

ಕಿರುವಾರ ಎಸ್. ಸುದರ್ಶನ್ ಕೋಲಾರ
ಪ್ರಸಕ್ತ ಸಾಲಿನಲ್ಲಿ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಬೆಳೆಗೆ ಹಾಕಿರುವ ಬಂಡವಾಳ ಪಡೆದುಕೊಳ್ಳಲು ಹರಸಹಾಸ ಪಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಏನು ಮಾಡುತ್ತಿವೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಮಾರುಕಟ್ಟೆಯಲ್ಲಿ ತೋತಾಪುರಿ ಮಾವು ಆರಂಭದಲ್ಲಿ 8 ರೂ.ಗೆ ಮಾರಾಟವಾಗಿ, ದಿನಕಳೆದಂತೆ ಬೇಡಿಕೆ ತಗ್ಗಿ, ಸುಮಾರು 15 ದಿನಗಳ ಕಾಲ 5 ರೂ. ನಿಂದ 5.5 ರೂ.ಗೆ ಮಾರಾಟವಾಗುತ್ತಿತ್ತು. ಈಗ ಎರಡು ದಿನಗಳಿಂದ 5 ರೂ. ಗಡಿಯೂ ಬಿಟ್ಟುಕೊಟ್ಟಿದ್ದು, ಕೆಜಿ 3 ರೂ.ಗೆ ಮಾರಾಟವಾಗುತ್ತಿದೆ.
ಸತತ ಒಂದು ತಿಂಗಳಿಂದ ಮಾವು ಬೆಳೆಗಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ನೆರವಿಗೆ ಧಾವಿಸಲು ಸರ್ಕಾರ, ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಇದುವರೆಗೂ ರೈತರ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಏನು ಮಾಡಿದೆ ಎಂಬುದನ್ನು ವಿಜಯವಾಣಿ ಅವಲೋಕಿಸಿದೆ.
ಮಾವು ಬೆಳೆಗಾರರಿಗೆ ಬೆಂಬಲವಾಗಿ ನಿಂತ ಬಿಜೆಪಿ, ಜೆಡಿಎಸ್ ನಾಯಕರು ಬಂದ್, ಪ್ರತಿಭಟನೆ ಹೀಗೆ ಹಲವು ವಿಚಾರದಲ್ಲಿ ಪಾಲ್ಗೊಂಡಿದ್ದಾರೆ. ಈಗ ಮಾವು ಬೆಳೆಗಾರರ ಪ್ರತಿಭಟನೆಯೂ ವಿಧಾನಸೌಧ ಮೆಟ್ಟಿಲೇರಿದ್ದು, ಬೆಂಬಲ ಬೆಲೆ ನಿಗದಿಗೆ ಗಡುವು ನೀಡಲಾಗಿದೆ. ಇದಕ್ಕೆ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
* ರೈತರ ನೆರವಿಗೆ ಧಾವಿಸಲಿ
ರೈತರು ಸಮಸ್ಯೆ ಎದುರಿಸುತ್ತಿದ್ದರೆ ಸ್ಪಂದಿಸಬೇಕಾದ ಜವಾಬ್ದಾರಿ ಪ್ರತಿನಿಧಿಗಳ ಮೇಲೆ ಇರುತ್ತದೆ.
