

ಲಕ್ನೋ; ಅಲಹಾಬಾದ್ ಹೈಕೋರ್ಟ್‌ನ ಇತ್ತೀಚಿನ ಆದೇಶದ ಬಳಿಕ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ, ರಾಜ್ಯದಲ್ಲಿ ಜಾತಿ ತಾರತಮ್ಯವನ್ನು ಕೊನೆಗೊಳಿಸುವ ಕಾರ್ಯವನ್ನು ಆರಂಭಿಸಿದೆ. ಉತ್ತರ ಪ್ರದೇಶ ಸರ್ಕಾರವು ಪೊಲೀಸ್ ದಾಖಲೆಗಳು, ಸಾರ್ವಜನಿಕ ಸ್ಥಳಗಳು ಮತ್ತು ವಾಹನಗಳಿಂದ ಜಾತಿ ಆಧಾರಿತ ಉಲ್ಲೇಖಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ.
ಸೆಪ್ಟೆಂಬರ್ 16 ರಂದು ಜಾತಿ ವೈಭವೀಕರಣವನ್ನು ರಾಷ್ಟ್ರ ವಿರೋಧಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತು. ಈ ಹಿನ್ನೆಲೆ ಭಾನುವಾರ ತಡರಾತ್ರಿಯಿಂದ ಎಲ್ಲಾ ಪೊಲೀಸ್ ಘಟಕಗಳು ಮತ್ತು ಜಿಲ್ಲಾಡಳಿತಗಳಿಗೆ ಈ ನಿರ್ದೇಶನ ನೀಡಲಾಗಿದೆ. ಈ ಎಲ್ಲಾ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ತಿಳಿಸಿದ್ದಾರೆ.
ಜಾತಿ ಸಂಬಂಧಿತ ಸ್ಟಿಕ್ಕರ್‌ಗಳು ಅಥವಾ ಘೋಷಣೆಗಳನ್ನು ಪ್ರದರ್ಶಿಸುವ ವಾಹನಗಳಿಗೆ ಈಗ ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲಾಗುತ್ತದೆ. ಜೊತೆಗೆ ಜಾತಿ ಆಧಾರಿತ ರ‍್ಯಾಲಿಗಳು ಮತ್ತು ರಾಜಕೀಯ ಉದ್ದೇಶಗಳೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಿಷೇಧಿಸುವುದಾಗಿ ಘೋಷಿಸಿದೆ.
(ಏಜೆನ್ಸೀಸ್)
ಅಧಿಕೃತ ಆದೇಶದಲ್ಲಿ ಈ ಬಗ್ಗೆ ತಿಳಿಸಿರುವ ದೀಪಕ್ ಕುಮಾರ್, ಎಲ್ಲಾ ರಾಜ್ಯ ಇಲಾಖೆಗಳಿಗೆ ಬಂಧನ ಮೆಮೊಗಳು, ಎಫ್‌ಐಆರ್‌ಗಳು ಅಥವಾ ಯಾವುದೇ ಇತರ ಪೊಲೀಸ್ ದಾಖಲೆಗಳಲ್ಲಿ ಜಾತಿಗಳನ್ನು ಉಲ್ಲೇಖಿಸದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ಹೊರಡಿಸಿದ್ದಾರೆ. ಪೊಲೀಸ್ ಸೂಚನಾ ಫಲಕಗಳು, ವಾಹನಗಳಲ್ಲಿ ಜಾತಿ ಆಧಾರಿತ ಉಲ್ಲೇಖಗಳನ್ನು ಸಹ ತೆಗೆದುಹಾಕಬೇಕು ಎಂದು ಸೂಚನೆ ಹೊರಡಿಸಲಾಗಿದೆ. ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಜಾತಿ ಗುರುತನ್ನು ವೈಭವೀಕರಿಸುವ ಅಥವಾ ಪ್ರದೇಶಗಳನ್ನು ನಿರ್ದಿಷ್ಟ ಜಾತಿಗೆ ಸೇರಿದವು ಎಂದು ಗುರುತಿಸುವ ಫಲಕಗಳನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ವ್ಯಕ್ತಿಯ ಪೋಷಕರ ಹೆಸರುಗಳನ್ನು ಮಾತ್ರ ಗುರುತಿಸುವಿಕೆಗಾಗಿ ಬಳಸಬಹುದು ಎಂದು ಹೇಳಲಾಗಿದೆ.