ಬೆಳಕಿನ ಹುಡುಕಾಟದಲ್ಲಿ... ನಟ ಉಪೇಂದ್ರ

Ulasa-2
Published on

ಬೆಂಗಳೂರು: ಲಾಕ್​ಡೌನ್ ಇಲ್ಲದಿದ್ದರೆ, ಇಷ್ಟರಲ್ಲಿ ಉಪೇಂದ್ರ ಅಭಿನಯದ ಮೂರು ಚಿತ್ರಗಳ ಬಾಕಿ ಚಿತ್ರೀಕರಣ ಮುಗಿದು, ಹೊಸ ಚಿತ್ರಗಳು ಪ್ರಾರಂಭವಾಗುತ್ತಿದ್ದವೇನೋ? ಆದರೆ, ಲಾಕ್​ಡೌನ್​ನಿಂದ ಎಲ್ಲವೂ ತಡವಾಗಿದೆ. ಇದೀಗ ಮೊದಲಿಗೆ ‘ವೇದ-ವ್ಯಾಸ’ ಚಿತ್ರೀಕರಣದಲ್ಲಿ ಭಾಗವಹಿಸುವ ಅವರು, ನಂತರದ ದಿನಗಳಲ್ಲಿ ‘ಬುದ್ಧಿವಂತ 2’ ಮತ್ತು ‘ಕಬ್ಜ’ ಚಿತ್ರಗಳ ಚಿತ್ರೀಕರಣ ಮುಗಿಸಿ, ಆ ನಂತರ ಹೊಸ ಚಿತ್ರಗಳತ್ತ ಪ್ರಯಾಣ ಬೆಳೆಸಲಿದ್ದಾರೆ.

ಫೋಕಸ್ ಸಿಗುತ್ತಿಲ್ಲ್ಲ ನಟನೆ ಜತೆಗೆ ಅವರು ಆಕ್ಷನ್-ಕಟ್ ಹೇಳುವುದು ಯಾವಾಗ? ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟರೆ, ‘ಪ್ಲಾನ್ ಮಾಡ್ತಿದ್ದೀನಿ ಗುರುವೆ’ ಎಂಬ ಉತ್ತರ ಅವರಿಂದ ಬರುತ್ತದೆ. ‘ಲಾಕ್​ಡೌನ್ ಶುರುವಾದಾಗಿನಿಂದ ಒಂದಿಷ್ಟು ಸ್ಕ್ರಿಪ್ಟ್ ಮಾಡಿಟ್ಟುಕೊಂಡಿದ್ದೀನಿ. ಆದರೆ, ಸರಿಯಾಗಿ ಫೋಕಸ್ ಸಿಗುತ್ತಿಲ್ಲ. ಚಿತ್ರಮಂದಿರಕ್ಕೆ ಮಾಡಬೇಕೋ, ಓಟಿಟಿಗೋ ಸ್ಪಷ್ಟವಾಗುತ್ತಿಲ್ಲ. ಸದ್ಯ ಕತ್ತಲೆ ರೂಮಲ್ಲಿ ನಿಂತಿದ್ದೇವೆ. ಎಲ್ಲಿಂದಲೋ ಬೆಳಕು ಬರಬೇಕು. ಕ್ರಮೇಣ ಬರುತ್ತಿದೆ. ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ’ ಎನ್ನುತ್ತಾರೆ ಉಪೇಂದ್ರ.

ಉಳಿಯೋದು ಕಂಟೆಂಟ್ ಮಾತ್ರ: ಓಟಿಟಿಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, ಚಿತ್ರಮಂದಿರಗಳಿಗೇನೂ ಸಮಸ್ಯೆ ಆಗುವುದಿಲ್ಲ ಎಂಬ ಅಭಿಪ್ರಾಯ ಅವರದ್ದು. ‘ಏನೇ ಆದರೂ ಚಿತ್ರಮಂದಿರದ ಚಾಮ್ರ್ ಕಡಿಮೆಯಾಗುವುದಿಲ್ಲ. ಇನ್ನು, ಓಟಿಟಿ ಈಗಾಗಲೇ ದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಹಾಗೆಯೇ ಭವಿಷ್ಯದಲ್ಲಿ ಓಟಿಟಿ ಇನ್ನಷ್ಟು ಬೆಳೆಯುತ್ತದೆ. ಸಿನಿಮಾ ತೋರಿಸುವ ಫಾರ್ವ್ಯಾಟ್​ಗಳು ಬದಲಾಗಬಹುದು. ಆದರೆ, ಕೊನೆಗೆ ಉಳಿಯೋದು ಒಳ್ಳೆಯ ಕಂಟೆಂಟ್ ಮಾತ್ರ’ ಎನ್ನುವುದು ಅವರ ನಿಲುವು.