ಜಿಲ್ಲೆಯಲ್ಲಿ 4 ಮಂದಿ ಕಾಂಗ್ರೆಸ್ ಶಾಸಕರು, ಇಬ್ಬರು ಜೆಡಿಎಸ್ ಶಾಸಕರಿದ್ದಾರೆ. ಹಿಂದೆ ಕೋಲಾರವನ್ನು ಪ್ರತಿನಿಧಿಸುತ್ತಿದ್ದ ಸಚಿವರಾದ ಕೃಷ್ಣಬೈರೇಗೌಡ, ಕೆ.ಎಚ್.ಮುನಿಯಪ್ಪ, ಚಿಂತಾಮಣಿ ಸಚಿವ ಡಾ.ಎಂ.ಸಿ.ಸುಧಾಕರ್ ಇದ್ದಾರೆ. ಈ ಪೈಕಿ ಎಂ.ಸಿ.ಸುಧಾಕರ್ ಧ್ವನಿ ಎತ್ತಿದರೇ ಹೊರತು, ಉಳಿದ ಸಚಿವರು ಚಕಾರ ಎತ್ತದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
* ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಗೊಂದಲ
ಸಿದ್ದರಾಮಯ್ಯ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದ ಪತ್ರದಲ್ಲಿ ಕ್ವಿಂಟಾಲ್ಗೆ 12,000 ರೂ.ಗೆ ಮಾರಾಟವಾಗಿದ್ದ ಮಾವು ಈಗ 3,000 ರೂ.ಗೆ ಇಳಿದಿದೆ. ಕೃಷಿ ಬೆಲೆ ಆಯೋಗ ಶಿಫಾರಸಿನ ಪ್ರಕಾರ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್ 5,466 ರೂ. ಆಗುತ್ತದೆ ಎಂದು ಪತ್ರದಲ್ಲಿ ಅಂಕಿ&ಅಂಶ ನಮೂದು ಮಾಡಿದ್ದು, ಇದು ಗೊಂದಲ ಸೃಷ್ಟಿಸಿದೆ. ಕ್ವಿಂಟಾಲ್ ಬದಲು ಟನ್ ಲೆಕ್ಕ ಬರೆಯಬೇಕಿತ್ತು. ಕಡೇ ಪಕ್ಷ ಕೇಂದ್ರ ಸರ್ಕಾರದಿಂದ ಪಲ್ಪ್ ಮೇಲಿರುವ ಜಿಎಸ್ಟಿ ಶೇ.12 ರಿಂದ ಶೇ.5ಕ್ಕೆ ಇಳಿಸಬೇಕು ಎಂದು ಕೋರಿಲ್ಲ ಎಂಬುದು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
* ಜನಪ್ರತಿನಿಧಿಗಳು ಏನ್ಹೇಳ್ತಾರೆ...?
ತೋತಾಪುರಿಗೆ ಬೆಂಬಲ ಬೆಲೆ ಘೋಷಣೆ
ಚಿತ್ತೂರು ಜಿಲ್ಲೆಯಲ್ಲಿ ತೋತಾಪುರಿ ಕೆಜಿಗೆ 12 ರೂ. ಬೆಲೆ ನಿಗದಿಪಡಿಸಿದ್ದ ಬೆನ್ನಲೇ ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಎಂಎಲ್ಸಿ ನಜೀರ್ ಅಹ್ಮದ್, ಶಾಸಕರಾದ ಕೊತ್ತೂರು ಜಿ.ಮಂಜುನಾಥ್ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಆಂಧ್ರದ ಮಾದರಿಯಲ್ಲಿ ಜಿಲ್ಲೆಯಲ್ಲೂ ತೋತಾಪುರಿಗೆ ಬೆಂಬಲ ಬೆಲೆ ಘೋಷಣೆಗೆ ಒತ್ತಾಯಿಸಿದ್ದೇವೆ. ಎರಡ್ಮೂರು ದಿನಲ್ಲಿ ಸರ್ಕಾರ ಬೆಲೆ ಘೋಷಣೆ ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಭರವಸೆ ನೀಡಿದ್ದಾರೆ.
