

ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೊಳಿಸಿದ್ದಲ್ಲದೆ, ಅದನ್ನು ಪದೇಪದೆ ವಿಸ್ತರಿಸುತ್ತಲೇ ಬಂದಿರುವ ಸರ್ಕಾರ ಇದೀಗ ನಿಧಾನವಾಗಿ ಅನ್ಲಾಕ್ ಪ್ರಕ್ರಿಯೆಯನ್ನು ಆರಂಭಿಸಿದಂತಿದೆ. ಅದನ್ನು ಸಾಬೀತುಪಡಿಸುವಂತೆ ಒಂದೊಂದೇ ಸೇವೆಗಳು ತೆರೆದುಕೊಳ್ಳುತ್ತಿವೆ.
ಅನ್ಲಾಕ್ ಪ್ರಕ್ರಿಯೆ ಒಂದು ಹಂತವಾಗಿ ಕೆಎಸ್ಆರ್ಟಿಸಿ ಈಗಾಗಲೇ ಸೇವೆಗೆ ಸಜ್ಜಾಗುತ್ತಿದ್ದು, ಆನ್ಲೈನ್ನಲ್ಲಿ ಮುಂಗಡ ಟಿಕೆಟ್ ಬುಕಿಂಗ್ಗೂ ಅವಕಾಶ ನೀಡಲು ಮುಂದಾಗಿದೆ. ಸದ್ಯದ ಮಾಹಿತಿ ಪ್ರಕಾರ ಜೂ. 8ರಿಂದಲೇ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, ಆ ಕುರಿತು ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿವೆ.
ಈ ನಡುವೆ ಮತ್ತೊಂದು ಹಂತದ ಅನ್ಲಾಕ್ ಗೋಚರವಾಗಿದೆ. ಅದೇನೆಂದರೆ ನಾಳೆಯಿಂದ ರಾಜ್ಯದಲ್ಲಿ ನೋಂದಣಿ ಕಚೇರಿಗಳು ತೆರೆಯಲಿವೆ. ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ರಿಜಿಸ್ಟ್ರಾರ್ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗಳು ನಾಳೆಯಿಂದಲೇ ತೆರೆಯಲಿವೆ. ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರ ಈ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.