

ಜಾಗತಿಕ ಸಾಫ್ಟ್ವೇರ್ ದೈತ್ಯ ಮೈಕ್ರೋಸಾಫ್ಟ್ನ ಸೇವೆಗಳಲ್ಲಿ ಶುಕ್ರವಾರ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರ ಅಡಚಣೆ ಉಂಟಾಯಿತು. ಪ್ರಮುಖವಾಗಿ ವಿಮಾನಯಾನ, ಬ್ಯಾಂಕಿಂಗ್, ಷೇರುಪೇಟೆ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿತು. ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್ಒಡಿ) ಎರರ್ಗೆ ಹಲವು ಉದ್ಯಮಗಳು ಬೆಚ್ಚಿಬಿದ್ದವು. ಕ್ರೌಡ್ಸ್ಟ್ರೈಕ್ನ ಈ ಸಮಸ್ಯೆ ಉದ್ಯಮಗಳಿಗೆ ಕರಾಳ ಶುಕ್ರವಾರವಾಗಿ ಮಾರ್ಪಟ್ಟಿತು.
ಅಮೆರಿಕದ ಸೈಬರ್ ಸೆಕ್ಯುರಿಟಿ ಸಂಸ್ಥೆ ಕ್ರೌಡ್ಸ್ಟ್ರೈಕ್ ತನ್ನ ತಂತ್ರಾಂಶದಲ್ಲಿ ಮಾಡಿದ ಒಂದು ಅಪ್ಡೇಟ್ನ ವ್ಯತಿರಿಕ್ತ ಪರಿಣಾಮ ಮೈಕ್ರೋಸಾಫ್ಟ್ ಮೇಲಾಯಿತು. ಇದರಿಂದಾಗಿ ಜುಲೈ 19ರಂದು (ಶುಕ್ರವಾರ) ಜಗತ್ತಿನಾದ್ಯಂತ ಏರ್ಲೈನ್ಸ್ ಸೇವೆ, ಟಿವಿ ಟೆಲಿಕಾಸ್ಟ್, ಬ್ಯಾಂಕಿಂಗ್ ಹಾಗೂ ಹಲವು ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಕ್ಕೆ ಅಡಚಣೆ ಉಂಟಾಯಿತು. ಜಾಗತಿಕವಾಗಿ ಸುಮಾರು 1,400 ಫ್ಲೈಟ್ಗಳು ಹಾರಾಟ ರದ್ದುಗೊಳಿಸಿದ್ದರಿಂದ, ಪ್ರಯಾಣಿಕರು ಪರದಾಡುವಂತಾಯಿತು. ಆನ್ಲೈನ್ ಸೇವೆಗಳು ಸ್ಥಗಿತಗೊಂಡಿದ್ದರಿಂದ ಹಲವು ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ಗಳನ್ನು ಕೈಬರಹದಲ್ಲಿ ಬರೆದು ಕೊಡಲಾಯಿತು.
ಮೈಕ್ರೋಸಾಫ್ಟ್ನ ತಪು್ಪ ಅಲ್ಲದಿದ್ದರೂ, ಜಗತ್ತಿನ ಬಲಾಢ್ಯ ಕಂಪನಿಗಳು ಕೂಡ, ಒಂದೇ ದೊಡ್ಡ ಕಂಪನಿಯ ಮೇಲೆ ಅವಲಂಬಿತವಾಗಿರುವುದರ ಅಡ್ಡಪರಿಣಾಮಕ್ಕೆ ಶುಕ್ರವಾರದ ಬೆಳವಣಿಗೆ ಸಾಕ್ಷಿಯಾಯಿತು.
