

ಲಖನೌ: ಪೊಲೀಸ್ ಠಾಣೆಯ ಹೊರಗೆ ಕುಳಿತು ಹುಕ್ಕಾ ಸೇವಿಸಿದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹೌಪುರ್ ಜಿಲ್ಲೆಯ ಠಾಣೆ ಹೊರಗೆ ಈ ಘಟನೆ ನಡೆದಿದೆ.
ಠಾಣೆಯ ಹತ್ತಿರದಲ್ಲೇ ಹುಕ್ಕಾ ಸೇವಿಸಿದ್ದಲ್ಲದೆ, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಯುವಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಯುವಕನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ ಮೇಲೆ ಬಂಧಿಸಲಾಗಿದೆ.
ಯುವಕನೊಬ್ಬ ಉತ್ತರ ಪ್ರದೇಶದ ಹಫೀಜ್ಪುರ ಪೊಲೀಸ್ ಠಾಣೆಯ ಹೊರಗಡೆ ಕುಳಿತು ಹುಕ್ಕಾ ಸೇದುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಇಷ್ಟಪಟ್ಟಿದ್ದ ವ್ಯಕ್ತಿ, ತನ್ನೊಂದಿಗೆ ಹುಕ್ಕಾ ತಂದಿದ್ದ ಎನ್ನಲಾಗಿದೆ. ವಿಡಿಯೋ ಚಿತ್ರೀಕರಣ ಮಾಡುವಾಗ ಆ ವ್ಯಕ್ತಿ ತಮ್ಮ ಗಮನಕ್ಕೆ ಬರಲಿಲ್ಲ ಎಂದು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆನ್ಲೈನ್ನಲ್ಲಿ ರೀಲ್ ಕಾಣಿಸಿಕೊಂಡ ನಂತರ ಯುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)