

ಆಸ್ತಿಗಾಗಿ ತಂದೆ ಕೊಲೆಗೆ ಸುಪಾರಿ ಕೊಟ್ಟ ಮಗ ಅರೆಸ್ಟ್
ಬೇರೋಬ್ಬ ಮಹಿಳೆಗೆ ಆಸ್ತಿ ಬರೆದುಕೊಡುವ ಆತಂಕದಿಂದ ಈ ನಿರ್ಧಾರ
ತಂದೆ ಕೊಲೆ ಮಾಡಲು ಆರು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ ಸುಬ್ರತ್
ನೋಯ್ಡಾ: ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಔಷಧ ಉದ್ಯಮಿ ವಿನೀತ್ ಮೊನಾಚಾ ಅವರ ಬರ್ಬರ ಹತ್ಯೆ ಪ್ರಕರಣ ಭಾರೀ ಸದ್ದು ಮಾಡಿತ್ತು. ಮೊದಲಿಗೆ ಮಗನ ಪತ್ನಿ ಈ ಕೊಲೆಯನ್ನು ಮಾಡಿಸಿದ್ದಾರೆ ಎನ್ನುವ ಶಂಕೆ ಇತ್ತು. ಆದರೆ, ಪೊಲೀಸರು ನಡೆಸಿದ ತೀವ್ರ ತನಿಖೆಯಿಂದ ಅಸಲಿ ಕೊಲೆಗಾರ ಯಾರು ಎನ್ನುವುದನ್ನು ಬೆಳಕಿಗೆ ಬಂದಿದೆ.
ಹೌದು, ವಿನೀತ್ ಮೊನಾಚಾ(60) ಅವರ ಪುತ್ರ ಸುಬ್ರತ್ ತನ್ನ ತಂದೆ ಕೊಲೆಗೆ ಸುಪಾರಿ ಕೊಟ್ಟಿದ್ದಾನೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ತನ್ನ ಅಪ್ಪ ಬೇರೊಬ್ಬ ಮಹಿಳೆಗೆ ಆಸ್ತಿಯನ್ನು ವರ್ಗಾಯಿಸುತ್ತಾರೆ ಎನ್ನುವ ಭಯದಿಂದಾಗಿ ಕೊಲ್ಲಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಪುರದ ಇಂದಿರಾ ನಗರ ಪ್ರದೇಶದಲ್ಲಿರುವ ಅವರ ಫ್ಲಾಟ್‌ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ 60 ವರ್ಷದ ವಿನೀತ್ ಮನೋಚಾ ಅವರ ಮೃತದೇಹ ಸೆಪ್ಟೆಂಬರ್ 5 ರಂದು ಪತ್ತೆಯಾಗಿತ್ತು. ಕೊಲೆಯಾದ ಸಮಯದಲ್ಲಿ ಉದ್ಯಮಿ ಒಬ್ಬರೆ ಮನೆಯಲ್ಲಿ ಇದ್ದರು. ಮಗ- ಆತನ ಪತ್ನಿ ಶಾಲು ಹಾಗೂ ಮಕ್ಕಳು ಪಾರ್ಟಿಗೆ ತೆರಳಿ ಮನೆಗೆ ಬೆಳಗಿನ ಜಾವ ನಾಲ್ಕಕ್ಕೆ ಮನೆಗೆ ವಾಪಸ್ಸಾಗಿದ್ದರು.
ಪ್ರಾಥಮಿಕ ತನಿಖೆಯಲ್ಲಿ, ಪೊಲೀಸರು ಪ್ರಕರಣದ ಮಾಸ್ಟರ್ ಮೈಂಡ್ ವಿನೀತ್ ಅವರ ಸೊಸೆ ಎಂದು ಹೇಳಿದ್ದರು. ಮನೆ ತುಂಬಾ ಸಿಸಿಟಿವಿ. ಪ್ರತಿ ಖರ್ಚಿಗೂ ಲೆಕ್ಕ ಕೇಳುವುದನ್ನು ಸಹಿಸಲಾಗದೆ ಸೊಸೆ ಮಾವನನ್ನು ಕೊಲ್ಲಿಸಿದ್ದಾಳೆ. ಅದೂ ವಿನೀತ್ ಮೊನಾಚಾ ಅವರಡಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಹಾಗೂ ಸಹಚರ ರಾಜ್‌ಕಿಶೋರ್ ಅವರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರು ಎನ್ನಲಾಗಿತ್ತು.