ಬಿಎಸ್ಒಡಿ ಸಮಸ್ಯೆ: ಜುಲೈ 19ರ ಬೆಳಗ್ಗೆ ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್ಒಡಿ) ಸಮಸ್ಯೆ ಜಗತ್ತಿನಾದ್ಯಂತ ಕಂಡುಬಂತು. ಬಿಎಸ್ಒಡಿ, ಕ್ರಿಟಿಕಲ್ ಎರರ್ ಸ್ಕ್ರೀನ್ ಆಗಿದ್ದು, ವಿಂಡೋಜ್ ಆಪ್ರೇಟಿಂಗ್ ಸಿಸ್ಟಮ್ ಮೇಲೆ ಗೋಚರಿಸುತ್ತದೆ. ಈ ಎರರ್ ಆದಾಗ ಕಂಪ್ಯೂಟರ್ ತನ್ನಿಂದತಾನೇ ರಿಸ್ಟಾರ್ಟ್ ಆಗುತ್ತದೆ ಮತ್ತು ಈ ಹಂತದಲ್ಲಿ ಕಂಪ್ಯೂಟರ್ನಲ್ಲಿನ ದತ್ತಾಂಶ (ಡೇಟಾ)ಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಟರ್ವಿುನಲ್ನಲ್ಲಿ ಸಿಕ್ಕಿಹಾಕಿಕೊಂಡ ಪ್ರಯಾಣಿಕರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಹೊರಟಿದ್ದ ವಿಮಾನಗಳ ಪ್ರಯಾಣಿಕರಿಗೆ ಬೋರ್ಡಿಂಗ್ ಆಗಲು ಸಾಧ್ಯವಾಗಲಿಲ್ಲ. ಪರಿಣಾಮ, ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದರು. ಬೋರ್ಡಿಂಗ್ ಪಾಸ್ ಪಡೆಯಲು ಸಾಧ್ಯವಾಗದೆ, ಮುಂದಕ್ಕೆ ಹೋಗಲಾಗದೆ ತೊಂದರೆಗೆ ಒಳಗಾದರು. ಆರಂಭಿಕ ಹಂತದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ ಸರಿಯಾದ ಮಾಹಿತಿ ಒದಗಿಸುವಲ್ಲಿ ವಿಫಲವಾದ್ದರಿಂದ, ಪ್ರಯಾಣಿಕರ ಆತಂಕ ಮತ್ತಷ್ಟು ಹೆಚ್ಚಿತು. ದೆಹಲಿ ವಿಮಾನ ನಿಲ್ದಾಣದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ.
ವಿಮಾನಯಾನ ಸಂಸ್ಥೆ ಇಂಡಿಗೋ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ನೀಡಿ, ‘ಮೈಕ್ರೋಸಾಫ್ಟ್ ಸೇವೆ ಸ್ಥಗಿತದಿಂದ ನಮ್ಮ ವ್ಯವಸ್ಥೆಗಳಿಗೆ ತೊಂದರೆ ಆಗಿದೆ. ಇದು ಇತರ ಕಂಪನಿಗಳ ಮೇಲೂ ಪರಿಣಾಮ ಬೀರುತ್ತಿದೆ. ಬುಕಿಂಗ್, ಚೆಕ್ ಇನ್, ಬೋರ್ಡಿಂಗ್ ಪಾಸ್ ಮತ್ತು ವಿಮಾನ ಹಾರಾಟದ ಮೇಲೆ ಪರಿಣಾಮವಾಗಿದೆ’ ಎಂದು ತಿಳಿಸಿತು. ಏರ್ ಇಂಡಿಯಾ ಪ್ರತಿಕ್ರಿಯಿಸಿ, ‘ಪ್ರಸ್ತುತ ಮೈಕ್ರೋಸಾಫ್ಟ್ ಸ್ಥಗಿತದಿಂದಾಗಿ ನಮ್ಮ ಡಿಜಿಟಲ್ ವ್ಯವಸ್ಥೆಗಳ ಮೇಲೆ ತಾತ್ಕಾಲಿಕ ಪರಿಣಾಮವಾಗಿದೆ. ಅನನುಕೂಲಕ್ಕಾಗಿ ವಿಷಾದಿಸುತ್ತೇವೆ’ ಎಂದರೆ, ‘ಸ್ಪೈಸ್ ಜೆಟ್’ ಸಂಸ್ಥೆ, ‘ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಮ್ಮ ತಂಡವು ಕೆಲಸ ಮಾಡುತ್ತಿದೆ’ ಎಂದು ತಿಳಿಸಿತು.
