ಅಕಾಲಿಕ ಮಳೆಯಿಂದ ತತ್ತರಿಸಿದ ರೈತ

26 SND 02
ಸಿಂಧನೂರು ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಭತ್ತದ ಬೆಳೆ ನಷ್ಟವಾಗಿರುವುದು.
Published on

ಸಿಂಧನೂರು: ತಾಲೂಕಿನಲ್ಲಿ ಇನ್ನೇನು ಒಂದೆರಡು ವಾರ ಕಾದಿದ್ದರೆ ಸಂಪೂರ್ಣ ಪ್ರಮಾಣದ ಭತ್ತ ರೈತರ ಕೈಸೇರಬೇಕಿತ್ತು. ಆದರೆ, ಅಕಾಲಿಕ ಮಳೆ ರೈತರನ್ನು ಹೈರಾಣ ಮಾಡಿದ್ದರಿಂದ 23,287 ಎಕರೆ ಪ್ರದೇಶ ಭತ್ತ ನಷ್ಟವಾಗಿದ್ದು ಈಗಾಗಲೇ ವರದಿ ಜಿಲ್ಲಾಧಿಕಾರಿಗಳ ಕೈಸೇರಿದ್ದು ಪರಿಹಾರದ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಕಳೆದ ಎರಡು ವಾರಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಭತ್ತ ಶೇ.25 ನೆಲಕಚ್ಚಿತ್ತು.

ಇದರಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಒಳಗಾಗಬೇಕಿತ್ತು. ಕಳೆದ ಬೇಸಿಗೆಯ ಎರಡನೆ ಬೆಳೆಯು ಜಲಾಶಯದಲ್ಲಿ ನೀರಿಲ್ಲದಿದ್ದರಿಂದ ಪಡೆದಿರಲಿಲ್ಲ. ಮುಂಗಾರಿನಲ್ಲಿ ಜಲಾಶಯಕ್ಕೆ ಉತ್ತಮ ಒಳಹರಿವು ಬಂದಿದ್ದರಿಂದ ಸಂಪೂರ್ಣ ಪ್ರಮಾಣದಲ್ಲಿ ತಾಲೂಕಿನಾದ್ಯಂತ ಭತ್ತ ನಾಟಿ ಮಾಡಲಾಗಿತ್ತು. ಬೆಳೆಯು ಸಮೃದ್ಧವಾಗಿ ಇನ್ನೇನು ಒಂದೆರಡು ವಾರ ಕಳೆದಿದ್ದರೆ, ಬಹುತೇಕ ಪ್ರದೇಶದ ಭತ್ತ ಕಟಾವು ಆಗುತ್ತಿತ್ತು.

ನವೆಂಬರ್ ಎರಡನೇ ವಾರದಲ್ಲಿ ಬಿದ್ದ್ದ ಅಕಾಲಿಕ ಮಳೆ ರೈತರನ್ನು ಕಷ್ಟದ ದವಡೆಗೆ ನೂಕಿದೆ. ಭತ್ತ ನೆಲಕ್ಕೆ ಬಿದ್ದಿದ್ದರಿಂದ ನಷ್ಟವನ್ನು ರೈತರು ಅನುಭವಿಸಿದ್ದರು. ಕೊನೆಗೂ ಸರ್ಕಾರ ಕೂಡ ತಾಲೂಕು ಆಡಳಿತಕ್ಕೆ ಸೂಚನೆ ನೀಡಿ, ಕೂಡಲೇ ನಷ್ಟದ ವರದಿ ತಯಾರಿಸಲು ಸೂಚನೆ ನೀಡಿತ್ತು. ತಹಸೀಲ್ದಾರ್ ಅರುಣ್ ದೇಸಾಯಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್ ನೇತೃತ್ವದ ತಂಡದಲ್ಲಿ ಕಂದಾಯ ಅಧಿಕಾರಿಗಳು ನಾಲ್ಕೈದು ದಿನಗಳಲ್ಲಿಯೇ ನಷ್ಟದ ವರದಿ ಪಡೆದು, ತಾಲೂಕು ಆಡಳಿತಕ್ಕೆ ಸಲ್ಲಿಸಿದ್ದು ಅಲ್ಲಿಂದ ಜಿಲ್ಲಾಧಿಕಾರಿಗೂ ನಷ್ಟದ ವರದಿ ಕಳಿಸಲಾಗಿದೆ.

ಇನ್ನೇನಿದ್ದರೂ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕು. ಈಗ ರೈತರು ನಷ್ಟದ ಪರಿಹಾರದ ಕಡೆಗೆ ಮುಖ ಮಾಡಿದ್ದಾರೆ. 2015 ರಲ್ಲಿ ತಾಲೂಕಿಗೆ ಅತೀ ಹೆಚ್ಚು ಪರಿಹಾರ ಮಂಜೂರಾಗಿ, ಬಹುತೇಕ ರೈತರಿಗೆ ನಿರೀಕ್ಷೆ ಮಾಡಿದಷ್ಟು ಪರಿಹಾರ ಜಮಾವಣೆಯಾಗಿತ್ತು. ನಂತರ ಅಂಥ ಪರಿಹಾರ ಬಂದಿಲ್ಲ. ಎಕರೆಗೆ 2-3 ಸಾವಿರ ರೂ. ನೀಡಿ ಕೈ ತೊಳೆದುಕೊಂಡರೆ ರೈತರಿಗೆ ಯಾವುದಕ್ಕೂ ಉಪಯೋಗವಾಗುವುದಿಲ್ಲ ಎನ್ನುವುದು ರೈತರ ಅಭಿಪ್ರಾಯ.