ಪಾರ್ಟಿಯಲ್ಲಿದ್ದರೂ ಸುಬ್ರತ್ನ ಹೊಸ ಸಿಮ್ನಿಂದ ಆರು ಬಾರಿ ಕರೆ ಬಂದಿತ್ತು. ಇದನ್ನು ಕಂಡುಕೊಂಡ ಪೊಲೀಸರು ಸಿಡಿಆರ್, ತಾಂತ್ರಿಕ ಪುರಾವೆ, ವೈಜ್ಞಾನಿಕವಾಗಿ ತನಿಖೆ ನಡೆಸಿದರು. ಸಿಸಿಟಿವಿ ಪರಿಶೀಲನೆ ನಡೆಸಿದರು. ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ, ಕೊಲೆ ಮಾಡಿ ಪತ್ನಿ ಶಾಲು ಮೇಲೆ ಆರೋಪ ಹೊರಿಸಲು ಸುಬ್ರತ್ ಹೇಳಿದ್ದ ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ. ಆಗ, ಕೊಲೆಯ ಮುಖ್ಯ ಪಾತ್ರಧಾರಿ ಶಾಲು ಅಲ್ಲ ಮಗ ಸುಬ್ರತ್ ಎನ್ನುವುದು ಗೊತ್ತಾಗಿದೆ.
ಆಸ್ತಿ ಕಳೆದುಕೊಳ್ಳುವ ಆತಂಕ
ಸೆ.23ರಂದು ಸುಬ್ರತ್ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ತಂದೆಗೆ ಹಲವಾರು ಮಹಿಳೆಯರೊಂದಿಗೆ ಸಂಬಂಧ ಇತ್ತು. ಇತ್ತೀಚೆಗೆ ಆಕೆಯೊಂದಿಗೆ ಜೀವಿಸಲು ಶುರು ಮಾಡಿ ಎಲ್ಲಿ ಅವರಿಗೆ ಆಸ್ತಿ ಬರೆದುಕೊಡುವ ಆತಂಕವಿತ್ತು. ಅಷ್ಟೇ ಅಲ್ಲದೆ ಸುಬ್ರತ್ಗೆ 50 ಸಾವಿರ ಇಎಂಐ ಕಟ್ಟುವ ಹೊರೆ ಇತ್ತು. ತಂದೆ ತಿಂಗಳ ಖರ್ಚಿಗೆ ಕೊಡುತ್ತಿದ್ದದ್ದು ನಲವತ್ತು ಸಾವಿರ ರೂಪಾಯಿ. ಹೀಗಾಗಿ ಕೊಂದು ಆಸ್ತಿ ಕಬಳಿಸಲು ನಿರ್ಧರಿಸಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಕಾನ್ಪುರದ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಹೇಳಿದರು.
ಸುಬ್ರತ್ ತನ್ನ ತಂದೆಯನ್ನು ಕೊಲ್ಲಲು 6 ಲಕ್ಷ ರೂಪಾಯಿ ಹಣ ಕೊಡುವುದಾಗಿ ಭರವಸೆ ಕೊಟ್ಟಿದ್ದ. ಒಂದು ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಶಾಲು ಹೆಸರನ್ನು ಹೇಳುವಂತೆ ಹೇಳಿದ್ದ. ಹೊಸ ಸಿಮ್ ಖರೀದಿ ಮಾಡಿದ್ದ ವಿಶಾಲ್ ಪಾರ್ಟಿಯಲ್ಲಿದ್ದ ಸುಬ್ರತ್ಗೆ ಆರು ಬಾರಿ ಕರೆ ಮಾಡಿದ್ದ ಎಂದು ವಿಶಾಲ್ ಬಾಯ್ಬಿಟ್ಟಿದ್ದಾನೆ. ಸುಬ್ರತ್ ಮತ್ತು ವಿಶಾಲ್ ನಡುವಿನ ಚಾಟ್‌ಗಳನ್ನು ರಿಕವರ್ ಮಾಡಿದಾಗ ಇಬ್ಬರ ನಡುವೆ ನಡೆದ ಕೊಲೆ ಸಂಚು ಸಂದೇಶಗಳಿಂದ ಇವರೇ ನಿಜವಾದ ಆರೋಪಿಗಳು ಎನ್ನುವುದು ಪತ್ತೆಯಾಗಿದೆ.
ಪತಿಯ ಈ ಸಂಚಿನಿಂದ ಮೊದಲು ಬಂಧನಕ್ಕೆ ಒಳಗಾಗಿದ್ದ ಸುಬ್ರತ್ ಪತ್ನಿ. ಈ ಕೊಲೆ ಕೇಸ್ನಲ್ಲಿ ತನ್ನ ಪಾತ್ರವಿಲ್ಲ ಎಂದಿದ್ದರು. ಆಕೆಗೆ ಈ ಕೊಲೆ ಮಾಡುವ ಬಗ್ಗೆ ಮೊದಲೇ ಗೊತ್ತಿತ್ತಾ ಎನ್ನುವುದು ಖಚಿತಪಡಿಸಿಕೊಳ್ಳಬೇಕಾಗಿದೆ. ಹೀಗಾಗಿ ಕ್ಲೀನ್ ಚಿಟ್ ಕೊಟ್ಟಿಲ್ಲ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಹೇಳಿದ್ದಾರೆ, (ಏಜೆನ್ಸೀಸ್)