೆಗೆದುಕೊಳ್ಳುತ್ತಾ, ತಲೆಯನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. ಕೈಗಳನ್ನು ನೇರವಾಗಿಸಬೇಕು. ಪೃಷ್ಠದ ಭಾಗ ಮತ್ತು ಮೊಣಕಾಲುಗಳು ನೇರವಾಗಿರಲಿ, ಅಂಗೈ ಮತ್ತು ಬೆರಳುಗಳು ದೇಹದ ಭಾರವನ್ನು ಹೊರಲಿ. ತಲೆ ಮತ್ತು ಬೆನ್ನನ್ನು ಸಾಧ್ಯವಾದಷ್ಟೂ ಹಿಂದಕ್ಕೆ ತರಲು ಪ್ರಯತ್ನಿಸಿ. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. 'ಸ್ಥಿರಂ, ಸುಖಂ, ಆಸನಂ' ಎನ್ನುವಂತೆ ಸ್ವಲ್ಪ ಹೊತ್ತು ಹಾಯಾಗಿರಬೇಕು. ಆಮೇಲೆ ಉಸಿರು ಬಿಡುತ್ತಾ ದೇಹವನ್ನು ಕೆಳಗಿಳಿಸಿ ವಿಶ್ರಮಿಸಬೇಕು.
ತೀವ್ರ ಕುತ್ತಿಗೆ ನೋವು, ಮಣಿಕಟ್ಟು ನೋವು ಅಥವಾ ಸ್ಲಿಪ್ ಡಿಸ್ಕ್ ಸಮಸ್ಯೆ ಇದ್ದವರು ಈ ಆಸನವನ್ನು ಮಾಡಬಾರದು. ಗುರುಮುಖೇನ ಕಲಿತು ಮಾಡುವುದು ಉತ್ತಮ.