ಪಾಕ್​ ISI ಏಜೆಂಟ್​ ಆಗಿ ಕೆಲಸ ಮಾಡ್ತಿದ್ದ ಯುವಕ ಅರೆಸ್ಟ್​! ರಫೇಲ್​ ಸೇರಿ ಹಲವು ಫೋಟೋಗಳ ರವಾನೆ

PAK ISI
Published on

ಲಖನೌ: ಪಾಕಿಸ್ತಾನ ಗುಪ್ತಚರ ಏಜೆನ್ಸಿ ಐಎಸ್​ಐ ಏಜೆಂಟ್​ ಆಗಿ ಕೆಲಸ ಮಾಡುತ್ತಿದ್ದ ಮೀರತ್​ ಮೂಲದ ಯುವಕನ್ನು ಉತ್ತರ ಪ್ರದೇಶ ವಿಶೇಷ ಕ್ರಿಯಾ ಪಡೆ (ಯುಪಿ-ಎಸ್​ಟಿಎಫ್​) ಗುರುವಾರ (ಆ.17) ಬಂಧಿಸಿದೆ.

ಬಂಧಿತನನ್ನು ಕಲೀಮ್​ ಎಂದು ಗುರುತಿಸಲಾಗಿದೆ. ಈತ ಅಕ್ರಮವಾಗಿ ಆಯುಧಗಳನ್ನು ಸಂಗ್ರಹಿಸುತ್ತಿದ್ದ. ಪಾಕಿಸ್ತಾನದ ಐಎಸ್​ಐ ಜತೆ ಸೇರಿ ಸಂಚು ರೂಪಿಸುತ್ತಿದ್ದ. ದೇಶದಲ್ಲಿ ಉದ್ವಿಗ್ನತೆ ಮತ್ತು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ದಾಳಿ ನಡೆಸಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗುತ್ತಿತ್ತು ಎಂದು ಎಸ್​ಟಿಎಫ್​ ತಿಳಿಸಿದೆ.

ಎಸ್‌ಟಿಎಫ್ ಹೇಳಿಕೆಯ ಪ್ರಕಾರ ಆರೋಪಿ ಸಲೀಂ, ಚಿತ್ರಗಳನ್ನು ಸೆರೆಹಿಡಿದು ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು ಮತ್ತು ಅದನ್ನು ಪಾಕಿಸ್ತಾನದಲ್ಲಿರುವ ಐಎಸ್‌ಐ ಜತೆಗೆ ವಾಟ್ಸ್​ಆ್ಯಪ್​ ಮೂಲಕ ಹಂಚಿಕೊಳ್ಳುತ್ತಿದ್ದ. ಅವರು ಕೇಳಿದಾಗಲೆಲ್ಲ ಮಾಹಿತಿ ಸಂಗ್ರಹಿಸಿ ರವಾನಿಸುತ್ತಿದ್ದ ಎಂದು ಎಸ್‌ಟಿಎಫ್ ಹೇಳಿಕೆ ನೀಡಿದೆ.

ಭಾರತದಲ್ಲಿನ ಭದ್ರತೆಗೆ ಸಂಬಂಧಿಸಿದ ಸ್ಥಳಗಳ ಛಾಯಾಚಿತ್ರಗಳು ಮತ್ತು ವಾಟ್ಸ್​ಆ್ಯಪ್​ ಸಂದೇಶಗಳನ್ನು ಐಎಸ್‌ಐ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ವಾಟ್ಸ್​ಆ್ಯಪ್​ ಮೂಲಕ ಕಳುಹಿಸಲಾಗಿದೆ. ಅಲ್ಲದೆ, ಆರೋಪಿ ರಾಫೆಲ್​ ಜೆಟ್ಸ್​ ಫೋಟೋಗಳನ್ನು ಐಎಸ್​ಐ ಜತೆಗೆ ಹಂಚಿಕೊಂಡಿದ್ದಾನೆಂದು ವರದಿಗಳು ತಿಳಿಸಿವೆ.

ಆರೋಪಿಯು ಪ್ರಸ್ತುತ ಬಂಧನದಲ್ಲಿದ್ದಾನೆ ಮತ್ತು ಹೆಚ್ಚಿನ ಮಾಹಿತಿ ಪಡೆಯಲು ತನಿಖೆ ನಡೆಸಲಾಗುತ್ತಿದೆ. ಆತನೊಬ್ಬನೆ ಈ ಕೆಲಸ ಮಾಡಿದ್ದಾನಾ? ಅಥವಾ ಪಾಕಿಸ್ತಾನದ ಏಜೆನ್ಸಿಗಳಿಗೆ ಮಾಹಿತಿಯನ್ನು ರವಾನಿಸುವ ದೊಡ್ಡ ಜಾಲದ ಭಾಗವಾಗಿದ್ದಾನಾ? ಎಂಬ ಆಯಾಮದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net