ಪರಿಹಾರ ಯಾವಾಗ?: ಈ ಸಮಸ್ಯೆಯ ಪರಿಹಾರಕ್ಕೆ ಕೆಲವು ದಿನಗಳೇ ಬೇಕಾಗಬಹುದು. ಇಂಜಿನಿಯರ್ಗಳು ಪರಿಹಾರ ಕಂಡುಹಿಡಿಯುವಲ್ಲಿ ನಿರತರಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಕ್ರೌಡ್ಸ್ಟ್ರೈಕ್ ಭರವಸೆ ನೀಡಿದೆ. ಸದ್ಯಕ್ಕೆ, ತಾತ್ಕಾಲಿಕ ಪರಿಹಾರ ಒದಗಿಸಲಾಗಿದ್ದು, ವಿಂಡೋಸ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್ಗಳನ್ನು ಸೇಫ್ ಮೋಡ್ನಲ್ಲಿ ಬೂಟ್ ಮಾಡಬೇಕು.
ಸಮಸ್ಯೆಯ ಮೂಲ: ‘ಕ್ರೌಡ್ಸ್ಟ್ರೈಕ್’ ಎಂಬ ಸೈಬರ್ ಸೆಕ್ಯುರಿಟಿ ಸಾಫ್ಟ್ವೇರಿನ ಅಪ್ಡೇಟ್ ಮುಖಾಂತರ ಆದ ಸಮಸ್ಯೆ ಇದು. ಮೈಕ್ರೊಸಾಫ್ಟ್ ಸೇರಿದಂತೆ ಹಲವು ಕಂಪನಿಗಳು ಇದರ ಸೇವೆ ಪಡೆಯುತ್ತಿವೆ. ಕ್ರೌಡ್ಸ್ಟ್ರೆ ೖಕ್ ಒಳಗಿನ ತಾಂತ್ರಿಕ ದೋಷ ಮಾಹಿತಿ-ತಂತ್ರಜ್ಞಾನ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತು. ಕ್ರೌಡ್ಸ್ಟ್ರೈಕ್ನಲ್ಲಿನ ಇಡಿಆರ್ ಉತ್ಪನ್ನದಲ್ಲಿನ ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸುವ ಹಂತದಲ್ಲಿ ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್ಒಡಿ) ಸಮಸ್ಯೆ ಉಂಟಾಗಿದೆ. ಆದರೆ, ಅಪ್ಡೇಟ್ ಹಂತದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯನ್ನು ಮ್ಯಾನುಯೆಲ್ ಆಗಿಯೇ ಸರಿಪಡಿಸಬೇಕಿದ್ದು, ಪರಿಸ್ಥಿತಿಯನ್ನು ಸ್ವಲ್ಪ ಕ್ಲಿಷ್ಟಗೊಳಿಸಿದೆ. ಫಾಲ್ಕನ್ ಸೆನ್ಸರ್ ಸಾಫ್ಟ್ವೇರ್ ಸೂಟ್ನಲ್ಲಿ ಅಪ್ಡೇಟ್ನಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ತಜ್ಞರು ಪ್ರತಿಕ್ರಿಯಿಸಿದ್ದಾರೆ. ಕ್ರೌಡ್ಸ್ಟ್ರೈಕ್ ಮತ್ತು ಮೈಕ್ರೋಸಾಫ್ಟ್ ಎರಡೂ ಕಂಪನಿಗಳು ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಜಂಟಿ ಹೋರಾಟ ನಡೆಸುತ್ತಿವೆ.
