15 ದಿನದೊಳಗೆ ಬ್ಯಾಂಕ್ ಭದ್ರತಾ ವ್ಯವಸ್ಥೆ ಅಪ್‌ಗ್ರೇಡ್ ಮಾಡಿಕೊಳ್ಳಿ: ಎಸ್ಪಿ ಸೂಚನೆ

sp mithun kumar meeting
ಶಿವಮೊಗ್ಗ ಡಿಎಆರ್ ಸಭಾಂಗಣದಲ್ಲಿ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿದರು. ಎಎಸ್‌ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ಲೀಡ್ ಬ್ಯಾಂಕ್ ಅಧಿಕಾರಿ ಚಂದ್ರಶೇಖರ್ ಇದ್ದರು.
Published on

ಶಿವಮೊಗ್ಗ: ಜಿಲ್ಲೆಯ ಎಲ್ಲ ಬ್ಯಾಂಕ್‌ಗಳು ಮತ್ತು ಎಟಿಎಂಗಳ ಸುರಕ್ಷತೆಗೆ ಆಯಾ ಬ್ಯಾಂಕ್‌ಗಳ ಆಡಳಿತ ಮಂಡಳಿ ಒತ್ತು ನೀಡಬೇಕು. 15 ದಿನದೊಳಗೆ ಬ್ಯಾಂಕ್ ಸೆಕ್ಯೂರಟಿ ಆಡಿಟ್ ಮಾರ್ಗಸೂಚಿಯಂತೆ ಭದ್ರತಾ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಿಕೊಳ್ಳಬೇಕು ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸೂಚನೆ ನೀಡಿದರು.

ನಗರದ ಡಿಎಆರ್ ಸಭಾಂಗಣದಲ್ಲಿ ಗುರುವಾರ ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಪರಾಮರ್ಶನಾ ಸಭೆ ನಡೆಸಿದ ಅವರು, ಭದ್ರತಾ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷೃತನ ಸಲ್ಲದು. ಸಾರ್ವಜನಿಕರು ಜೀವಮಾನವಿಡಿ ಕಷ್ಟಪಟ್ಟು ದುಡಿದ ಹಣ ಅಥವಾ ಚಿನ್ನಾಭರಣ ದರೋಡೆಕೋರರ ಪಾಲಾಗುವುದು ಬೇಡ. ಆ ನಿಟ್ಟಿನಲ್ಲಿ ಪ್ರತಿ ಬ್ಯಾಂಕ್‌ನವರು ತಮ್ಮ ಕಟ್ಟಡಗಳ ಸುತ್ತ ಚಲನಾ ಸಂವೇದನೆಯುಳ್ಳ ನೈಟ್ ವಿಷನ್ ಇರುವ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದರು.

ವಿಶೇಷವಾಗಿ ರಾತ್ರಿ ವೇಳೆಯೂ ಶೇ.100ರಷ್ಟು ಸ್ಪಷ್ಟವಾಗಿ ಗೋಚರಿಸುವ, 360 ಡಿಗ್ರಿ ಸುತ್ತಲೂ ಉತ್ತಮ ದರ್ಜೆಯ ಮತ್ತು 90 ದಿನಕ್ಕೂ ಅಧಿಕ ವಿಡಿಯೋ ಸ್ಟೋರೇಜ್ ಸಾಮರ್ಥ್ಯದ ಗುಣಮಟ್ಟದ ಕ್ಯಾಮೆರಾಗಳನ್ನೇ ಅಳವಡಿಸಬೇಕು. ಗಾಹಕರು ಹಣವನ್ನು ವಿಶ್ವಾಸದಿಂದ ಬ್ಯಾಂಕ್‌ಗಳಲ್ಲಿ ಇಟ್ಟಿರುತ್ತಾರೆ. ಅನೇಕ ಬ್ಯಾಂಕ್‌ಗಳು ವಿವಿಧ ರೀತಿಯ ಸೇವೆ ನೀಡುತ್ತಿವೆ. ಆದರೆ ಇತ್ತೀಚಿಗೆ ನ್ಯಾಮತಿಯ ಬ್ಯಾಂಕ್‌ವೊಂದರಲ್ಲಿ ಸುಮಾರು 13 ಕೋಟಿ ರೂ. ಮೌಲ್ಯದ 17 ಕೆಜಿಯಷ್ಟು ಚಿನ್ನಾಭರಣ ದರೋಡೆ ಮಾಡಲಾಗಿದೆ. ಅಲ್ಲಿನ ಭದ್ರತಾ ಲೋಪವೇ ಅದಕ್ಕೆ ಕಾರಣವಾಗಿದ್ದು ಇದು ಗಾಹಕರಿಗೆ ಸಹಜವಾಗಿ ಆತಂಕ ತರುತ್ತದೆ. ಆ ಕಾರಣಕ್ಕೆ ಬ್ಯಾಂಕ್‌ಗಳ ಸುರಕ್ಷತೆ ಮತ್ತು ಭದತೆ ಬಗ್ಗೆ ಆರ್‌ಬಿಐ ಅನೇಕ ಮಾರ್ಗಸೂಚಿಗಳನ್ನು ತಂದಿದ್ದು ಕಡ್ಡಾಯವಾಗಿ ಎಲ್ಲರೂ ಪಾಲನೆ ಮಾಡಬೇಕಿದೆ ಎಂದು ಹೇಳಿದರು.

ವಿನೋಬನಗರ ಸೇರಿ ಶಿವಮೊಗ್ಗದ ಹಲವಡೆ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಕಳ್ಳತನಕ್ಕೆ ಯತ್ನಗಳು ನಡೆದಿದೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಹಲವಡೆ ಬ್ಯಾಂಕ್ ಒಳಗೆ ಮತ್ತು ಹೊರಗೆ ಅಸುರಕ್ಷತೆ, ಸಿಬ್ಬಂದಿ ನಿರ್ಲಕ್ಷ್ಯ, ನಿಯಮಾವಳಿಗಳ ಪ್ರಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಇರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ. ಸುರಕ್ಷತೆಗಾಗಿ ಇರುವ ಹಳೆ ಪದ್ಧತಿಗಳನ್ನೇ ಹಲವರು ಮುಂದುವರಿಸಿದ್ದು ತಕ್ಷಣವೇ ಬದಲಾವಣೆ ಮಾಡಿ ಅತ್ಯಾಧುನಿಕ ತಂತಜ್ಞಾನ ಉಪಯೋಗಿಸಿಕೊಳ್ಳಬೇಕಿದೆ ಎಂದರು.

ಎಎಸ್‌ಪಿ ಅನಿಲ್‌ಕುಮಾರ್ ಭೂಮರಡ್ಡಿ, ಎಎಸ್‌ಪಿ ಎ.ಜಿ.ಕಾರಿಯಪ್ಪ ಮಾತನಾಡಿದರು. ಲೀಡ್ ಬ್ಯಾಂಕ್ ಅಧಿಕಾರಿ ಚಂದಶೇಖರ್, ಡಿವೈಎಸ್‌ಪಿಗಳಾದ ಬಾಬು ಆಂಜನಪ್ಪ, ಎಂ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net