ಎಲ್ಲೆಲ್ಲಿ ಬೆಳೆ ನಷ್ಟ ತಾಲೂಕಿನ ಹೆಡಗಿನಾಳ ಹೋಬಳಿ ವ್ಯಾಪ್ತಿಯಲ್ಲಿ 96 ಹೆಕ್ಟೇರ್ ಭತ್ತ, ಬಾದರ್ಲಿ ಹೋಬಳಿಯಲ್ಲಿ 396 ಹೆಕ್ಟೇರ್, ಜಾಲಿಹಾಳ ಹೋಬಳಿಯಲ್ಲಿ 1,743 ಹೆಕ್ಟೇರ್, ತುರ್ವಿಹಾಳ ಹೋಬಳಿಯಲ್ಲಿ 142 ಹೆಕ್ಟೇರ್, ಕುನ್ನಟಗಿ ಹೋಬಳಿಯಲ್ಲಿ 2,288 ಹೆಕ್ಟೇರ್, ಹುಡಾ ಹೋಬಳಿಯಲ್ಲಿ 610 ಹೆಕ್ಟೇರ್, ಸಿಂಧನೂರು ಹೋಬಳಿಯಲ್ಲಿ 424 ಹೆಕ್ಟೇರ್, ಜವಳಗೇರಾ ಹೋಬಳಿಯಲ್ಲಿ 611 ಹೆಕ್ಟೇರ್, ಗುಂಜಳ್ಳಿ ಹೋಬಳಿಯಲ್ಲಿ 826 ಹೆಕ್ಟೇರ್, ಸಾಲಗುಂದ ಹೋಬಳಿಯಲ್ಲಿ 1,180 ಹೆಕ್ಟೇರ್ ಹಾಗೂ ಗೊರೇಬಾಳ ಹೋಬಳಿಯಲ್ಲಿ 1,110 ಹೆಕ್ಟೇರ್ ಪ್ರದೇಶ ಸೇರಿ ಒಟ್ಟು 9,425 ಹೆಕ್ಟೇರ್(23,287) ಪ್ರದೇಶದಲ್ಲಿ ನಷ್ಟ ಅಂದಾಜಿಸಿ, ತಾಲೂಕು ಆಡಳಿತ ಜಿಲ್ಲಾಧಿಕಾರಿಗೆ ವರದಿಯನ್ನು ನ.24 ಕ್ಕೆ ಸಲ್ಲಿಕೆ ಮಾಡಿದೆ. ಪರಿಹಾರಕ್ಕೆ ಮೊರೆ ತಾಲೂಕಿನಲ್ಲಿ ಈಗಾಗಲೇ ಸರ್ವೇ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಬೆಳೆ ನಷ್ಟವಾಗಿದ್ದು ಈಗ ತಾಲೂಕು ಆಡಳಿತ ಸಲ್ಲಿಸಿರುವ ವರದಿ ಪ್ರಕಾರವೇ ಬೆಳೆ ನಷ್ಟಕ್ಕೆ ತುರ್ತಾಗಿ ಪರಿಹಾರ ಬಿದ್ದರೆ ಸಾಕು ಎನ್ನುವುದು ರೈತರ ಒತ್ತಾಯವಾಗಿದೆ. ಈಗಾಗಲೇ ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿ, ಎಂಎಲ್‌ಸಿ ಬಸನಗೌಡ ಬಾದರ್ಲಿ ಸರ್ಕಾರದ ಗಮನಕ್ಕೆ ತಾಲೂಕಿನಲ್ಲಿ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ಗಮನಕ್ಕೆ ತಂದು ಪರಿಹಾರ ನೀಡಲು ಮನವಿ ಮಾಡಿದ್ದಾರೆ.

ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ನಷ್ಟವುಂಟಾದ ಸಂದರ್ಭದಲ್ಲಿ ಕಂದಾಯ ಸಚಿವರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಿಂಚಿನ ಕಾರ್ಯದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸರ್ವೇ ನಡೆಸಿದ್ದು ತಾಲೂಕಿನಲ್ಲಿ 9,425 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಷ್ಟವುಂಟಾಗಿದೆ. ಜಿಲ್ಲಾಧಿಕಾರಿಗೆ ನಷ್ಟದ ವರದಿ ಸಲ್ಲಿಸಿದ್ದೇವೆ. ಅರುಣ್ ದೇಸಾಯಿ ತಹಸೀಲ್ದಾರ್, ಸಿಂಧನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net