ಕಾಂಗ್ರೆಸ್ ಸರ್ಕಾರದ ಅವಿವೇಕದ ನಿರ್ಧಾರಗಳು: ಬಿ.ವೈ.ವಿಜಯೇಂದ್ರ ತರಾಟೆ | Anti people stand

B.Y.Vijayendra
Published on

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವಿವೇಕತನದ ನಿರ್ಧಾರಗಳನ್ನು ಪದೇ ಪದೆ ತೆಗೆದುಕೊಳ್ಳುತ್ತಿದೆ. ಇದು ಜನ ವಿರೋಧಿ ಕ್ರಮ, ರಾಜ್ಯಕ್ಕೂ ಅಪಚಾರ,  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳ ಕತ್ತು ಹಿಚುಕುವ ಧೋರಣೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತರಾಟೆಗೆ ತೆಗೆದುಕೊಂಡರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನೀತಿ ಆಯೋಗದ ಮಹತ್ವದ ಸಭೆಗೆ ಸಿಎಂ ಸಿದ್ದರಾಮಯ್ಯ ಹೋಗಲಿಲ್ಲ. ಬೇರೆ ಪೂರ್ವನಿರ್ಧಾರಿತ ಕಾರ್ಯಕ್ರಮಗಳಿದ್ದರೆ ಪ್ರತಿನಿಧಿಯನ್ನು ಕಳುಹಿಸಬಹುದಾಗಿತ್ತು ಎಂದರು.

ಈ ಸಭೆಯಲ್ಲಿ ಬೇರೆ ಕಾಂಗ್ರೆಸ್ ರಾಜ್ಯಗಳ ಸಿಎಂಗಳು ಭಾಗವಹಿಸಿದ್ದರು. ನಮ್ಮ ರಾಜ್ಯದ ಸಿಎಂ ನೀತಿ ಆಯೋಗದ ಸಭೆಗೆ ಹೋಗದಿರೋದು ದುರದೃಷ್ಟಕರ. ಸಭೆಗೆ ಹೋಗದೇ ರಾಜ್ಯಕ್ಕೆ ಅಪಚಾರ ಎಸಗಿದ್ದಾರೆ, ದ್ರೋಹ ಬಗೆದಿದ್ದಾರೆ. ಸಿದ್ದರಾಮಯ್ಯ ಈ ರಾಜ್ಯದ ಸಿಎಂ ಆಗಿದ್ದಾರೋ? ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಆಗಿದ್ದಾರೋ? ಎಂದು ತಿಳಿಯದು.

ಈ ಹಂತಕ್ಕೆ ರಾಜಕಾರಣ ಸರಿಯಲ್ಲ, ಕೇಂದ್ರದ ಜತೆ ಸಂಘರ್ಷಕ್ಜೆ ಇಳಿಯಬಾರದು. ಸರ್ವಪಕ್ಷಗಳ ಸಭೆಗೆ ಪ್ರಧಾನಿ ಗೈರು ಹಾಜರಾಗಿದ್ದನ್ನು ಎತ್ತಿ ತೋರಿಸಲಾಗುತ್ತಿದೆ. ಸಿಎಂ ಗೆ ಹೇಗೆ ಬೇರೆ ಕಾರ್ಯಕ್ರಮಗಳಿದ್ದವೋ ಪ್ರಧಾನಿಗೂ ಬೇರೆ ಕಾರ್ಯಕ್ರಮಗಳಿದ್ದವು. ಆದರೆ ಸರ್ವಪಕ್ಷಗಳ ಸಭೆಗೆ ಕೇಂದ್ರ ಗೃಹ ಸಚಿವರು ಹಾಜರಾಗಿದ್ದರು. ನೀತಿ ಆಯೋಗದ ಸಭೆಗೆ ಸಿಎಂ ಹೋಗಲಿಲ್ಲ. ಪ್ರತಿನಿಧಿಯನ್ನು ಕಳುಹಿಸದಿರುವುದು ಖಂಡನೀಯ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ರಾಜಕಾರಣಿಗಳ ಹಿತಾಸಕ್ತಿ

ಮೈಸೂರು ಮಹಾರಾಜರು ಸ್ಥಾಪಿಸಿದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ ಕಾರ್ಖಾನೆಗೆ ಭವ್ಯ ಇತಿಹಾಸವಿದೆ. ಮೈಸೂರು ಸ್ಯಾಂಡಲ್ ಸೋಪ್ ಗೆ ಅದರದ್ದೇ ಆದ ಬ್ರ್ಯಾಂಡ್ ಇದೆ. ಆದರೆ ಯಾರೋ ಪರಿಣತರು ಹೇಳಿದರು ಎಂದು ಹೇಳಿ ನಟಿ ತಮನ್ನಾ ಭಾಟಿಯಾ ಅವರಿಗೆ 6.20 ಕೋಟಿ ರೂ ಬಂಡವಾಳ ಹೂಡಿ ರಾಯಭಾರಿಯನ್ನಾಗಿ ಮಾಡಿರುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಆಕ್ಷೇಪಿಸಿದರು.

ಹೂಡಿಕೆಯಾದ ಮೊತ್ತದಲ್ಲಿ 60 ಲಕ್ಷ ರೂ.ನಷ್ಟು ಲಾಭ ಬರುವುದು ಕಷ್ಟಕರ. ಒಂದು ವರ್ಷದ ವಹಿವಾಟು ನಂತರ ಹೊರಬರಲಿದೆ. ಯಾವ ತಜ್ಞರು ಸಲಹೆ ಮಾಡಿದ್ದಾರೋ ಅವರ ಪಟ್ಟಿಯನ್ನು ನೀಡಲಿ. ಈ ತೀರ್ಮಾನದಲ್ಲಿ ರಾಜ್ಯದ ಹಿತಾಸಕ್ತಿ ಇದೆಯೋ? ರಾಜಕಾರಣಿಗಳ ಹಿತಾಸಕ್ತಿ ಇದೆಯೋ? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ತಾಂತ್ರಿಕ ನೆಪವೊಡ್ಡಿ ಸರ್ಕಾರಿ ಆಸ್ಪತ್ರೆಗಳಲ್ಲಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಬಡವರ ವಿರೋಧಿಯಾಗಿದೆ. ಎನ್.ರವಿಕುಮಾರ್ ಆಡಿದ ಮಾತುಗಳಿಗೆ ಕ್ಷಮೆ ಕೇಳಿದ್ದರೂ ಮೂರನೇ ವ್ಯಕ್ತಿ ಮೂಲಕ ದೂರು ದಾಖಲಿಸಿಕೊಳ್ಳಲಾಗಿದೆ. ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದಕ್ಕೆ ಮಾನನಷ್ಟ ದಾವೆ ಹೂಡಲು ತೀರ್ಮಾನಿಸಿದ್ದು, ಇಂತಹ ಬೆದರಿಕೆ ತಂತ್ರಗಳಿಗೆ ಬಿಜೆಪಿ ಹೆದರುವುದಿಲ್ಲ ಎಂದು ಬಿ.ವೈ.ವಿಜಯೇಂದ್ರ ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net