ಮೈಕ್ರೋಸಾಫ್ಟ್ ಪ್ರತಿಕ್ರಿಯೆ: ‘ಆಂತರಿಕವಾಗಿ ಥರ್ಡ್ಪಾರ್ಟಿ ಸಾಫ್ಟ್ವೇರ್ಗಳ ಅಪ್ಡೇಟ್ ಪ್ರಕ್ರಿಯೆಯಲ್ಲಿ ಆದ ತಾಂತ್ರಿಕ ಅಡಚಣೆ ವಿಂಡೋಸ್ ಸಾಫ್ಟ್ ವೇರ್ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಇದನ್ನು ಆದಷ್ಟು ಬೇಗ ಪರಿಹರಿಸಲು ನಮ್ಮ ತಂಡ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ’ ಎಂದು ಮೈಕ್ರೋಸಾಫ್ಟ್ ವಕ್ತಾರರು ಹೇಳಿದ್ದಾರೆ.
ಕ್ರೌಡ್ಸ್ಟ್ರೈಕ್ ಎಂದರೆ...: ಅಮೆರಿಕ ಮೂಲದ ಒಂದು ಸೈಬರ್ ಸೆಕ್ಯುರಿಟಿ ಕಂಪನಿ ಕ್ರೌಡ್ಸ್ಟ್ರೈಕ್. ಜಾರ್ಜ್ ಕುರ್ಟ್ಜ್ 2011ರಲ್ಲಿ ಕ್ರೌಡ್ಸ್ಟ್ರೈಕ್ ಕಂಪನಿಯನ್ನು ಆರಂಭಿಸಿದರು. ಇವರೇ ಕಂಪನಿಯ ಹಾಲಿ ಸಿಇಒ. ಪ್ರಮುಖವಾಗಿ ಚೀನಾ, ರಷ್ಯಾ ಹಾಗೂ ಉತ್ತರ ಕೊರಿಯಾದ ಸೈಬರ್ ದಾಳಿ ಎದುರಿಸುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರಕ್ಕೆ ನೆರವಾಗುತ್ತಿತ್ತು. ಬೃಹತ್ ಸಂಸ್ಥೆಗಳು, ವಿಮಾನ ನಿಲ್ದಾಣ, ಬ್ಯಾಂಕ್ಗಳು ಇದನ್ನು ಬಳಸುತ್ತಿದ್ದವು. ಕ್ಲಿಷ್ಟಕರವಾದ ಸೈಬರ್ ದಾಳಿಯನ್ನು ಎದುರಿಸುವಲ್ಲಿ ಸಮರ್ಥವಾದ್ದರಿಂದ ಕಂಪನಿಯ ಪ್ರತಿಷ್ಠಿಯೂ ಹೆಚ್ಚಿತು. 2013ರ ಜೂನ್ನಲ್ಲಿ ಕಂಪನಿ ತನ್ನ ಮೊದಲ ತಂತ್ರಾಂಶ ಫಾಲ್ಕನ್ ಬಿಡುಗಡೆಗೊಳಿಸಿತು. ಅಪಾಯವನ್ನು ಬೇಗ ಪತ್ತೆ ಮಾಡುವುದು ಮತ್ತು ಗರಿಷ್ಠ ಭದ್ರತೆ ಒದಗಿಸುವುದು ಈ ತಂತ್ರಾಂಶದ ವೈಶಿಷ್ಟ್ಯ. ಚೀನಾ ಮಿಲಿಟರಿ ಅಮೆರಿಕದ ವಿರುದ್ಧ ಐದು ಬಾರಿ ನಡೆಸಿದ ದಾಳಿ ಕುರಿತು ಇದು ಮುಂಚಿತವಾಗಿಯೇ ತಿಳಿಸಿತ್ತು. ರಷ್ಯಾದ ‘ಎನರ್ಜಿಟಿಕ್ ಬಿಯರ್’ ಎಂಬ ಸೈಬರ್ ದಾಳಿಕೋರರ ತಂಡವನ್ನು ಎದುರಿಸಿತ್ತು. ಗೂಗಲ್ 2015ರಲ್ಲಿ ಕ್ರೌಡ್ಸ್ಟ್ರೈಕ್ ಕಂಪನಿಯಲ್ಲಿ ಹೂಡಿಕೆ ಮಾಡಿದೆ. 2019ರಲ್ಲಿ ಕ್ರೌಡ್ಸ್ಟ್ರೈಕ್ನ ಒಟ್ಟು ಮೌಲ್ಯ ಒಂದು ಶತಕೋಟಿ ಡಾಲರ್ಗೆ ಹೆಚ್ಚಿತು.
