ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್​​​; ನ್ಯಾಯಾಲಯ ಹೇಳಿದಿಷ್ಟು.. | Puja Khedkar

Untitled design - 2024-12-23T153000.772
Published on

ನವದೆಹಲಿ: ವಂಚನೆ, ಒಬಿಸಿ ಮತ್ತು ಅಂಗವಿಕಲ ಕೋಟಾದ ಪ್ರಯೋಜನಗಳನ್ನು ತಪ್ಪಾಗಿ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್(Puja Khedkar) ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ(ಡಿಸೆಂಬರ್​ 23) ತಿರಸ್ಕರಿಸಿದೆ. ಪೂಜಾ ಖೇಡ್ಕರ್ ಸಂಚು ರೂಪಿಸಿ ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಅವರಿದ್ದ ಪೀಠ ಹೇಳಿದೆ.

ಈ ಹಿಂದೆ ಪೂಜಾ ಖೇಡ್ಕರ್​​​​ಗೆ ನೀಡಲಾಗಿದ್ದ ಮಧ್ಯಂತರ ಬಂಧನ ರಕ್ಷಣೆಯನ್ನೂ ನ್ಯಾಯಾಲಯ ತೆಗೆದುಹಾಕಿದೆ. ಆಗಸ್ಟ್ ತಿಂಗಳಲ್ಲಿ ಪೂಜಾ ಖೇಡ್ಕರ್ ಅವರಿಗೆ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆ ನೀಡಲಾಗಿತ್ತು. ಜುಲೈ 31 ರಂದು UPSC, ಖೇಡ್ಕರ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿತು ಮತ್ತು ಆಯೋಗದ ಎಲ್ಲಾ ಮುಂದಿನ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಅವರನ್ನು ಶಾಶ್ವತವಾಗಿ ಡಿಬಾರ್ ಮಾಡಿದೆ. ನಾಗರಿಕ ಸೇವೆಗಳ ಪರೀಕ್ಷೆ-2022 ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯುಪಿಎಸ್​ಸಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿತ್ತು.

ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯವು ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ, ಪ್ರಕರಣದ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಸಂಪೂರ್ಣ ನಿಷ್ಪಕ್ಷಪಾತದಿಂದ ತನಿಖೆ ನಡೆಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿತ್ತು. ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಖೇಡ್ಕರ್ ಪ್ರಶ್ನಿಸಿದ್ದರು.

ಆ ನಕಲಿ ದಾಖಲೆಗಳನ್ನು ಪಡೆಯಲು ಪೂಜಾ ಅವರ ಕುಟುಂಬವು ಅಧಿಕಾರಿಗಳೊಂದಿಗೆ ಶಾಮೀಲಾಗಿರುವ ಸಾಧ್ಯತೆ ಹೆಚ್ಚು ಎಂದು ನ್ಯಾಯಾಲಯ ಹೇಳಿದೆ. ತನಿಖೆಯನ್ನು ಕುಶಲತೆಯಿಂದ ನಿರ್ವಹಿಸುವ ಪೂಜಾ ಅವರ ಸಾಮರ್ಥ್ಯವನ್ನು ಉಲ್ಲೇಖಿಸಿದ ನ್ಯಾಯಾಲಯ, ಅರ್ಜಿದಾರರು ಯುಪಿಎಸ್‌ಸಿಯನ್ನು ವಂಚಿಸುವ ದೊಡ್ಡ ಪಿತೂರಿಯ ಭಾಗವಾಗಿದ್ದಾರೆ ಎಂದು ಹೇಳಿದೆ.

ವಿಷಯ ಏನು?

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 2023ರ ಬ್ಯಾಚ್ ಟ್ರೈನಿ IAS ಅಧಿಕಾರಿ ಪೂಜಾ ಖೇಡ್ಕರ್ ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇತರೆ ಹಿಂದುಳಿದ ವರ್ಗ (OBC) ಮತ್ತು ಅಂಗವಿಕಲರ ಕೋಟಾವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಯುಪಿಎಸ್‌ಸಿ ಖೇಡ್ಕರ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ತನಿಖೆಯ ನಂತರ UPSC ಅವರ ಆಯ್ಕೆಯನ್ನು ರದ್ದುಗೊಳಿಸಿತ್ತು. ಅವರಿಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಮುಂದಿನ ಪರೀಕ್ಷೆಗಳಿಗೆ ಹಾಜರಾಗದಂತೆಯೂ ಅವರನ್ನು ನಿರ್ಬಂಧಿಸಲಾಗಿದೆ.

ಯುಪಿಎಸ್​ಸಿಯ ಹೇಳಿಕೆಯ ಪ್ರಕಾರ, ಖೇಡ್ಕರ್ ಅವರ ದುಷ್ಕೃತ್ಯದ ಬಗ್ಗೆ ವಿವರವಾದ ಮತ್ತು ಕೂಲಂಕಷ ತನಿಖೆಯಿಂದ ಅವರು ತಮ್ಮ ಹೆಸರನ್ನು ಬದಲಾಯಿಸುವ ಮೂಲಕ ತಮ್ಮ ಗುರುತನ್ನು ತಪ್ಪಾಗಿ ನಿರೂಪಿಸುವ ಮೂಲಕ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಿದೆ. ಖೇಡ್ಕರ್ ಅವರು ತಮ್ಮ ಪಾಲಕರ ಹೆಸರಿನ ಜತೆಗೆ ಅವರ ಭಾವಚಿತ್ರ, ಸಹಿ, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಾಯಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net