

ಬೆಂಗಳೂರು: ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಹಗರಣದ ಉರುಳು ಹಲವರಿಗೆ ಸುತ್ತಿಕೊಳ್ಳುವ ಲಕ್ಷಣ ಗೋಚರಿಸಿದೆ. ಭೂಗೋಳಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ ಅಭ್ಯರ್ಥಿ, ಅತಿಥಿ ಉಪನ್ಯಾಸಕಿ ಸೌಮ್ಯ ಬಂಧನದ ಬೆನ್ನಲ್ಲೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ನಾಗರಾಜು ಮತ್ತು ಅವರ ಸಹೋದರಿಯ ಪುತ್ರಿಯನ್ನು ಮಲ್ಲೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ವಿಚಾರಣೆ ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ.
ಪೊಲೀಸ್ ವಿಚಾರಣೆಯಲ್ಲಿ ಸೌಮ್ಯ ಹಲವು ಮಾಹಿತಿ ಬಾಯ್ಬಿಟ್ಟಿದ್ದಾರೆ. ಆಕೆ ಕೊಟ್ಟ ಮಾಹಿತಿ ಮೇರೆಗೆ ನಾಗರಾಜು ಮತ್ತು ಅವರ ಸೋದರಿಯ ಪುತ್ರಿಯನ್ನು ವಶಕ್ಕೆ ಪಡೆದಿದ್ದಾರೆ. ‘ಕಳೆದ 7 ವರ್ಷಗಳಿಂದ ನನಗೆ ಪ್ರೊ.ನಾಗರಾಜ್ ಪರಿಚಯ. ಸಹಾಯಕ ಉಪನ್ಯಾಸಕರ ಹುದ್ದೆ ನೇಮಕಾತಿಯಲ್ಲಿ ಹೆಚ್ಚಿನ ಅಂಕ ಪಡೆಯುವ ಸಲುವಾಗಿ ಅವರಿಂದ ಸಹಾಯ ಪಡೆಯುತ್ತಿದ್ದೆ’ ಎಂದು ಸೌಮ್ಯ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆನ್ನಲಾಗಿದೆ.
‘2021ರ ನವೆಂಬರ್ನಲ್ಲಿ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ತಾಂತ್ರಿಕ ಸಮಸ್ಯೆಯಿಂದ 2 ಬಾರಿ ಅರ್ಜಿ ವಜಾಗೊಂಡಿದ್ದವು. 3ನೇ ಬಾರಿ ಎಲ್ಲವನ್ನೂ ಸರಿಪಡಿಸಿ ಅರ್ಜಿ ಸಲ್ಲಿಸಿದ್ದೆ. ಪ್ರೊ. ನಾಗರಾಜು, ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಶ್ನೆಪತ್ರಿಕೆ ತಯಾರಕರು ಎಂಬುದು ಗೊತ್ತಾಯಿತು. ಅದಕ್ಕಾಗಿ ಮಾರ್ಗದರ್ಶನಕ್ಕಾಗಿ ಮೈಸೂರಿನಲ್ಲಿನ ಅವರ ಮನೆಗೆ ಆಗಾಗ ಹೋಗಿ ಬರುತ್ತಿದ್ದೆ. ಪರೀಕ್ಷೆಗಾಗಿ ಅವರ ಮನೆಯಲ್ಲಿಯೇ ಓದಿಕೊಳ್ಳುತ್ತಿದ್ದೆ. ಇದರ ನಡುವೆ ಅವರ ರೂಮ್ಲ್ಲಿ ಕೆಲ ಪುಸ್ತಕಗಳು ಇದ್ದವು. ತೆರೆದ ಲಕೋಟೆಯಲ್ಲಿ ಕೈ ಬರವಣಿಗೆ ಮತ್ತು ಪ್ರಿಂಟೆಡ್ ಪೇಪರ್ ಇದ್ದವು. ಭೂಗೋಳಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಆಗಿದ್ದವು. ಅದಕ್ಕೆ ನನ್ನ ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡು ಗೂಗಲ್ ಡ್ರೖೆವ್ನಲ್ಲಿ ಸೇವ್ ಮಾಡಿಕೊಂಡಿದ್ದೆ. ಮನೆಗೆ ಹೋದ ಮೇಲೆ ನೋಟ್ಬುಕ್ನಲ್ಲಿ ಬರೆದುಕೊಂಡಿದ್ದೆ. ಅದೇ ಪ್ರಶ್ನೆಗಳಿಗೆ ಹೆಚ್ಚು ವ್ಯಾಸಂಗ ಮಾಡತೊಡಗಿದೆ. 4 ದಿನಗಳ ಬಳಿಕ ಪ್ರೊ.ನಾಗರಾಜು ಸಹೋದರಿ ಪುತ್ರಿ ಭೇಟಿ ಆಗಿದ್ದಳು. ಆಕೆಗೂ ರೂಮ್ಲ್ಲಿ ಭೂಗೋಳಶಾಸ್ತ್ರದ ಪ್ರಶ್ನೆಗಳು ಇರುವ ವಿಚಾರ ತಿಳಿಸಿದೆ. ಆಕೆಯ ಮೊಬೈಲ್ಗೆ ಫೋಟೋ ಕಳುಹಿಸಿದ್ದೆ.