ತೊಂದರೆಗೀಡಾದ ಪ್ರಮುಖ ವಿಮಾನ ನಿಲ್ದಾಣಗಳು: ನವದೆಹಲಿ, ಚೆನ್ನೈ, ಬೆಂಗಳೂರು, ಮುಂಬೈ, ಹೈದರಾಬಾದ್, ಜೈಪುರ್, ಬರ್ಲಿನ್, ಪ್ರೇಗ್, ಅಮ್್ಟರ್ಡ್ಯಾಮ್ ಮ್ಯಾಡ್ರಿಡ್, ಬಾರ್ಸಿಲೋನಾ, ಲಂಡನ್, ಎಡಿನ್ಬರ್ಗ್, ಬ್ರಸೆಲ್ಸ್, ಸಿಡ್ನಿ, ಹಾಂಗ್ಕಾಂಗ್, ಲಿಸ್ಬನ್.
ತತ್ತರಿಸಿದ ವಿದೇಶಿ ಸಂಸ್ಥೆಗಳು: ಅಮೆರಿಕನ್ ಏರಲೈನ್ಸ್, ಡೆಲ್ಟಾ ಏರ್ಲೈನ್ಸ್, ಯುನೈಟೆಡ್ ಏರ್ಲೈನ್ಸ್, ಫ್ರಾಂಟಿಯರ್ ಏರ್ಲೈನ್ಸ್, ಅಲಿಜಿಯಂಟ್ ಏರ್ಲೈನ್ಸ್, ಸನ್ ಕಂಟ್ರಿ ಏರ್ಲೈನ್ಸ್, ರಯಾನ್ ಏರ್, ಏರ್ ಫ್ರಾನ್ಸ್, ಕ್ಯಾಥೆ ಪಿಸಿಫಿಕ್, ಯೂರೋವಿಂಗ್ಸ್, ಸ್ಕಾ್ಯಂಡಿನೇವಿಯನ್ ಏರ್ಲೈನ್ಸ್, ವ್ಯೂಲಿಂಗ್ ಏರ್ಲೈನ್ಸ್.
* ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್ಒಡಿ) ಸಮಸ್ಯೆಯಿಂದ ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆಗೆ ತೊಡಕುಂಟಾಯಿತು.
* ಭಾರತ ಸೇರಿದಂತೆ ಜಗತ್ತಿನ ಹಲವೆಡೆ ವಿಮಾನ ನಿಲ್ದಾಣಗಳಲ್ಲಿ ಆನ್ಲೈನ್ ಸೇವೆಗಳು ಕೆಲಸ ಮಾಡದೆ ಸಾವಿರಾರು ಪ್ರಯಾಣಗಳು ರದ್ದಾದವು.
* ವಿಮಾನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸ್ಥಗಿತಗೊಂಡಿತು.
* ಕೆಲ ಬ್ಯಾಂಕ್ಗಳ ವ್ಯವಹಾರ ಸ್ತಬ್ಧಗೊಂಡಿತು.
