ಶ್ರೀಕೃಷ್ಣನ ಉಪನಯನ

8-686c104cc571d
Published on
ಉಪನಯನಕ್ಕಾಗಿ ಎಲ್ಲ ಪುರೋಹಿತರೂ ಬಂದಿದ್ದಾರೆ. ಅವರು ಮಂತ್ರವನ್ನು ಹೇಳುತ್ತಿದ್ದಾರೆ. ಸಣ್ಣ ಮಕ್ಕಳು ಇದ್ದಾಗ ಕಾಮಭಕ್ಷಣ ಮಾಡಿರುತ್ತೇವೆ. ಏನು ಬೇಕು ಅದನ್ನು ತಿನ್ನುವುದು, ಎಲ್ಲಿ ಬೇಕು ಅಲ್ಲಿ ಓಡಾಡುವುದು, ಎಂಜಲು ತಿನ್ನುವುದು ಮೊದಲಾದ ಬೇಕು- ಬೇಡದ ಎಲ್ಲವನ್ನೂ ಮಾಡಿದ್ದೇವೆ. ಸ್ನಾನ ಮಾಡದೇ ತಿನ್ನುವುದು. ಹೀಗೆ ಆ ದಿನಗಳಲ್ಲಿ ಏನೇನೋ ತಿಂದಿರುತ್ತಾರೆ. ಎಲ್ಲೆಲ್ಲೋ ತಿಂದಿರುತ್ತಾರೆ. ಹೇಗೋ ತಿಂದಿರುತ್ತಾರೆ. ಮನಸ್ಸಿಗೆ ಬಂದಂತೆ ವ್ಯವಹಾರ ಇರುತ್ತದೆ. ಸಣ್ಣ ಮಕ್ಕಳಾಗಿರುವಾಗ ನಿಯಮಗಳನ್ನು ಪರಿಪಾಲನೆ ಮಾಡಲು ಆಗಿರುವುದಿಲ್ಲ. ಆ ಎಲ್ಲ ತರಹದ ಕಾಮಾಚಾರ ಕಾಮ ಭಕ್ಷಾದಿಗಳನ್ನು ಬಿಡಬೇಕು. ಇನ್ನು ಮುಂದೆ ಎಲ್ಲ ವಿಧವಾದ ದುಷ್ಟ ಕಾಮಗಳನ್ನು ಬಿಟ್ಟು ನೈಷ್ಠಿಕವಾದ ಬ್ರಹ್ಮಚರ್ಯದಿಂದ ವೇದಾಧ್ಯಯನವನ್ನು ಮಾಡಬೇಕು, ಅದು ನಿಜವಾಗಿ ಉಪನಯನದ ಸಾರ್ಥಕ್ಯ.

‘ಉಪನಯನ ಎಂದರೆ ಸುಮ್ಮನೇ ಯಾವುದೋ ಹಗ್ಗ ಹಾಕಿಕೊಳ್ಳುವುದು(ಜನಿವಾರ) ಎಂದು ಅರ್ಥವಲ್ಲ. ಏಕೆಂದರೆ, ಇಷ್ಟು ದಿವಸ ಸಣ್ಣ ಹುಡುಗನಾಗಿದ್ದಾಗ ಏನೂ ಜವಾಬ್ದಾರಿ ಇರಲಿಲ್ಲ. ಈಗ ದೊಡ್ಡವ ಆದ ಮೇಲೆ ಜವಾಬ್ದಾರಿ ಬರುತ್ತದೆ. ಕೀಲಿಕೈ ಸಿಗಿಸಿಕೊಳ್ಳಲಿಕ್ಕೆ ಏನೋ ಒಂದು ಬೇಕಲ್ಲ ಅದಕ್ಕೆ ಒಂದು ಹಗ್ಗ ಕಟ್ಟುವುದು ಎಂದು ಕೆಲವರು ತಿಳಿದುಕೊಂಡಿರುತ್ತಾರೆ. ಅದು ತಪ್ಪು.‘ಉಪ’ ಅಂದರೆ ಹತ್ತಿರ ಎಂದರ್ಥ. ಗುರುಗಳ ಹತ್ತಿರ ಕಳಿಸಬೇಕು. ಮಗನನ್ನು ಗುರುಗಳ ಹತ್ತಿರ ಕಳಿಸುವುದು ನಿಜವಾದ ಉಪನಯನ. ಅಥವಾ ಉಪನಯನ ಎಂದರೆ ಅವನನ್ನು ಇದ್ದ ಅವಸ್ಥೆಗಿಂತಲೂ ಬಹಳ ಮೇಲೆ ಕರೆದುಕೊಂಡು ಹೋಗುವ ಸಂಸ್ಕಾರ. ಭಗವಂತನ ಜ್ಞಾನವನ್ನು ಮಾಡಿಕೊಡುವ ಶಾಸ್ತ್ರಗಳ ಅಧ್ಯಯನಕ್ಕಾಗಿ ಅವನನ್ನು ಕರೆದುಕೊಂಡು ಹೋಗುವುದೇ ಉಪನಯನ. ಅಂತಹ ಉಪನಯನ ವನ್ನು ಮಾಡಬೇಕಾದರೆ ಬ್ರಹ್ಮಚರ್ಯ ಅತ್ಯಗತ್ಯ. ಕಾಮದ ನಾಶ ಮುಖ್ಯ ಎನ್ನುವುದನ್ನು ಬಿಂಬಿಸಲೆಂದೇ ಕಂಸನ ಸಂಹಾರ ಮಾಡಿ ಕೃಷ್ಣ ಪರಮಾತ್ಮ ತಾನು ಉಪನಯನವನ್ನು ಬಲರಾಮದೇವರ ಜೊತೆಗೆ ಮಾಡಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net