* ಸಂಸ್ಕರಣಕ್ಕೆ ಸಹಕರಿಸಲಿ
ಜಿಲ್ಲೆಯ ಅತಿ ಹೆಚ್ಚು ಮಾವು, ಟೊಮ್ಯಾಟೊ ಬೆಳೆಯುತ್ತಾರೆ. ಆದರೆ ಇದುವರೆಗೂ ಸಂಸ್ಕರಣ ಟಕ ಸ್ಥಾಪನೆ ಮಾಡಿಲ್ಲ. ರಾಜ್ಯ ಸರ್ಕಾರವು ಕಾಳಜಿ ತೋರದಿದ್ದರೆ ಕೇಂದ್ರದಿಂದ ಸಹಕಾರ ನೀಡಲಾಗುತ್ತದೆ. ಬೆಲೆ ವಿಚಾರದಲ್ಲಿ ರಾಜ್ಯ ಸರ್ಕಾರವು ನಿರ್ಧಾರ ಕೈಗೊಳ್ಳಬೇಕು, ಅದು ಬಿಟ್ಟು ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದೆ. ಅದೇ ರೀತಿ ರಾಜ್ಯ ಸರ್ಕಾರ ಸಂಸ್ಕರಣಾ ಟಕಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
* ಭೂಪಟದಲ್ಲಿ ಇದೆ ಅಂತ ಗುರುತಿಸಿ
ಕೋಲಾರ, ಚಿಕ್ಕಬಳ್ಳಾಪುರ ಕರ್ನಾಟದ ಭೂಪಟದಲ್ಲಿ ಇಲ್ಲ ಎಂದು ಸರ್ಕಾರ ಭಾವಿಸಿರಬೇಕು. ಅದರಿಂದಲೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಾವು ಕೇಳ್ತಿರೋದು ಕುಡಿಯಲು ನೀರು, ಮಾವಿಗೆ ಬೆಂಬಲ ಬೆಲೆ. ಜೂ.19ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬೆಲೆ ಘೋಷಿಸಬೇಕು. ಯಾರಪ್ಪನ ಸ್ವತ್ತು ಕೇಳುತ್ತಿಲ್ಲ, ಆಂಧ್ರದಲ್ಲಿ ಬೆಂಬಲ ಬೆಲೆ ಇದೆ, ರಾಜ್ಯ ಸರ್ಕಾರವು ನಿರ್ಧಾರ ತೆಗೆದುಕೊಂಡು ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಿ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಒತ್ತಾಯಿಸಿದರು.
* ಕೋಲಾರ-ಚಿಕ್ಕಬಳ್ಳಾಪುರ ಬಂದ್ ಎಚ್ಚರಿಕೆ
ಸಿಎಂ, ಮಂತ್ರಿಗಳನ್ನು ಭೇಟಿ ಮಾಡಿದ್ದು, ಯಾರು ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಿಂದೆ ಇದೇ ಪರಿಸ್ಥಿತಿ ಎದುರಾಗಿದ್ದಾಗ ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿದ ತಕ್ಷಣ ಬೆಂಬಲ ಬೆಲೆ ಘೋಷಣೆ ಮಾಡಿದರು. ಸರ್ಕಾರ ಎರಡು ದಿನದಲ್ಲಿ ಕ್ರಮಕೈಗೊಳ್ಳದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಬಂದ್ಗೆ ಕರೆ ನೀಡ್ತೆವೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಚ್ಚರಿಕೆ ನೀಡಿದರು.
* ಬೆಳೆಗಾರರ ವಿಚಾರದಲ್ಲಿ ಕೆಲವರಿಂದ ಶೋ ಅಪ್
ರೈತರ ಸಮಸ್ಯೆಗಳ ಬಗ್ಗೆ ಧೈರ್ಯವಾಗಿ ಮಾತನಾಡಿದ್ದೇವೆ, ಮಾವು ಬೆಳೆಗಾರರ ವಿಚಾರದಲ್ಲೂ ಸಿಎಂ ಇಲಾಖೆಯ ಸಚಿವರೊಂದಿಗೆ ಮಾತನಾಡಿದ್ದೇವೆ. ಕೆಲವರು ಶ್ರೀನಿವಾಸಪುರಕ್ಕೆ ಭೇಟಿ ನೀಡಿ ಶೋ ಅಪ್ ಮಾಡಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದು ಬೆಂಬಲ ಬೆಲೆ ನಿಗದಿಪಡಿಸಲಾಗುವುದು ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.