ಸಾಲಗಾರರ ಮನೆ ಮೇಲೆ ‘ಹರಾಜಿಗಿದೆ’ ಬರಹ

25-RNR-07
Published on

ರಾಣೆಬೆನ್ನೂರ: ಮೈಕ್ರೋ ಫೈನಾನ್ಸ್​ನವರ ಅಟ್ಟಹಾಸ ತಾಲೂಕಿನಲ್ಲಿ ಮುಂದುವರಿದಿದ್ದು, ಗುಡ್ಡದ ಆನ್ವೇರಿ ಗ್ರಾಮದಲ್ಲಿ ಸಾಲಗಾರರೊಬ್ಬರ ಮನೆ ಗೋಡೆ ಮೇಲೆ ‘ಮನೆ-ಆಸ್ತಿ ಹರಾಜಿಗಿದೆ’ ಎಂದು ಬರೆದಿರುವುದು ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದ ಮಂಜುಳಾ ಮತ್ತು ಸಿದ್ದಪ್ಪ ಎಂಬುವವರ ಮನೆ ಮೇಲೆ ಹರಾಜು ಕುರಿತು ಗೋಡೆ ಬರಹ ಬರೆಯಲಾಗಿದೆ. ಇವರು ನಗರದ ಮೈಕ್ರೋ ಫೈನಾನ್ಸ್​ನಲ್ಲಿ 2.54 ಲಕ್ಷ ರೂ. ಸಾಲ ಪಡೆದಿದ್ದರು. 3 ವರ್ಷಗಳಿಂದ ಕಂತು ತುಂಬುತ್ತಿದ್ದರು. ಆದರೆ, 6 ತಿಂಗಳ ಹಿಂದೆ ಮಂಜುಳಾ ಅವರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಆಗಿದೆ. ಇದರಿಂದಾಗಿ ದುಡಿಮೆಗೆ ಹೋಗಲಾಗದ ಸ್ಥಿತಿಗೆ ಮಂಜುಳಾ ತಲುಪಿದ್ದರು. ಅಲ್ಲದೆ, ಆಸ್ಪತ್ರೆಯ ಖರ್ಚು ಭರಿಸಲಾಗದೆ ದಂಪತಿಯಿಬ್ಬರೂ ಹಾಸನಕ್ಕೆ ದುಡಿಯಲು ಹೋಗಿದ್ದಾರೆ. ಆದ್ದರಿಂದ ಮೈಕ್ರೋ ಫೈನಾನ್ಸ್​ನವರು ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದು ಮನೆಯ ಗೋಡೆ ಮೇಲೆ ಮನೆ-ಆಸ್ತಿ ಹರಾಜು ಇದೆ ಎಂದು ಗೋಡೆ ಬರಹ ಬರೆದು ಹೋಗಿದ್ದಾರೆ.

ಆದರೆ, ಸಾಲದ ಕಂತು ತುಂಬದ ಕುರಿತು ಯಾವುದೇ ನೋಟಿಸ್ ನೀಡದೆ ಏಕಾಏಕಿ ಬಂದು ಗೋಡೆ ಮೇಲೆ ಬರೆದು ಹೋಗಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೂಲಿ ಕೆಲಸ ಮಾಡಿ ಜೀವನ ಮಾಡುವ ನಮ್ಮ ಮೇಲೆ ಮೈಕ್ರೋ ಫೈನಾನ್ಸ್​ನವರು ವಿನಾಕಾರಣ ದರ್ಪ ತೋರುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net