ಪೂಜಾ ಖೇಡ್ಕರ್ ಪ್ರಕರಣದ ನಂತರ ಎಚ್ಚೆತ್ತ UPSC; ಅಕ್ರಮ ತಡೆಯಲು ಹೊಸ ಕ್ರಮ

Untitled-design-78-1
Published on

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ತನ್ನ ಪರೀಕ್ಷೆಗಳಲ್ಲಿ ಮೋಸ, ವಂಚನೆ ಮತ್ತು ಸೋಗು ಹಾಕುವುದನ್ನು ತಡೆಯಲು ಹೊಸ ಕ್ರಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಐಎಎಸ್ ಟ್ರೈನಿ ಪೂಜಾ ಖೇಡ್ಕರ್ ಸುತ್ತಲಿನ ವಿವಾದದಿಂದ ಉನ್ನತ ಮಟ್ಟದ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಯುಪಿಎಸ್‌ಸಿ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲು ನಿರ್ಧರಿಸಿದೆ.

ಇದಕ್ಕಾಗಿ ಆಧಾರ್ ಆಧಾರಿತ ಫಿಂಗರ್‌ಪ್ರಿಂಟ್ ಪರಿಶೀಲನೆ, ಅಭ್ಯರ್ಥಿಗಳ ಮುಖ ಗುರುತಿಸುವಿಕೆ ಮತ್ತು ಲೈವ್ ಕೃತಕ ಬುದ್ಧಿಮತ್ತೆ(AI) ಆಧಾರಿತ ಸಿಸಿಟಿವಿ ಕಣ್ಗಾವಲು ಯೋಜಿಸಲಾಗುತ್ತಿದೆ.ಟ್ರೈನಿ ಐಎಎಸ್​​​ ಅಧಿಕಾರಿ ಪೂಜಾ ಖೇಡ್ಕರ್ ಪ್ರಸ್ತುತ ತನಿಖೆಯ ಸುತ್ತಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಈ ಪ್ರಕರಣದಿಂದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ದೊಡ್ಡ ಪಾಠ ಕಲಿತಿದೆ. NEET-UG ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕೂಡ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಯುಪಿಎಸ್‌ಸಿ ನಡೆಸುವ ಪರೀಕ್ಷೆಗಳಲ್ಲಿ ತಾಂತ್ರಿಕ ಸೇವೆಗಳನ್ನು ಒದಗಿಸಲು ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ಆಯೋಗದ ಇತ್ತೀಚಿನ ಟೆಂಡರ್‌ನಲ್ಲಿ ಪಟ್ಟಿ ಮಾಡಲಾದ ಸೇವೆಗಳಲ್ಲಿ ಆಧಾರ್ ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣ, ಅಭ್ಯರ್ಥಿಗಳ ಮುಖ ಗುರುತಿಸುವಿಕೆ, ಇ-ಅಡ್ಮಿಟ್ ಕಾರ್ಡ್‌ಗಳ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮತ್ತು ಎಐ ಆಧಾರಿತ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಅಗತ್ಯವಿದೆ ಎಂದು ಹೇಳಲಾಗಿದೆ.

ಪರೀಕ್ಷೆಯ ವೇಳಾಪಟ್ಟಿ, ಪರೀಕ್ಷಾ ಕೇಂದ್ರಗಳ ವಿವರಗಳು ಮತ್ತು ಅಭ್ಯರ್ಥಿಗಳ ಸಂಖ್ಯೆಯನ್ನು ತಂತ್ರಜ್ಞಾನ ಸೇವಾ ಪೂರೈಕೆದಾರರಿಗೆ ಎರಡರಿಂದ ಮೂರು ವಾರಗಳ ಮುಂಚಿತವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಲು ನೀಡಲಾಗುತ್ತದೆ ಎಂದು ಆಯೋಗ ತಿಳಿಸಿದೆ. ಬೆರಳಚ್ಚು ದೃಢೀಕರಣ ಮತ್ತು ಮುಖ ಗುರುತಿಸುವಿಕೆಗೆ ಅನುಕೂಲವಾಗುವಂತೆ ಅಭ್ಯರ್ಥಿಗಳ ಹೆಸರು, ರೋಲ್ ಸಂಖ್ಯೆ, ಭಾವಚಿತ್ರ ಇತರ ಮಾಹಿತಿಯನ್ನು ಒಂದು ವಾರ ಮುಂಚಿತವಾಗಿ ಒದಗಿಸಲಾಗುತ್ತದೆ ಎಂದು ಹೇಳಿದೆ.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಳವಡಿಸಬೇಕು. ಅಭ್ಯರ್ಥಿಯ ಪ್ರವೇಶ ಕಾರ್ಡ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್​ ಮಾಡಿದರೆ ಯುಪಿಎಸ್​​ಸಿ ಡೇಟಾಬೇಸ್‌ನಲ್ಲಿನ ಮಾಹಿತಿಯು ಲಭ್ಯವಾಗುತ್ತದೆ. ಯುಪಿಎಸ್‌ಸಿಯ ಟೆಂಡರ್‌ನಲ್ಲಿ ಸೇವಾದಾರರು ಪ್ರಾಥಮಿಕ ಪರೀಕ್ಷೆಯ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಮುಖ್ಯ ಪರೀಕ್ಷೆ, ಸಂದರ್ಶನ ಮತ್ತು ಪರಿಶೀಲನೆಯಂತಹ ಎಲ್ಲಾ ಹಂತಗಳಲ್ಲಿ ಪರಿಶೀಲಿಸುವ ಮೂಲಕ ಅಭ್ಯರ್ಥಿಯ ಗುರುತನ್ನು ಪರಿಶೀಲಿಸಬೇಕು ಎಂದು ಹೇಳುತ್ತದೆ.

UPSC ನಾಗರಿಕ ಸೇವೆಗಳು ಸೇರಿದಂತೆ ಒಂದು ವರ್ಷದಲ್ಲಿ 14 ಪರೀಕ್ಷೆಗಳನ್ನು ನಡೆಸುತ್ತದೆ. ನೇಮಕಾತಿ ಪರೀಕ್ಷೆಯ ಹೊರತಾಗಿ, UPSC ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಸಂದರ್ಶನಗಳನ್ನು ಸಹ ನಡೆಸುತ್ತದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net