

ಐಎಎಸ್ ಅಧಿಕಾರಿ ಆಗಬೇಕೆಂಬ ಅಪ್ಪನ ಆಸೆಯನ್ನು ಈಡೇರಿಸಿರುವ ಕೆ.ಆರ್.ಕಲ್ಪಶ್ರೀ ಶಿರಾ ತಾಲೂಕು ಗೌಡಗೆರೆ ಹೋಬಳಿ ಕಂದಾಯ ವೃತ್ತ ನಿರೀಕ್ಷಕ ವೈ.ಬಿ.ಕಾಂತಪ್ಪ, ಬಿ.ನಾಗರತ್ನಮ್ಮ ದಂಪತಿ ಪುತ್ರಿ. 2ನೇ ಪ್ರಯತ್ನದಲ್ಲಿ 291ನೇ ರ್ಯಾಂಕ್ಗಳಿಸಿದ್ದಾರೆ. ಪಿಯುಸಿ ಬಳಿಕ ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದರು. ತಂದೆ ಆಸೆಯಂತೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರು.
ನನ್ನಂತೆ ಸಣ್ಣಪುಟ್ಟ ಸರ್ಕಾರಿ ನೌಕರಿ ಹಿಡಿದು ಕಷ್ಟಪಡಬೇಡ, ಐಎಎಸ್ ಅಧಿಕಾರಿ ಆಗು. ಅದಕ್ಕಾಗಿ ಕಷ್ಟಪಟ್ಟು ಓದಬೇಡ, ಇಷ್ಟಪಟ್ಟು ಓದು ಅಂತಾ ಹೇಳ್ತಿದೆ. ಎಂದೂ ಅವಳ ಮೇಲೆ ಒತ್ತಡ ಹೇರಿರಲಿಲ್ಲ. ಮಗಳ ಸಾಧನೆ ಹೆಮ್ಮೆ ಎನಿಸಿದೆ. | ವೈ.ಬಿ.ಕಾಂತಪ್ಪ ಕಂದಾಯ ವೃತ್ತ ನಿರೀಕ್ಷಕ
ಗಜಾನನ ಬಾಳೆಗೆ 319ನೇ ರ್ಯಾಂಕ್: ಇಂಜಿನಿಯರಿಂಗ್ ಪದವಿ ಮುಗಿಸಿರುವ ಗಜಾನನ ಬಾಳೆ ಈ ಮೊದಲು 2019 ಯುಪಿಎಸ್ಸಿ ಪರೀಕ್ಷೆಯಲ್ಲಿ 663ನೇ ರ್ಯಾಂಕ್ ಪಡೆದಿದ್ದರು. ಸದ್ಯ ಇಂಡಿಯಲ್ ಪೋಸ್ಟಲ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯುಪಿಎಸ್ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಷಯ ತೆಗೆದುಕೊಂಡು, 319 ನೇ ರ್ಯಾಂಕ್ ಪಡೆದಿದ್ದಾರೆ.
