ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ’, ನ.7 ಮತ್ತು 8ರಂದು ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಾಡಿನ ಸಂಸ್ಕೃತಿ ಬಿಂಬಿಸುವ ‘ಕೃಷ್ಣೆಯಿಂದ ಕಾವೇರಿವರೆಗೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಣಣರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮೊದಲ ದಿನದಂದು ಪತ್ತೆದಾರಿ ಪ್ರಣವ್ ಜತೆ ಕೇಸಿನ ಜಾಡು ಹಿಡಿಯಿರಿ, ರಾಗ ಮತ್ತು ಅನುರಣನ, ಕಸದಲ್ಲರಳಿದ ಕಥೆಗಳು, ಸಣ್ಣ ದೀಪಗಳು, ದೊಡ್ಡ ಯೋಜನೆಗಳು, ಸಾವಿರ ಕನ್ನಡಿಗಳ ನಡುವಿನೋಲಾಟ, ಸುತ್ತಮುತ್ತ ಗೊತ್ತಾ, ನಮ್ಮ ಜಲ-ನಮ್ಮ ನೆಲ, ನರಕಾಸುರ ವಧೆ, ಸಾಂಪ್ರದಾಯಿಕ ಧಾನ್ಯಗಳು ಮತ್ತು ಬೀಜಗಳು, ಭಾವ ಲಹರಿ, ಬದುಕಿನ ಬಣ್ಣಗಳಿಗೆ ನಗುವಿನ ಹೊಸ ಸ್ಪರ್ಶ ಕಾರ್ಯಕ್ರಮಗಳು ನಡೆಯಲಿವೆ.
2ನೇ ದಿನದಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕಥಾವನ ಮಕ್ಕಳ ಪುಸ್ತಕ ಸರಣಿ, ಕರ್ನಾಟಕದ ಕರಕುಶಲ ಕಥೆಗಳು, ಮೈಸೂರು ಮಲ್ಲಿಗೆ, ಕರ್ನಾಟಕದ ನೇಯ್ಗೆಯ ನಿಧಿಗಳು, ಸಾಂಪ್ರದಾಯಿಕ ತಿನಿಸುಗಳು, ಜಗವೆಲ್ಲ ತೊಯ್ದ ಬೆಳಕು-ರಾಜ್, ಜನಪದ ಸಂಗೀತ ಸಂಭ್ರಮ, ಎಐ ಕಾಲದಲ್ಲಿ ಕನ್ನಡಿಗರ ಉದ್ಯಮಶೀಲತೆ, ಪರಂಪರೆಯ ಛಾಯಗ್ರಹಣ ಮತ್ತು ಪ್ರಿಂಟ್‌ಗಳ ಗ್ರಹಿಕೆ, ಗಜಲ್ ಯಾನ ಮಧುರ ಗಾನ, ಮರಳು ಮಾಧುರ್ಯ ಕಾರ್ಯಕ್ರಮಗಳು ಇರಲಿವೆ.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮುಖ್ಯ ಸಂವಹನ ಅಧಿಕಾರಿ ಸುಧೀಶ್ ವೆಂಕಟೇಶ್ ಮಾತನಾಡಿ, ವಿಪ್ರೋ ಕಂಪನಿಯ ಯಶಸ್ವಿಗೆ ಕರ್ನಾಟಕದ ಕೊಡುಗೆ ದೊಡ್ಡದಿದೆ. ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 2.5 ಲಕ್ಷ ಉದ್ಯೋಗಿಗಳ ಪೈಕಿ ಅತಿ ಹೆಚ್ಚು ಕನ್ನಡಿಗರು ಇದ್ದಾರೆ. ಕಂಪನಿಯ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ನಿಧಿಯಿಂದ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮಿಡ್‌ಡೇ ಮಿಲ್ ಮತ್ತು ಶಿಕ್ಷಕರಿಗೆ ಕೌಶಲ ವೃದ್ಧಿ,ವಿದ್ಯಾರ್ಥಿ ವೇತನ ಯೋಜನೆ ಸೇರಿ ಸರ್ಕಾರಿಯೇತರ ಸಂಸ್ಥೆಗಳಿಗೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಇದೀಗ, ನಾಡಿನ ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕರಕುಶಲ ವಸ್ತುಗಳ ಪರಿಷತ್ತು ಅಧ್ಯಕ್ಷೆ ಚಂದ್ರಜೈನ್, ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ ನಿರ್ದೇಶಕಿ ಅನುಪಮಾ ಶೇಖರ್, ಫೈನ್ ಆರ್ಟ್ ಫೋಟೋಗ್ರಾರ್ ಕಾರ್ತಿಕ್ ಸಂಪ್ರತಿ ಇದ್ದರು.
ಪರಭಾಷಿಕರಿಗೆ ಕನ್ನಡದ ಸಂಸ್ಕೃತಿ ಪಸರಿಸಲು ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ ಸಹಯೋಗದಲ್ಲಿ ರಾಜ್ಯದ ಶ್ರೀಮಂತ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಜಾನಪದ ಪರಂಪರೆ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಕಲಾವಿದರು, ಸಾಹಿತಿಗಳು, ಪರಭಾಷಿಕರು ಸೇರಿ 2 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ.
ಎಸ್.ವಿ.ಮಂಜುನಾಥ್, ನಿರ್ದೇಶಕ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಕನ್ನಡ ಉಪಕ್ರಮ ವಿಭಾಗ.