* ಹಲವೆಡೆ ವೈದ್ಯಕೀಯ ಸೇವೆಗಳು ಕಾರ್ಯನಿರ್ವಹಿಸದೆ ್ದ ಶಸ್ತ್ರಚಿಕಿತ್ಸೆಗಳು ಮುಂದೂಡಲ್ಪಟ್ಟವು.
* ಅಮೆರಿಕದ ಅಲಾಸ್ಕಾ ಸೇರಿ ಹಲವು ರಾಜ್ಯಗಳಲ್ಲಿ ವೈದ್ಯಕೀಯ ತುರ್ತು ವ್ಯವಸ್ಥೆಯ ಸಹಾಯವಾಣಿಗಳು ಕೆಲಸ ನಿರ್ವಹಿಸಲಿಲ್ಲ.
* ಪಾವತಿ ವ್ಯವಸ್ಥೆಗಳು, ಅಂತರ್ಜಾಲದ ಬ್ಯಾಂಕಿಂಗ್ ವ್ಯವಸ್ಥೆಗಳು ಸ್ತಬ್ಧವಾದವು.
* ನೇವಿಟೈರ್ ಡಿಪಾರ್ಚರ್ ಕಂಟ್ರೋಲ್ ಸಿಸ್ಟ್ಂ (ಎನ್ಡಿಸಿಸಿ) ಸೇವೆಯಲ್ಲಿ ಅಡಚಣೆ ಉಂಟಾಗಿದ್ದರಿಂದ, ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್ ಮತ್ತು ಆಕಾಶ್ ಏರ್ಲೈನ್ಸ್ ಪ್ರಯಾಣಿಕರನ್ನು ಭೌತಿಕವಾಗಿ ಪರೀಕ್ಷಿಸಿ, ಒಳಬಿಡಲಾಯಿತು. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೇ ಸರತಿಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಯಿತು. ಅಲ್ಲದೆ, ಕೈಯಿಂದ ಬರೆದ ಬೋರ್ಡಿಂಗ್ ಪಾಸ್ಗಳನ್ನು ನೀಡಲಾಯಿತು.
* ಅಮೆರಿಕದ ಪ್ರಮುಖ ವಿಮಾನ ಸೇವೆಗಳಾದ ಡೆಲ್ಟಾ ಏರ್ ಲೈನ್ಸ್, ಯುಎಸ್ ಏರ್ ಲೈನ್ಸ್ ವಿಮಾನಗಳ ಸೇವೆ ತಡೆಹಿಡಿಯಲಾಯಿತಾದರೂ, ಕೆಲ ಗಂಟೆಗಳ ಬಳಿಕ ವಿಮಾನ ಹಾರಾಟ ಮರುಆರಂಭವಾಯಿತು.
* ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್ ಜೆಟ್, ಆಕಾಶ್ ಏರ್ಲೈನ್ಸ್ ಸಂಸ್ಥೆಗಳು ಮೈಕ್ರೋಸಾಫ್ಟ್ ಸಾಫ್ಟ್ವೇರ್ನಲ್ಲಿ ಕಾಣಿಸಿಕೊಂಡಿರುವ ದೋಷದಿಂದಾಗಿ ತಮ್ಮ ಸಂಸ್ಥೆಯ ಅನೇಕ ವಿಮಾನಗಳ ಹಾರಾಟ ನಿಲ್ಲಿಸಿವೆ.
ಮೈಕ್ರೋಸಾಫ್ಟ್ ಸೇವೆಗಳಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಯಿಂದ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ತಾಂತ್ರಿಕ ಅಡಚಣೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲಾಗಿದೆ. ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತಂತೆ ಐಟಿ ಸಚಿವಾಲಯವು ಮೈಕ್ರೋಸಾಫ್ಟ್ನೊಂದಿಗೆ ಸಂಪರ್ಕದಲ್ಲಿದೆ. | ಅಶ್ವಿನಿ ವೈಷ್ಣವ್ ಮಾಹಿತಿ ಮತ್ತು ಪ್ರಸಾರ ಸಚಿವ