92ನೇ ರ್ಯಾಂಕ್ ಪಡೆದಿರುವ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ಪಟ್ಟಣದ ಯುವ ವೈದ್ಯ ಡಾ.ಬೆನಕ ಪ್ರಸಾದ್ ನಾಗರಕಟ್ಟೆ ಗ್ರಾಮದ ದಿವಂಗತ ಎಚ್.ಜಯಪ್ಪ, ಪಂಕಜ ದಂಪತಿ ಮಗ. ಪ್ರಸ್ತುತ ಬೆಂಗಳೂರಿನ ಸಿಎಸ್ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವ ಹಿಸುತ್ತಿರುವ ಡಾ.ಬೆನಕ, ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಹೊಸದುರ್ಗದ ಸಂತ ಅಂಥೋಣಿ ಶಾಲೆಯಲ್ಲಿ 1ರಿಂದ 7, ಮಂಗಳೂರು ಬಳಿಯ ಆಳಕೆಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್, ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ದ್ದಾರೆ. ವೈದ್ಯವೃತ್ತಿ ಜತೆಯಲ್ಲಿಯೇ ಓದುವ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಅಪ್ಪ ಕಂಡ ಕನಸು, ಅಮ್ಮನ ಭಾವನಾತ್ಮಕ ಬೆಂಬಲದಿಂದ ಈ ಸಾಧನೆ ಮಾಡಿದ್ದೇನೆ. ನನ್ನ ಗೆಲುವನ್ನು ದೈಹಿಕವಾಗಿ ನಮ್ಮೊಂದಿಗೆ ಇಲ್ಲದ ಅಪ್ಪನ ಪಾದಕ್ಕೆ ಅರ್ಪಿಸುತ್ತೇನೆ. ಅವರು ಇದಿದ್ದರೆ ನನಗಿಂತಲೂ ಹೆಚ್ಚು ಖುಷಿ ಪಡುತ್ತಿದ್ದರು. | ಡಾ.ಬೆನಕ ಪ್ರಸಾದ್
ಕಾರವಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಅಕ್ಕಸಾಲಿಗ ರಾಮಚಂದ್ರ ಶೇಟ್ ಅವರ ಪುತ್ರ ದೀಪಕ ಶೇಟ್ 311ನೇ ರ್ಯಾಂಕ್ ಪಡೆದಿದ್ದಾರೆ. ದೀಪಕ್ ಮಂಕಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಶಿರಸಿಯ ಮುರಾರ್ಜಿ ದೇಸಾಯಿ ಶಾಲೆಯಲ್ಲಿ 6ನೇ ತರಗತಿಯಿಂದ ಓದಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದರು. ಮೂಡಬಿದರೆಯ ಆಳ್ವಾಸ್ನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ, ಬೆಂಗಳೂರಿನ ಆರ್.ವಿ. ಕಾಲೇಜ್ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದರು.
ವಿಟ್ಲ(ದ.ಕ.): ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಕಲಿತ ಮೂವರು ವಿದ್ಯಾರ್ಥಿಗಳು 2021ರ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹೊಸದುರ್ಗ ತಾಲೂಕಿನ ನಾಗರಕಟ್ಟೆ ನಿವಾಸಿ ಜಯಣ್ಣ ಹಾಗೂ ಪಂಕಜಾ ದಂಪತಿ ಪುತ್ರ ಡಾ.ಬೆನಕ ಪ್ರಸಾದ್ 92ನೇ ಸ್ಥಾನ ಪಡೆದಿದ್ದು, 2007ರಿಂದ 2010ರವರೆಗೆ ಪ್ರೌಢ ಶಿಕ್ಷಣವನ್ನು ಅಳಿಕೆಯಲ್ಲಿ ಪೂರೈಸಿದ್ದರು. ದಾವಣಗೆರೆ ನಿವಾಸಿ ಬಸವರಾಜ್ ಪಾಟೀಲ್ ಹಾಗೂ ಅನ್ನಪೂರ್ಣ ದಂಪತಿ ಪುತ್ರ ನಿಖಿಲ್ ಬಿ.ಪಾಟೀಲ್ 139ನೇ ಸ್ಥಾನ ಪಡೆದಿದ್ದು, 2008ರಿಂದ 2013ವರೆಗೆ 8ನೇ ತರಗತಿಯಿಂದ ಪಿಯುಸಿವರೆಗೆ ಅಳಿಕೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ಬೀದರ್ ಮೂಲದ ಡಾ.ವಿನಯ ಕುಮಾರ್ ಗಡ್ಗೆ 151ನೇ ಸ್ಥಾನ ಗಳಿಸಿದ್ದು, 2008ರಿಂದ 2010ರವರೆಗೆ ಪಿಯುಸಿ ಶಿಕ್ಷಣವನ್ನು ಅಳಿಕೆಯಲ್ಲಿ ಪೂರೈಸಿದ್ದರು.
