

ಉತ್ತರ ಪ್ರದೇಶ: ಪ್ರೀತಿ ಮೂಡಲು ಕಾರಣಗಳು ಬೇಕಿಲ್ಲ. ಯಾವ ಕ್ಷಣದಲ್ಲಾದರೂ ಪ್ರೀತಿ ಹುಟ್ಟಿಕೊಳ್ಳಬಹುದು. ಇದಕ್ಕೆ ನಿದರ್ಶನವೆಂಬಂತೆ ಉತ್ತರ ಪ್ರದೇಶದ ಸನ್ವರ್ ಅಲಿ ಎಂಬಾತ ಇಂಡೋನೇಷ್ಯಾದ ಮಿಫ್ತಾಹುಲ್ ಎಂಬ ಹುಡುಗಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ.
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ತಹಸಿಲ್‌ನ ನಾರಾಯಣಪುರ ಗ್ರಾಮದ ನಿವಾಸಿ ಸನ್ವರ್ ಅಲಿ 2015 ರಲ್ಲಿ ಸ್ಪೋಕನ್ ಇಂಗ್ಲೀಷ್ ಕಲಿಯುತ್ತಿದ್ದಾಗ ಇಂಡೋನೇಷ್ಯಾದ ಮೆಡಾನ್‌ನಿಂದ ಮಿಫ್ತಾಹುಲ್ ಜನ್ನಾ ಎಂಬಾಕೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ನಂತರ ಇಬ್ಬರೂ ಮೆಸ್ಸೇಜ್ ಮೂಲಕ ಪರಸ್ಪರ ಮಾತನಾಡಿಕೊಂಡಿದ್ದಾರೆ.
2017ದಕ್ಷಿಣ ಭಾರತದಲ್ಲಿ ಉಂಟಾದ ಚಂಡಮಾರುತದಿಂದ ಸನ್ವರ್ ಅಲಿ ಕುಟಂಬಕ್ಕೆ ಸಾಕಷ್ಟು ತೊಂದರೆಯಾಗಿತ್ತು. ಈ ವಿಚಾರವನ್ನು ಸನ್ವರ್, ಮಿಫ್ತಾಹುಲ್ ಜನ್ನಾ ಬಳಿ ಹೇಳಿಕೊಂಡಿದ್ದ. ಚಂಡಮಾರುತದಿಂದ ಆದ ಅನಾಹುತವನ್ನು ಕೇಳಿ ಮಿಫ್ತಾಹುಲ್ ಸಾಕಷ್ಟು ನೊಂದುಕೊಂಡಿದ್ದಳು. ನಂತರ ನಿರಂತರವಾಗಿ ಸನ್ವರ್ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದಳು. ಈ ಘಟನೆ ಇವರಿಬ್ಬರು ಇನ್ನಷ್ಟು ಹತ್ತಿರವಾಗಲು ಕಾರಣವಾಗಿದೆ.
ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಆರು ತಿಂಗಳು ಕಳೆದ ಬಳಿಕ ಇವರಿಬ್ಬರು ತಮ್ಮೊಳಗೆ ಹುಟ್ಟಿಕೊಂಡಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ನಂತರ 2018ರಲ್ಲಿ ಮೊದಲ ಬಾರಿಗೆ ಇಂಡೋನೇಷ್ಯಾದಿಂದ ಸನ್ವರ್ನನ್ನು ಭೇಟಿ ಮಾಡಲೆಂದು ಮಿಫ್ತಾಹುಲ್ ಜನ್ನಾ ವಿಮಾನವೇರಿ ಬಂದಿದ್ದಾಳೆ. ಈ ವೇಳೆ ಒಟ್ಟಿಗೆ ಸಮಯ ಕಳೆದ ಈ ಜೋಡಿ, ಪರಸ್ಪರ ಒಪ್ಪಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರೆ. ದೇಶ ಬೇರೆ ಬೇರೆಯಾಗಿದ್ದರೂ, ಜಾತಿ ಮಾತ್ರ ಒಂದೇ ಆಗಿದ್ದರಿಂದ ಪೋಷಕರು ಅಡ್ಡಿ ಮಾಡದೆ, ಇವರಿಬ್ಬರ ವಿವಾಹಕ್ಕೆ ಒಪ್ಪಿಕೊಂಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ನೆರವೇರುತ್ತಿದೆ ಎನ್ನುವಾಗಲೇ ಮಿಫ್ತಾಹುಲ್ ಜನ್ನಾ ತಂದೆ ನಿಧನ ಹೊಂದಿದ್ದರು. ಹೀಗಾಗಿ ವಿವಾಹವನ್ನು ಮುಂದೂಡಿದ್ದರು. ಈ ವೇಳೆ ಮಿಫ್ತಾಹುಲ್ ಜನ್ನಾ, ಇಂಡೋನೇಷ್ಯಾದಲ್ಲಿ ಶಿಕ್ಷಕಿಯಾಗಿ ದುಡಿದು ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಸಾಕಿದ್ದಾಳೆ. ಇದೇ ವೇಳೆ 2019ರಲ್ಲಿ ಸನ್ವರ್ ಅಲಿ ಇಂಡೋನೇಷ್ಯಾಕೆ ತೆರೆಳಿ ತನ್ನ ಪ್ರಿಯತಮೆಯನ್ನು ಭೇಟಿಯಾಗಿ ಬಂದಿದ್ದ. ಇನ್ನೇನು ವಿವಾಹ ಮಾಡಿಕೊಳ್ಳಲು ನಿರ್ಧಾರವಾಗುತ್ತಿದ್ದಂತೆ ಕೋವಿಡ್, ಲಾಕ್ಡೌನ್ ಅಡ್ಡಗಾಲು ಹಾಕಿತ್ತು.
ಈ ಸಮಯದಲ್ಲಿ ಮಿಫ್ತಾಹುಲ್ ಜನ್ನಾ ತನ್ನ ಉನ್ನತ ವ್ಯಾಸಂಗವನ್ನೂ ಓದಿ ಪೂರ್ಣಗೊಳಿಸಿದ್ದಾಳೆ. ಇದೀಗ ಇವರಿಬ್ಬರು ಕಳೆದ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದಲ್ಲಿ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)