

ಹೊಸನಗರ: ಜಾಗತಿಕ ತಾಪಮಾನದಿಂದ ಭೂಕುಸಿತ, ಬಿರುಕು, ಪ್ರಕೃತಿಯ ಇನ್ನಿತರ ಅವಘಡಗಳಿಗೆ ಕಾರಣ ಎಂದು ಜಲತಜ್ಞ, ಜೀವವೈವಿಧ್ಯ ಮಂಡಳಿ ಪ್ರಶಸ್ತಿ ಪುರಸ್ಕೃತ ಚಕ್ರವಾಕ ಸುಬ್ರಹ್ಮಣ್ಯ ಹೇಳಿದರು.
ತಾಲೂಕಿನ ನಗರ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಪರಿಸರ ಜಾಗೃತಿ ವೇದಿಕೆ, ಶಾಲಾಭಿವೃದ್ಧಿ ಸಮಿತಿ, ಮತ್ತಿತರ ಸಂಘಟನೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಗತ್ತಿನ ತಾಪಮಾನದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ತಣ್ಣಗಿರಬೇಕಾದ ಮಲೆನಾಡಲ್ಲಿ ಕೂಡ ಉಷ್ಣಾಂಶ ಮಿತಿ ಮೀರುತ್ತಿರುವುದು ಕಳವಳಕಾರಿ. ಹೆಗಲತ್ತಿ, ಕುಂದಗಲ್ ಭೂಕುಸಿತ, ಬಿರುಕು ಹವಾಮಾನ ವೈಪರೀತ್ಯಕ್ಕೆ ಸಾಕ್ಷಿ ಎಂಬಂತಿದೆ. ಅತಿಯಾಗಿ ಪ್ಲಾಸ್ಟಿಕ್ ಬಳಕೆ, ಮಲೆನಾಡು ಭಾಗದಲ್ಲಿ ಅವೈಜ್ಞಾನಿಕ ಯೋಜನೆಗಳು ಕೂಡ ಪರಿಸರಕ್ಕೆ ಮಾರಕವಾಗುತ್ತಿವೆ ಎಂದರು.
ಪರಿಸರದಲ್ಲಿ ಆಗುತ್ತಿರುವ ವಿಷಮ ಬದಲಾವಣೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದು ತಿಳಿಸಿದರು.
ಡಾ. ಜಿ.ಸುಧಾಕರ್ ಮಾತನಾಡಿ, ಸುಬ್ರಹ್ಮಣ್ಯ ಅವರ ಪರಿಸರ ಕಾಳಜಿ ಮಾದರಿ. ಹಲವಾರು ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿ ಪರಿಸರ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಮಕ್ಕಳಿಗೆ ಸ್ವಂತ ವೆಚ್ಚದಲ್ಲಿ ಬಹುಮಾನ ನೀಡುತ್ತಿರುವುದು ಅಭಿನಂದನೀಯ ಎಂದರು.
ಪಟ್ಲ ಫೌಂಡೇಶನ್‌ನಿಂದ ಯಕ್ಷಗಾನ ತರಬೇತಿಗೂ ಚಾಲನೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಟಿ.ರಮೇಶ ಹಲಸಿನಹಳ್ಳಿ, ಉಪಾಧ್ಯಕ್ಷೆ ಅಶ್ವಿನಿ, ಮಾಜಿ ಅಧ್ಯಕ್ಷೆ ಶೈಲಜಾ, ಪಾಂಡುರಂಗ, ಭಾಸ್ಕರ್, ರಾಘವೇಂದ್ರ, ಉದಯ, ಉಮೇಶ್, ಪೂರ್ಣಿಮಾ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಇತರರಿದ್ದರು.