

ಕೋಲಾರ: ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಕೋಮುಲ್) ವಿಶೇಷ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಒಕ್ಕೂಟದ ಮತಕ್ಷೇತ್ರ ವಿಂಗಡಣೆಗೆ ಕೋಲಾಹಲದ ನಡುವೆಯೂ ಅನುಮೋದನೆ ದೊರೆಯಿತು.
ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ಕ್ಷೇತ್ರ ನಿಗದಿಪಡಿಸಲು ಹೈಕೋರ್ಟ್ ಸೂಚನೆಯಂತೆ, ಆಡಳಿತಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್. ಅಧ್ಯಕ್ಷತೆಯಲ್ಲಿ ಗುರುವಾರ ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಮೊದಲಿಗೆ ಮತ ಕ್ಷೇತ್ರ ವಿಂಗಡಣೆಗೆ ಅನುಮೋದನೆ ನೀಡುವಂತೆ ಸೂಚಿಸಲಾಯಿತು. ಈ ವಿಚಾರದ ಪರವಾಗಿದ್ದ ಪ್ರತಿನಿಽಗಳು ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು. ಆದರಂತೆ ಕಲಂ 12(5)ಕ್ಕೆ ಅನುಮೋದನೆ ಸಿಕ್ಕಿದೆ ಎಂದು ಘೋಷಿಸಿದ ಆಡಳಿತಾಽಕಾರಿ ಸಭೆ ಮುಕ್ತಾಯಗೊಳಿಸಿದರು.
ವಿಷಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಜಿ ನಿರ್ದೇಶಕರಾದ ಡಿ.ವಿ.ಹರೀಶ್, ಕಾಡೇನಹಳ್ಳಿ ನಾಗರಾಜ್, ತೂಪಲ್ಲಿ ನಾರಾಯಣಸ್ವಾಮಿ ಸೇರಿ ಹಲವು ಪ್ರತಿನಿಽಗಳು ಒತ್ತಾಯಿಸಿದರು. ಇದಕ್ಕೆ ಆಡಳಿತಾಧಿಕಾರಿ ಅವಕಾಶ ನೀಡಲಿಲ್ಲ. ಆದ ಕಾರಣ ಎಸ್.ಎನ್.ನಾರಾಯಣಸ್ವಾಮಿ ವೇದಿಕೆಯ ಮೇಲೆ ಹತ್ತಿ, ಮತ ಕ್ಷೇತ್ರ ವಿಂಡಗಣೆ ಯಾವ ಮಾನದಂಡಗಳ ಆಧಾರದ ಮೇಲೆ ಮಾಡಲಾಗಿದೆ. ಇದಕ್ಕೂ ಮೊದಲು ಗ್ರಾಮಗಳಿಗೆ ಭೇಟಿ ನೀಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಗಮನಕ್ಕೆ ತಂದಿದೀರಾ ಎಂದು ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಅವರನ್ನು ಪ್ರಶ್ನಿಸತೊಡಗಿದಾಗ ಗದ್ದಲ, ಗೊಂದಲದ ವಾತಾವರಣ ಉಂಟಾಯಿತು. ಇದಕ್ಕೆ ಉತ್ತರಿಸದೆ ಮೌನವಾಗಿದ್ದ ಕಾರಣ ಥಳಿಸಲು ಮುಂದಾದ ಸಂದರ್ಭವೂ ಎದುರಾಯಿತು. ಇದರ ಬೆನ್ನಲೇ ಶಾಸಕ ಕೆ.ವೈ.ನಂಜೇಗೌಡ ವೇದಿಕೆಗೆ ಆಗಮಿಸಿ, ವಿಷಯವನ್ನು ಅಂಗಿಕರೀಸಿದ ನಂತರ ಯಾರೂ ಮಾತನಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಯಿತು. ಆಗ ಪೊಲೀಸರು ಇಬ್ಬರೂ ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಹಲ್ಲೆ ಆರೋಪ
ಸಭೆ ಗದ್ದಲದ ನಡುವೆ ರೂಂ ಒಳಗೆ ಎಂಡಿ ಗೋಪಾಲಮೂರ್ತಿ ಹೋಗುತ್ತಿದ್ದಂತೆ ಹಿಂದೆಯೇ ವ್ಯವಸ್ಥಾಪಕ ಡಾ.ಚೇತನ್ ಹೊರಟಿದ್ದರು. ಈ ಸಂದರ್ಭ ಮಾಜಿ ನಿರ್ದೇಶಕ ನಾಗರಾಜ್ ಹಲ್ಲೆ ನಡೆಸಿದ ಎಂಬ ಆರೋಪ ಕೇಳಿ ಬಂದಿದೆ.
* 13 ಚುನಾಯಿತ, 5 ಸರ್ಕಾರಿ ಪ್ರತಿನಿ
ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನ ಹೆಚ್ಚಿಸಿಕೊಳ್ಳಲು ಮತ ಕ್ಷೇತ್ರ ವಿಂಗಡಿಸಲು ಹೈಕೋರ್ಟ್ ಸೂಚಿಸಿತ್ತು. ಅದರಂತೆ ಕಲಂ 12(5)ಗೆ ಅನುಮೋದನೆ ಪಡೆದು, ಒಟ್ಟು 18 ನಿರ್ದೇಶಕರ ಸ್ಥಾನಗಳನ್ನು ನಿಗದಿಪಡಿಸಿದ್ದು, ಆ ಪೈಕಿ 13 ಚುನಾಯಿತ ನಿರ್ದೇಶಕರು, ಸರ್ಕಾರದ ನಾಮಿನಿ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಪ್ರತಿನಿಧಿ, ಪಶು ಸಂಗೋಪನೆ ಇಲಾಖೆ, ಸಹಕಾರ ಸಂಘಗಳ ನಿಬಂಧಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿದ ತಲಾ ಒಬ್ಬ ನಿರ್ದೇಶಕರ ಸ್ಥಾನ ನಿಗದಿಪಡಿಸಲಾಗಿದೆ. ಸಭೆಯ ಅನುಮೋದನೆಯ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿ, ಮುಂದಿನ ಆದೇಶದ ನಂತರ ಚುನಾವಣೆಗೆ ಒಕ್ಕೂಟ ಕ್ರಮವಹಿಸಲಿದೆ.
* ಮೂರನೇ ಎರಡಷ್ಟು ಮತ
ಹೈಕೋರ್ಟ್ ಆದೇಶದಂತೆ ಕ್ಷೇತ್ರ ವಿಂಗಡಣೆಗೆ ಅನುಮೋದನೆ ಸಿಕ್ಕಿದೆ. ಕೈ ಎತ್ತುವುದರ ಮೂಲಕ ಮತಕ್ಕೆ ಹಾಕಿದ್ದು ಮೂರನೇ ಎರಡರಷ್ಟು ಮತಗಳು ಪರವಾಗಿ ಬಿದ್ದಿವೆ ಎಂದು ಆಡಳಿತಾಧಿಕಾರಿ ಡಾ.ಮೈತ್ರಿ ಪ್ರಕಟಿಸಿದರು.
* ಎಸ್‌ಎನ್ ಪ್ರಯತ್ನಕ್ಕೆ ಹಿನ್ನಡೆ
ಒಕ್ಕೂಟದ ಮತ ಕ್ಷೇತ್ರಗಳ ವಿಂಗಡಣೆಗೆ ಸಹಕಾರ ಇಲಾಖೆಯ ಪ್ರಾದೇಶಿಕ ನಿರ್ದೇಶಕ (ಆರ್‌ಸಿ) ಪತ್ರ ಬರೆದು ಸೂಚಿಸಿದ್ದರು. ಅದರಂತೆ ಕ್ಷೇತ್ರ ವಿಂಗಡಣೆ ಮಾಡಿ 2024ರ ನ.30ರಂದು ಸರ್ಕಾರಕ್ಕೆ ಪಟ್ಟಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದ್ದು, ಇದಕ್ಕೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೆಲ ಮಾಜಿ ನಿರ್ದೇಶಕರ ಆಕ್ರೋಶಕ್ಕೆ ಕಾರಣವಾಗಿತ್ತು. ಎಸ್.ಎನ್.ನಾರಾಯಣಸ್ವಾಮಿ ಮತ್ತು ಕೆ.ವೈ.ನಂಜೇಗೌಡ ಅವರು ಇದನ್ನು ಪ್ರತಿಷ್ಠೆಯಾಗಿದ್ದ ತೆಗೆದುಕೊಂಡಿದ್ದರು. ಈಗ ಸಭೆಯಲ್ಲಿ ಕಲಂ 12(5)ಗೆ ಅನುಮೋದನೆ ದೊರೆತಿದ್ದು, ನಾರಾಯಣಸ್ವಾಮಿ ತಂಡಕ್ಕೆ ಹಿನ್ನಡೆಯಾದಂತಾಗಿದೆ.