

ನವದೆಹಲಿ: ಕೋವಿಡ್ 19 ಕಾರಣಕ್ಕೆ ಅಕ್ಟೋಬರ್ 4ಕ್ಕೆ ನಿಗದಿಮಾಡಿರುವ 2020ನೇ ಸಾಲಿನ ಸಿವಿಲ್ ಸರ್ವೀಸ್ ಪ್ರಿಲಿಮ್ಸ್ ಎಕ್ಸಾಂ ಮುಂದೂಡಲಾಗದು ಎಂದು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಸೋಮವಾರ ಸುಪ್ರೀಂ ಕೋರ್ಟ್ಗೆ ಸ್ಪಷ್ಟಪಡಿಸಿದೆ. ನಾಗರಿಕ ಸೇವಾ ಪರೀಕ್ಷಾರ್ಥಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಯುಪಿಎಸ್ಸಿ ಈ ಹೇಳಿಕೆ ನೀಡಿದೆ.
ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಈ ಕೇಸ್ನ ವಿಚಾರಣೆ ನಡೆಸಿದ್ದು, ನಾಳೆಯೊಳಗೆ ಅಫಿಡವಿಟ್ ಸಲ್ಲಿಸುವುದಕ್ಕೆ ತಿಳಿಸಿದೆ. ಅಲ್ಲದೆ, ಪರೀಕ್ಷೆ ಮುಂದೂಡಲಾಗದೇ ಇರುವುದಕ್ಕೆ ಕಾರಣ ನೀಡಬೇಕು ಎಂದೂ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ನಡೆಸುವುದಾಗಿ ತಿಳಿಸಿದೆ.
ಈ ಪರೀಕ್ಷೆ ಈ ಹಿಂದೆ ಮೇ 31ಕ್ಕೆ ನಿಗದಿಯಾಗಿತ್ತು. ಆದರೆ, ಕೋವಿಡ್ 19 ಸೋಂಕಿನ ಕಾರಣ ಅಕ್ಟೋಬರ್ 4ಕ್ಕೆ ಮರುನಿಗದಿ ಮಾಡಲಾಗಿದೆ. ದೂರು ಅರ್ಜಿಯ ಪ್ರಕಾರ ಏಳು ಗಂಟೆಗಳ ಅವಧಿಯ ಆಫ್ ಲೈನ್ ಎಕ್ಸಾಂ ಅನ್ನು ದೇಶದ ವಿವಿಧ ನಗರಗಳಲ್ಲಿರುವ 72 ಕೇಂದ್ರಗಳಲ್ಲಿ 6 ಲಕ್ಷ ಆಕಾಂಕ್ಷಿಗಳು ಬರೆಯಲಿದ್ದಾರೆ. (ಏಜೆನ್ಸೀಸ್)