ಒಂದು ಬ್ಯಾಲೆನ್ಸ್ ಬೇಕಾಗಿತ್ತು: ಇನ್ನು ಲಾಕ್​ಡೌನ್​ನಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಆಗಿದೆ ಎನ್ನುವ ಉಪೇಂದ್ರ, ‘ಪ್ರಕೃತಿಗೆ ಒಂದು ಬ್ಯಾಲೆನ್ಸ್ ಬೇಕಾಗಿತ್ತು. ಅದು ಕರೊನಾ ಮತ್ತು ಲಾಕ್​ಡೌನ್​ನಿಂದ ಸಿಕ್ಕಿದೆ. ಇದರಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಆಗಿದೆ. ಹಲವರಿಗೆ ತುಂಬ ಕಷ್ಟ ಆಗಿದೆ. ಎಲ್ಲ ಉದ್ಯಮಗಳಿಗೂ ಸಮಸ್ಯೆ ಆಗಿದೆ. ಸರ್ವೆವಲ್ ಆಫ್ ದಿ ಫಿಟ್ಟೆಸ್ಟ್ ಅಂತಾರಲ್ಲ, ಫಿಟ್ ಆಗಿರುವವರು ಉಳಿದುಕೊಂಡಿದ್ದಾರೆ. ಇನ್ನುಳಿದವರು ಫಿಟ್ ಆಗುವುದು ಹೇಗೆ ಎಂದು ಯೋಚನೆ ಮಾಡುವಂತಾಗಿದೆ’ ಎನ್ನುತ್ತಾರೆ.

ಮನಃಸ್ಥಿತಿ ಬದಲಾಗಬೇಕು: ಉಪೇಂದ್ರ ಅವರು ಪ್ರಜಾಕೀಯದ ವಿಷಯವಾಗಿ ಬೀದಿಗೆ ಇಳಿಯುತ್ತಿಲ್ಲ, ಅದೇ ಕಾರಣಕ್ಕೆ ಅವರ ಪಕ್ಷದ ಸಿದ್ಧಾಂತಗಳು ಜನರಿಗೆ ತಿಳಿಯುತ್ತಿಲ್ಲ ಎಂಬ ಮಾತಿದೆ. ಇದನ್ನು ನಿರಾಕರಿಸುವ ಅವರು, ‘ಮೊಬೈಲ್ ಕೈಯಲ್ಲಿದ್ದಾಗ, ವಿಚಾರ ತಿಳಿದುಕೊಳ್ಳುವುದು ಮುಖ್ಯ. ಎಷ್ಟು ಹಳ್ಳಿಗೆ ಹೋಗುವುದಕ್ಕೆ ಸಾಧ್ಯ? ಅದಕ್ಕೆ ಒಬ್ಬರನ್ನು ನೇಮಿಸಬೇಕು. ಅವನಿಗೆ ದುಡ್ಡು ಖರ್ಚು ಮಾಡಬೇಕಾಗುತ್ತದೆ. ಹೀಗೆ ಹಳ್ಳಿಹಳ್ಳಿಗೂ ಮಾಡುತ್ತ ಹೋದರೆ ಹೆಮ್ಮರವಾಗುತ್ತದೆ. ಈಗಾಗಲೇ ಆ ವ್ಯವಸ್ಥೆ ಇದೆ. ನಾನು ಅದನ್ನೇ ಮಾಡಬೇಕು ಎಂದರೆ ವ್ಯತ್ಯಾಸ ಎಲ್ಲಿಂದ ಬಂತು? ತಾಂತ್ರಿಕವಾಗಿ ನಾವೆಲ್ಲ ಸಾಕಷ್ಟು ಮುಂದುವರಿದಿದ್ದೇವೆ. ಅದನ್ನು ಸಶಕ್ತವಾಗಿ ಬಳಸಿಕೊಂಡು ಬೆಳೆಯಬೇಕು ಎಂಬುದು ನನ್ನ ಉದ್ದೇಶ’ ಎನ್ನುತ್ತಾರೆ ಉಪೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net