ಶಿರಸಿ ತಾಲೂಕಿನ ಜಾನ್ಮನೆ ಹಣಗಾರಿನ ನಿವೃತ್ತ ಪಶುವೈದ್ಯ ರಮಾಕಾಂತ ಹೆಗಡೆ ಮತ್ತು ಶಿಕ್ಷಕಿ ಗೀತಾ ದಂಪತಿಯ ಪುತ್ರ ಮನೋಜ ಹೆಗಡೆ ಯುಪಿಎಸ್ಸಿ ಪರೀಕ್ಷೆಯಲ್ಲಿ 213ನೇ ರ್ಯಾಂಕ್ ಗಳಿಸಿ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಧಾರವಾಡದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಪದವಿ ಮುಗಿಸಿ, ಆನಂತರ ಐಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ನಾಲ್ಕು ಬಾರಿ ಪರೀಕ್ಷೆಯಲ್ಲಿ ಕೊನೇ ಹಂತದಲ್ಲಿ ಸ್ಥಾನ ಕೈತಪ್ಪಿದರೂ ಎದೆಗುಂದದೆ ಪರಿಶ್ರಮದಿಂದ 5ನೇ ಬಾರಿ ಗುರಿ ತಲುಪಿದ್ದಾರೆ.
ಇಂಡಿಯಾ ಫಾರ್ ಐಎಎಸ್ ತರಬೇತಿ: ಇಂಡಿಯಾ ಫಾರ್ ಐಎಎಸ್ ಬೆಂಗಳೂರು ಅಕಾಡೆಮಿಯಿಂದ ತರಬೇತಿ ಪಡೆದ 18 ಮಂದಿ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯು 18 ರ್ಯಾಂಕ್ಗಳನ್ನು ಗಳಿಸುವುದರ ಮೂಲಕ ಮುಂಚೂಣಿಯಲ್ಲಿದೆ. ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಇನ್ಸೈಟ್ ಐಎಎಸ್ ಬೆಂಗಳೂರು ಅಕಾಡೆಮಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳೂ ಯುಪಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಗಂಗಾವತಿಯ ಅಪೂರ್ವ ಬಾಸೂರ ಯುಪಿಎಸ್ಸಿಯಲ್ಲಿ 191ನೇ ರ್ಯಾಂಕ್ ಪಡೆದಿದ್ದಾರೆ. ಇವರು ಎಸ್ಸೆಸ್ಸೆಲ್ಸಿವರೆಗೆ ಗಂಗಾವತಿ ಸೆಂಟ್ ಪಾಲ್ಸ್ ಶಾಲೆಯಲ್ಲಿ ಓದಿದ್ದಾರೆ. ನಂತರ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನಲ್ಲಿ ಪಿಯು ಪೂರ್ಣಗೊಳಿಸಿ, ಬೆಂಗಳೂರಿನ ಆರ್ವಿ ಡೆಂಟಲ್ ಕಾಲೇಜಿನಲ್ಲಿ ಡೆಂಟಿಸ್ಟ್ ಪದವಿ (ಬಿಡಿಎಸ್) ಪಡೆದಿದ್ದಾರೆ. ಐಎಎಸ್ ಕನಸು ಹೊತ್ತಿದ್ದ ಇವರು 2018ರಲ್ಲಿ ದೆಹಲಿಗೆ ತೆರಳಿ ಎರಡು ವರ್ಷ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದಿದ್ದಾರೆ. ಈ ಸಮಯದಲ್ಲಿ ಮಗಳ ಪ್ರಯತ್ನಕ್ಕೆ ತಾಯಿ ಬೆನ್ನೆಲುಬಾಗಿದ್ದಾರೆ. 2020ರಲ್ಲಿ ಮೊದಲ ಬಾರಿ ಪರೀಕ್ಷೆ ಎದುರಿಸಿದರೂ ಪ್ರಿಲಿಮ್ಸ್ನಲ್ಲಿ ಪಾಸಾಗಿರಲಿಲ್ಲ. ಧೃತಿಗೆಡದೆ ನಿರಂತರ ಅಧ್ಯಯನದಿಂದ ಎರಡನೇ ಪ್ರಯತ್ನದಲ್ಲಿ ದೇಶಕ್ಕೆ 191ನೇ ರ್ಯಾಂಕ್ ಪಡೆದಿದ್ದಾರೆ. ಸಾರ್ವಜನಿಕ ಆಡಳಿತ ವಿಷಯದಲ್ಲಿ ಅಪೂರ್ವ ಪರೀಕ್ಷೆ ಬರೆದಿದ್ದು, ಜನಸೇವೆ ಮಾಡ ಬೇಕೆಂಬ ಕನಸು ಹೊತ್ತಿದ್ದಾರೆ. ‘ಮಗಳ ಸಾಧನೆಯಿಂದ ತುಂಬ ಸಂತೋಷವಾಗಿದೆ’ ಎನ್ನುತ್ತಾರೆ ಅಪೂರ್ವ ತಂದೆ ಶ್ರೀಕಾಂತ ಬಾಸೂರ. ಸದ್ಯ ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ನಿಖಿಲ್ ಪಾಟೀಲ ಯುಪಿಎಸ್ಸಿಯಲ್ಲಿ 139ನೇ ರ್ಯಾಂಕ್ ಪಡೆದಿದ್ದಾರೆ. ತಂದೆ ಬಸವರಾಜ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ವಿುಕ ಅಧಿಕಾರಿಯಾಗಿದ್ದು, ತಾಯಿ ಅನ್ನಪೂರ್ಣ ಗೃಹಿಣಿ. ಗೋಕಾಕ್ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಿಖಿಲ್, ಪ್ರೌಢ ಶಿಕ್ಷಣ ಮತ್ತು ಪಿಯುಸಿ ವ್ಯಾಸಂಗವನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯಲ್ಲಿರುವ ಸತ್ಯಾಸಾಯಿ ಲೋಕ ಸೇವಾ ಸಂಸ್ಥೆಯಲ್ಲಿ ಪೂರ್ಣಗೊಳಿಸಿ ದ್ದಾರೆ. ನಂತರ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.
ಸತತ ಪರಿಶ್ರಮದಿಂದ ಎಲ್ಲವೂ ಸಾಧ್ಯ. ನಾನೂ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಎದೆಗುಂದದೆ ಅಭ್ಯರ್ಥಿಗಳು ಪರೀಕ್ಷೆಯನ್ನೇ ಗುರಿಯನ್ನಾಗಿಟ್ಟುಕೊಂಡು ವ್ಯಾಸಂಗ ಮಾಡಿದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ. | ನಿಖಿಲ್ ಪಾಟೀಲ
‘ಸಾಲದ ಹೊರೆ ಹೊರಲಾರದೆ ಅಪ್ಪ ನಮ್ಮನ್ನೆಲ್ಲ್ಲ ಬಿಟ್ಟುಹೋದರು. ಕಣ್ಮರೆಯಾದ ಅಪ್ಪನ ನಗುಮೊಗವನ್ನು ರೈತರ ಸೇವೆ ಮಾಡಿ ಅವರಲ್ಲಿ ಕಾಣುವ ನನ್ನ ಕನಸು ಈಗ ನನಸಾಗಿದೆ’ ಎನ್ನುವ ಎಂ.ಅರುಣಾ 6ನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ 308ನೇ ರ್ಯಾಂಕ್ಗಳಿಸಿದ್ದಾರೆ. ಶಿರಾ ತಾಲೂಕು ತಡಕಲೂರಿನ ಮಹಾಲಿಂಗಪ್ಪ-ವಿಶಾಲಾಕ್ಷಮ್ಮ ದಂಪತಿಯ ಮೂರನೇ ಪುತ್ರಿ ಅರುಣಾ ರೈತ ಕುಟುಂಬ ಹಿನ್ನೆಲೆಯವರು. ಇನ್ಸ್ಟ್ರು ಮೆಂಟೇಷನ್ ಟೆಕ್ನಾಲಜಿ ಕೋರ್ಸ್ ಮುಗಿಸಿ ಬಳಿಕ ಟೆಸ್ಕೋ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. 5 ಬಾರಿ ಯುಪಿಎಸ್ಸಿ ಪ್ರಯತ್ನ ಮಾಡಿದರೂ ಫಲಕೊಡಲಿಲ್ಲ. ಹಾಗಾಗಿ, ಗ್ರಾಮೀಣ ಮಕ್ಕಳಿಗೆ ಮಾರ್ಗದರ್ಶನ ನೀಡಲು ಸ್ನೇಹಿತರೊಡಗೂಡಿ ಐಎಎಸ್ ಅಕಾಡೆಮಿ ಆರಂಭಿಸಿದರು. ಇದಕ್ಕೆ ಸಹೋದರ ದಿನೇಶ್ ಕುಮಾರ್ ಬೆಂಬಲವಾಗಿ ನಿಂತರು. ಇದರ ನಡುವೆ 6ನೇ, ಕೊನೆಯ ಪ್ರಯತ್ನ ಅವರ ಐಎಎಸ್ ಕನಸು ಕೈಗೂಡುವಂತೆ ಮಾಡಿದೆ.
ಬಿ.ಇ. ಓದುತ್ತಿರುವಾಗ ನನ್ನ ತಂದೆ ಆತ್ಮಹತ್ಯೆ ಮಾಡಿ ಕೊಂಡರು. ಇದು ನನ್ನ ಮನಸಿಗೆ ಆಘಾತ ತಂದಿದ್ದು ಇದರಿಂದ ಹೊರಬಂದ ಬಳಿಕ ರೈತರ ಆತ್ಮಹತ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಏನಾದರೂ ಮಾಡಲು ಮನದಲ್ಲೇ ಸಂಕಲ್ಪ ಮಾಡಿಯುಪಿಎಸ್ಸಿ ಕಡೆ ಗಮನಹರಿಸಿದೆ. | ಎಂ.ಅರುಣಾ
ಹೊಸದುರ್ಗ ಪಟ್ಟಣದ ಯುವಕ ಡಿ.ಎಚ್.ವಿನಯ್, ಆರನೇ ಪ್ರಯತ್ನದಲ್ಲಿ 352ನೇ ರ್ಯಾಂಕ್ ಪಡೆದಿದ್ದಾರೆ. ಮೆಕಾನಿಕಲ್ ಇಂಜಿನಿಯರ್ ಪದವಿಧರರಾದ ವಿನಯ್, ಪಟ್ಟಣದ ನಿವಾಸಿಗಳಾದ ನಿವೃತ್ತ ಉಪನ್ಯಾಸಕ ಡಿ.ಎಚ್.ಹೊರಕೆರಿಯಪ್ಪ, ನಿವೃತ್ತ ಮುಖ್ಯಶಿಕ್ಷಕಿ ರೇಖಾ ದಂಪತಿ ಪುತ್ರ. ಹೊಸದುರ್ಗದ ಜ್ಞಾನವಾಹಿನಿ ಶಾಲೆಯಲ್ಲಿ 1ರಿಂದ 5, ಹಿರಿಯೂರು ತಾಲೂಕು ಉಡುವಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ 6 ರಿಂದ 12ನೇ ತರಗತಿ ಓದಿದ್ದಾರೆ. ಸುರತ್ಕಲ್ನ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿಕೆ) ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ನಂತರ ಭಾರತ ಸರ್ಕಾರದ ಕೋಲ್ ಇಂಡಿಯಾ ಕಂಪನಿಯಲ್ಲಿ ದೊರೆತ ಉದ್ಯೋಗವನ್ನು ತ್ಯಜಿಸಿ ಯುಪಿಎಸ್ಸಿ ಪರೀಕ್ಷೆಯ ಮೇಲೆ ಗಮನ ಕೇಂದ್ರೀಕರಿಸಿದ್ದರು.