ಇದಾದ ಮೇಲೆ ನನ್ನ ಸ್ನೇಹಿತೆ ಮಹಾಲಕ್ಷ್ಮಿ ಎಂಬಾಕೆ ವಾಟ್ಸ್ಆಪ್ಗೂ ಕಳುಹಿಸಿದೆ. ಮಹಾಲಕ್ಷ್ಮೀ, ನನಗೆ ಗೊತ್ತಿಲ್ಲದೆ ತನ್ನ ಸ್ನೇಹಿತ ರಾಮಕೃಷ್ಣ ಎಂಬಾತನ ಮೊಬೈಲ್ಗೆ ಫಾರ್ವರ್ಡ್ ಮಾಡಿದ್ದಳು. ಪರೀಕ್ಷೆ ಬರೆದ ಮೇಲೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದು ಗೊತ್ತಾಯಿತು. ಭಯಗೊಂಡು ಮೊಬೈಲ್ನಲ್ಲಿ ಇದ್ದ ಫೋಟೋಗಳನ್ನು ನಾಶ ಮಾಡಿದೆ’ ಎಂದು ತನಿಖಾಧಿಕಾರಿಗಳ ಮುಂದೆ ಸೌಮ್ಯ ಹೇಳಿಕೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
3ನೇ ಬಾರಿ ಅರ್ಜಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ 3 ಬಾರಿ ಸೌಮ್ಯ ಅರ್ಜಿ ಸಲ್ಲಿಸಿದ್ದರು. ‘ಮೊದಲನೇ ಬಾರಿ ಜನ್ಮ ದಿನಾಂಕ ತಪ್ಪಾಗಿ ನಮೂದಿಸಿದ್ದಕ್ಕೆ ಅರ್ಜಿ ವಜಾಗೊಂಡಿತ್ತು. 2ನೇ ಬಾರಿ ಆದಾಯ ಪ್ರಮಾಣಪತ್ರದ ದಿನಾಂಕದಲ್ಲಿ ವ್ಯತ್ಯಾಸವಾದ ಕಾರಣ ಆಗಲೂ ಸಾಧ್ಯವಾಗಲಿಲ್ಲ. 3ನೇ ಬಾರಿ ಎಲ್ಲವೂ ಸರಿಪಡಿಸಿ ಅರ್ಜಿ ಸಲ್ಲಿಸಿದ್ದೆ. ಏನಾದರೂ ಮಾಡಿ ಈ ಬಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂದು ಈ ರೀತಿ ಮಾಡಿದ್ದಾಗಿ’ ಸೌಮ್ಯ ಬಾಯ್ಬಿಟ್ಟಿದಾರೆೆ.
ಹಣಕಾಸಿನ ವ್ಯವಹಾರದ ತನಿಖೆ: ಪೊಲೀಸರು ಬಂಧಿತ ಸೌಮ್ಯ ಮೊಬೈಲ್ ಜಪ್ತಿ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಪ್ರೊ.ನಾಗರಾಜು ಮತ್ತು ಇತರ ಶಂಕಿತರ ನಡುವೆ ಹಣಕಾಸಿನ ವ್ಯವಹಾರವೇನಾದರೂ ನಡೆದಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಯುತ್ತಿದ್ದಾರೆ. ಆರೋಪಿತರ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಕರೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ: ಮಹಾಲಕ್ಷ್ಮೀ, ಲಿಖಿತ ಪರೀಕ್ಷೆ ದಿನದಂದು ತನ್ನ ಸ್ನೇಹಿತ ರಾಮಕೃಷ್ಣ ಎಂಬಾತನ ಮೊಬೈಲ್ ವಾಟ್ಸ್ಆಪ್ಗೆ ಪ್ರಶ್ನೆ ಕಳುಹಿಸಿದ್ದಳು. ಪರೀಕ್ಷೆ ಬರೆಯುವ ಒತ್ತಡದಲ್ಲಿ ರಾಮಕೃಷ್ಣ, ವಾಟ್ಸ್ಆಪ್ ನೋಡಿರಲಿಲ್ಲ. ಪರೀಕ್ಷಾ ಕೊಠಡಿಯಿಂದ ಹೊರಬಂದ ಮೇಲೆ ಮೊಬೈಲ್ ನೋಡಿಕೊಂಡಾಗ ಮಹಾಲಕ್ಷ್ಮಿ ಕಳುಹಿಸಿದ್ದ ಪ್ರಶ್ನೆಗಳೇ ಪರೀಕ್ಷೆಯಲ್ಲಿ ಬಂದಿದ್ದವು. ಆಗ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದರು.