ವರ್ಷದೊಳಗೆ ರೈತರ ಜಮೀನಿಗೆ ಭದ್ರಾ ಮೇಲ್ದಂಡೆ ನೀರು; ಟಿ.ಬಿ.ಜಯಚಂದ್ರ ಸೂಚನೆ

UBP meeting
Published on

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ (ಯುಬಿಪಿ)ಯನ್ನು ಒಂದು ವರ್ಷದಲ್ಲಿ ಅನುಷ್ಠಾನಗೊಳಿಸಿ ರೈತರಿಗೆ ನೀರು ಪೂರೈಸಬೇಕು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಯೋಜನೆಯ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಹತ್ವದ ಯೋಜನೆಯ ಕಾಮಗಾರಿಗೆ ವೇಗದ ಸ್ಪರ್ಶ ನೀಡುವ ಅಗತ್ಯವಿದೆ. ಇದಕ್ಕಾಗಿ ಜಲಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ಭಾಗದ ಸಂಸದರು ಹಾಗೂ ಶಾಸಕರ ಸಭೆಯನ್ನು ಶೀಘ್ರವೇ ಕರೆಯುವುದಾಗಿ ತಿಳಿಸಿದರು.

ಅಲ್ಲದೆ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಇಷ್ಟರಲ್ಲೇ ದೆಹಲಿಯಲ್ಲಿ ಸಭೆ ನಡೆಸುವೆ. ಸೆ.18ರಿಂದ ಲೋಕಸಭೆ ವಿಶೇಷ ಅಧಿವೇಶನ ಕರೆಯಲಾಗಿದ್ದು, ಇದೇ ಅವಕಾಸ ಬಳಸಿಕೊಂಡು ಕೇಂದ್ರ ಜಲಶಕ್ತಿ ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡುವೆ. ಈ ಯೋಜನೆಗೆ ಸಂಬಂಧಿಸಿದ ತೊಡಕುಗಳನ್ನು ನಿವಾರಿಸಿ ಅನುದಾನ ಬಿಡುಗಡೆ ಮಾಡಲು ಕೋರುವೆ ಎಂದು ಟಿ.ಬಿ.ಜಯಚಂದ್ರ ಹೇಳಿದರು.

ವಸ್ತುಸ್ಥಿತಿ ಮಾಹಿತಿ

ಒಟ್ಟಾರೆ 21,473 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ 5,300 ಕೋಟಿ ರೂ. ನೀಡುವುದಾಗಿ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಜಲಶಕ್ತಿ ಹಾಗೂ ಆರ್ಥಿ ಇಲಾಖೆ ಅದಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮಾಹಿತಿ ನೀಡಿದರು.

ಈ ಯೋಜನೆಗೆ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ 2,500 ಕೋಟಿ ರೂ. ತೆಗೆದಿರಿಸಿದೆ. ತಕ್ಷಣ 500 ಕೋಟಿ ರೂ ನೀಡಲು ಸಿದ್ಧವಿದೆ. ಕನಿಷ್ಠ ಎರಡು ಸಾವಿರ ಕೋಟಿ ರೂ. ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಿದೆ.

ತರೀಕೆರೆ, ಕಡೂರು ಹಾಗೂ ಅಜ್ಜಂಪುರದಲ್ಲಿ 220ಕ್ಕೂ ಹೆಚ್ಚು ರೈತರು ಹೆಚ್ಚಿನ ಭೂಪರಿಹಾರ ಕೋರಿ ಚಿಕ್ಕಮಗಳೂರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಮೊಕದ್ದಮೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿದರೆ ಯೋಜನೆಗೆ ವೇಗ ಸಿಗಲಿದೆ ಎಂದು ಸಣ್ಣಚಿತ್ತಯ್ಯ ವಿವರಿಸಿದರು.

ಲೋಕ ಅದಾಲತ್‌ನಲ್ಲಿ ಮಂಡನೆ

ಎಲ್ಲ ಭೂಪರಿಹಾರ ವ್ಯಾಜ್ಯಗಳನ್ನು ಲೋಕ ಅದಾಲತ್‌ನಲ್ಲಿ ಮಂಡಿಸಿ ರೈತರಿಗೆ ಅಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸುವೆ ಎಂದು ಕಾನೂನು ಇಲಾಖೆ ಕಾರ್ಯದರ್ಶಿ ಜಗದೀಶ್ ಹೇಳಿದರೆ, ಅಧಿಕಾರಿಗಳ ಮಾತಿಗೆ ಟಿ.ಬಿ.ಜಯಚಂದ್ರ ಸ್ಪಂದಿಸಿದರು.

ಅಲ್ಲದೆ, ತರೀಕೆರೆ, ಕಡೂರು, ಚಿಕ್ಕನಾಯಕನಹಳ್ಳಿ ಮತ್ತು ಹೊಸದುರ್ಗ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆದಷ್ಟು ಬೇಗ ಭೂ ಸ್ವಾಧೀನ ಮಾಡಿ ಕಾಮಗಾರಿಗೆ ಚಾಲನ ನೀಡಿದರೆ, ಮುಂದಿನ ಒಂದೆರಡು ವರ್ಷಗಳಲ್ಲಿ ನೀರು ತರಬಹುದು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net