

ಮಿರ್ಜಾಪುರ: ರಸ್ತೆಯಲ್ಲಿ ಎಲ್ಲಾದರೂ ಹಸು, ಎಮ್ಮೆಗಳನ್ನು ಕಂಡರೆ ಹಗ್ಗದಿಂದ ಕಟ್ಟಿ ಹಾಕಿ ಎಂದು ಉತ್ತರಪ್ರದೇಶ ರಾಜ್ಯದ ಲೋಕೋಪಯೋಗಿ ಇಲಾಖೆ ತನ್ನ ಇಂಜಿನಿಯರ್ಗಳಿಗೆ ಸೂಚನೆ ನೀಡಿದೆ.
ಜನವರಿ 29ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗಂಗಾ ಯಾತ್ರಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ದಾರಿಯಲ್ಲಿ ಜಾನುವಾರುಗಳು ಕಂಡರೆ ಅವುಗಳನ್ನು ಕಟ್ಟಿ ಹಾಕಿ. ಅವುಗಳಿಂದಾಗಿ ಮುಖ್ಯಮಂತ್ರಿ ಯೋಗಿ ಅವರ ದಾರಿಗೆ ಅಡ್ಡ ಬರದಂತೆ ತಡೆಯಿರಿ. ಅಲ್ಲದೆ ಎಲ್ಲ ಜೂನಿಯರ್ ಇಂಜಿನಿಯರ್ಗಳ ನಿಮ್ಮ ನಿಮ್ಮ ತಂಡದೊಂದಿಗೆ ಹಾಜರಿರತಕ್ಕದ್ದು. ಜತೆಗೆ 8ರಿಂದ 10 ಹಗ್ಗಗಳನ್ನು ತನ್ನಿ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಈ ಸೂಚನೆಗೆ ಪ್ರತಿಕ್ರಿಯಿಸಿರುವ ಮಿರ್ಜಾಪುರ ಇಂಜಿನಿಯರ್ಸ್ ಅಸೋಸಿಯೇಷನ್, ನಮ್ಮ ಇಂಜಿನಿಯರ್ಗಳಿಗೆ ಜಾನುವಾರುಗಳನ್ನು ಹಿಡಿದು ಅಭ್ಯಾಸವಿಲ್ಲ. ಹಾಗಾಗಿ ಪ್ರಾಣಿಗಳನ್ನು ಹಿಡಿಯಲು ಹೋದಾಗ ಅನಾಹುತವಾಗಿ ಗಾಯಗೊಂಡರೆ ಅಸೋಸಿಯೇಷನ್ ಜವಾಬ್ದಾರವಾಗುವುದಿಲ್ಲ ಎಂದಿದೆ. ಮತ್ತೆ ಈ ಕಾರ್ಯವನ್ನು ಯಾರಾದರೂ ಪರಿಣಿತ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ನೀಡುವುದು ಉತ್ತಮ ಎಂದು ಸಲಹೆಯನ್ನೂ ನೀಡಿದೆ.
ಈ ಮುಂಚೆ ಸಾಮೂಹಿಕ ಮದುವೆಯಲ್ಲಿ ಭಾಗವಹಿಸುವ ವಧುಗಳಿಗೆ ಶೃಂಗಾರಗೊಳ್ಳಲು ಸಹಕರಿಸಲು ಶಾಲಾ ಶಿಕ್ಷಕರನ್ನು ನೇಮಿಸಿ ವಿವಾದವಾಗಿತ್ತು. ನಂತರ ಈ ಸೂಚನೆಯನ್ನು ವಾಪಸ್ ಪಡೆಯಲಾಗಿತ್ತು.
ಇದರ ಬೆನ್ನಲ್ಲೇ ಮತ್ತೊಂದು ಸೂಚನೆ ವೈರಲ್ ಆಗಿದೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳಿಗೆ ಜಾನುವಾರು ಕಟ್ಟಿ ಹಾಕಲು ತಿಳಿಸಿದ ಇಲಾಖೆ ಪೇಚಿಗೊಳಗಾಗಿದೆ. (ಏಜೆನ್ಸೀಸ್)