ಗ್ರಾಮೀಣ ಪ್ರತಿಭೆ: ಕೊಡಗಿನ ಮುಂಡಂಡ ರಾಜೇಶ್ 222ನೇ ರ್ಯಾಂಕ್ ಪಡೆದಿದ್ದಾರೆ. ನಾಪೋಕ್ಲು ಸಮೀಪದ ನೆಲಜಿ ನಿವಾಸಿ ಯಾಗಿರುವ ಪೂವಯ್ಯ, ಸುಧಾ ಅವರ ಪುತ್ರ ರಾಜೇಶ್, ಮೆಕಾನಿಕಲ್ ಇಂಜಿನಿ ಯರ್ನಲ್ಲೂ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಐಎಎಸ್ ಕೋಚಿಂಗ್ ನೀಡುತ್ತ, ಪರೀಕ್ಷೆ ಬರೆದು ರಾಜೇಶ್ ಉತ್ತೀರ್ಣರಾಗಿದ್ದಾರೆ.
ಐದನೇ ಪ್ರಯತ್ನದಲ್ಲಿ ಪಾಸು: ಇಂಜಿನಿಯರಿಂಗ್ ಪದವಿ ಮುಗಿಸಿರುವ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ 5ನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ. ಅದಕ್ಕೂ ಮೊದಲು ಯುಪಿಎಸ್ಸಿ ಎರಡು ಮುಖ್ಯ ಪರೀಕ್ಷೆಗಳನ್ನು ಪಾಸಾಗಿದ್ದರು. ಆದರೆ, ಸಂದರ್ಶನದಲ್ಲಿ ವಿಫಲರಾಗಿದ್ದರು. ಈ ಬಾರಿ ಸಂದರ್ಶನದಲ್ಲಿಯೇ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ವಿಜಯಪುರ ನಗರದ ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಸಿದ್ದಪ್ಪ ಗೋಟ್ಯಾಳರ ಹಿರಿಯ ಮಗಳು ಅಶ್ವಿನಿ 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ 625ನೇ ರ್ಯಾಂಕ್ ಪಡೆದಿದ್ದರು. ಇದೀಗ ಎರಡನೇ ಮಗಳು ಸವಿತಾ ಗೋಟ್ಯಾಳ 479ನೇ ಸ್ಥಾನ ಪಡೆದಿದ್ದಾರೆ. ಸವಿತಾ ಪ್ರಸ್ತುತ ದೆಹಲಿಯಲ್ಲಿ ಟೆಲಿಕಾಂ ಅಕೌಂಟ್ಸ್ ಮತ್ತು ಫೈನಾನ್ಸ್ ಸರ್ವಿಸ್ ತರಬೇತಿಯಲ್ಲಿದ್ದಾರೆ. ಮೊದಲೆರಡು ಯತ್ನಗಳಲ್ಲಿ ಪ್ರಿಲಿಮ್್ಸ ಪಾಸ್ ಮಾಡಲಾಗಲಿಲ್ಲ. 2020ರಲ್ಲಿ ಮೂರನೇ ಬಾರಿ ಪ್ರಿಲಿಮ್್ಸ, ಮೇನ್ಸ್ ಮತ್ತು ಸಂದರ್ಶನ ಎಲ್ಲವೂ ಒಟ್ಟಿಗೇ ಪಾಸ್ ಮಾಡಿದ್ದರು. ಇದೀಗ ಮತ್ತೊಮ್ಮೆ ಆ ಸಾಧನೆ ಮಾಡಿದ್ದಾರೆ.