ಏರ್​ ಕಂಡೀಷನರ್​ಗಳಿಗೆ ಅಭೂತಪೂರ್ವ ಬೇಡಿಕೆ: ವಿದೇಶದಿಂದ ಹಾರಿಬರುತ್ತಿವೆ ಬಿಡಿಭಾಗಗಳು

air-1
Published on

ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಹೆಚ್ಚುತ್ತಿರುವ ನಿರಂತರ ಶಾಖದ ಅಲೆಯ ಪರಿಣಾಮವಾಗಿ ಏರ್​ ಕಂಡೀಷನರ್​ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದಾಖಲೆ ಪ್ರಮಾಣದ ಬೇಡಿಕೆಯನ್ನು ಪೂರೈಸಲು ತಯಾರಕರು ಏರ್​ ಕಂಡೀಷನರ್​ಗಳ ಬಿಡಿಭಾಗಗಳಾದ ಕಂಪ್ರೆಸರ್‌ಗಳು, ಕ್ರಾಸ್ ಫ್ಲೋ ಫ್ಯಾನ್‌/ ಮೋಟಾರ್‌ ಮತ್ತು ಪಿಸಿಬಿ ಸರ್ಕ್ಯೂಟ್‌ಗಳನ್ನು ಏರ್‌ಲಿಫ್ಟಿಂಗ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ.

ಭಾರತದ ಏರ್​ ಕಂಡೀಷರನ್​ ತಯಾರಕ ಕಂಪನಿಗಳು ಚೀನಾ, ತೈವಾನ್, ಥೈಲ್ಯಾಂಡ್, ಮಲೇಷ್ಯಾ ಮತ್ತು ಜಪಾನ್‌ನಂತಹ ಅನೇಕ ದೇಶಗಳ ಜಾಗತಿಕ ಪೂರೈಕೆದಾರರಿಂದ ಬಿಡಿಭಾಗಗಳನ್ನು ತುರ್ತಾಗಿ ವಾಯುಮಾರ್ಗದ ಮೂಲಕ ತರಿಸಿಕೊಳ್ಳುತ್ತಿವೆ.

ಈ ಬಿಡಿಭಾಗಗಳ ಪೂರೈಕೆಯು ಸಾಂಪ್ರದಾಯಿಕವಾಗಿ ಸಾಗರ ಸರಕು ಸಾಗಣೆಯ ಮೂಲಕ ಸಾಗುತ್ತದೆ. ಆದರೆ, ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಬೇಡಿಕೆಗೆ ಅನುಗುಣವಾಗಿ ತ್ವರಿತ ಉತ್ಪಾದನೆ ಕೈಗೊಳ್ಳಲು ಬಿಡಿಭಾಗಗಳ ಏರ್​ಲಿಫ್ಟಿಂಗ್​ ಮಾಡಲಾಗುತ್ತಿದೆ. ತಾಮ್ರ ಮತ್ತು ಅಲ್ಯೂಮಿನಿಯಂನಂತಹ ಲೋಹಗಳ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಏರ್​ ಕಂಡೀಷನರ್​ ತಯಾರಕರು ಬೆಲೆಗಳನ್ನು ಶೇಕಡಾ 4-5 ರಷ್ಟು ಹೆಚ್ಚಿಸಿದ್ದಾರೆ.

ಇದಲ್ಲದೆ, ಏರ್​ ಕಂಡೀಷನರ್​ಗಳನ್ನು ಅಳವಡಿಸಲು ಒಂದು ವಾರ ಅಥವಾ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಾಗುತ್ತಿದೆ.

ರೂಮ್ ಹವಾನಿಯಂತ್ರಣ ಉದ್ಯಮವು ಕಳೆದ ಮೂರು ತಿಂಗಳಲ್ಲಿ ಅಂದಾಜು 50 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ, ಇದು ನಿರೀಕ್ಷೆಗಳನ್ನು ಮೀರಿದೆ ಎಂದು ಡೈಕಿನ್ ಏರ್ ಕಂಡೀಷನಿಂಗ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕನ್ವಾಲ್ಜೀತ್ ಜಾವಾ ಹೇಳಿದ್ದಾರೆ.

ಉದ್ಯಮವು ಶೇ. 25-30 ರಷ್ಟು ಬೆಳವಣಿಗೆಗೆ ಸಿದ್ಧವಾಗಿರುತ್ತದೆ. ಬೇಡಿಕೆಯಲ್ಲಿ ಶೇ. 70-80 ರಷ್ಟು ಏರಿಕೆಗೆ ಯಾರೂ ಯೋಜಿಸಿಲ್ಲ. ಶೇ. 70-80ರಷ್ಟು ಬೆಳವಣಿಗೆ ಇದ್ದಾಗ ಕೊರತೆ ಎದುರಾಗುತ್ತದೆ, ಒಂದೋ ಏರ್‌ಲಿಫ್ಟ್ ಮಾಡಬೇಕು ಇಲ್ಲವೇ ಮಾರಾಟವನ್ನು ಬಿಟ್ಟುಬಿಡಬೇಕು. ಒಂದು ವರ್ಷದಲ್ಲಿ ಮಾರಾಟ ಮಾಡುವಷ್ಟು ಏರ್​ ಕಂಡೀಷರನ್​ಗಳನ್ನು ಈ ಋತುವಿನ ಮೂರೇ ತಿಂಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ಬ್ಲೂ ಸ್ಟಾರ್‌ನ ವ್ಯವಸ್ಥಾಪಕ ನಿರ್ದೇಶಕ ಬಿ ತ್ಯಾಗರಾಜನ್ ಹೇಳಿದ್ದಾರೆ.

"ಮಾರ್ಚ್‌ನಲ್ಲಿ ಶೇ. 40, ಏಪ್ರಿಲ್‌ನಲ್ಲಿ ಶೇ. 80 ಮತ್ತು ಮೇನಲ್ಲಿ ಶೇ. 70ರಷ್ಟು ಬೆಳವಣಿಗೆಯಾಗಿದೆ. ಜೂನ್‌ನಲ್ಲಿ ಇನ್ನೂ ಶೇ. 70 ರಷ್ಟು ಬೆಳವಣಿಗೆ ಕಾಣಲಿದೆ" ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net