

ರಾಯ್ಪುರ: 'ನನಗೆ ಜನರನ್ನು ಹೇಗೆ ಕಂಟ್ರೋಲ್ ಮಾಡಬೇಕು ಎಂಬುದು ಗೊತ್ತಿದೆ..ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬೆಲ್ಟ್ನಲ್ಲಿ ಬಾರಿಸಲೂ ಬರುತ್ತದೆ...'
ಹೀಗೆಂದು ಸಿಕ್ಕಾಪಟೆ ಗರಂ ಆಗಿ ಬೈದಿದ್ದು ಕೇಂದ್ರ ಸಚಿವೆ. ಅದೂ ಜಿಲ್ಲಾಡಳಿತದ ಅಧಿಕಾರಿಗಳಿಗೆ...!
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವೆ ರೇಣುಕಾ ಸಿಂಗ್ ಅವರು ಅಧಿಕಾರಿಗಳಿಗೆ ಬೈದು, ಬೆದರಿಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಘಟನೆ ನಡೆದಿದ್ದ ಛತ್ತೀಸ್ಗಢದ ರಾಯ್ಪುರದಿಂದ 400 ಕಿಮೀ ದೂರದಲ್ಲಿರುವ ಬಲರಾಂಪುರದ ಕ್ವಾರಂಟೈನ್ ಕೇಂದ್ರದ ಬಳಿ. ದೆಹಲಿಯಿಂದ ವಾಪಸ್ ಬಲ್ರಾಂಪುರದಕ್ಕೆ ಆಗಮಸಿದ್ದ ದಿಲೀಪ್ ಗುಪ್ತಾ ಎಂಬುವರು ಕ್ವಾರಂಟೈನ್ನಲ್ಲಿ ಇದ್ದರು. ಆ ಕ್ವಾರಂಟೈನ್ ಕೇಂದ್ರದಲ್ಲಿನ ಅವ್ಯವಸ್ಥೆಯಿಂದ ಬೇಸತ್ತ ಅವರು ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಇಲ್ಲಿ ಕೊಡುತ್ತಿರುವ ಊಟವೂ ಚೆನ್ನಾಗಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದೂ ಹೇಳಿದ್ದರು.
ಹಾಗೇ, ತಾನು ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ, ತಹಸೀಲ್ದಾರ್ ಮತ್ತಿತರ ಅಧಿಕಾರಿಗಳು ನನಗೆ ಹೊಡೆದಿದ್ದಾರೆ. ನನ್ನ ತಲೆ ಕೂದಲನ್ನು ಹಿಡಿದು ಎಳೆದಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದರು.
ದಿಲೀಪ್ ಗುಪ್ತಾ ಅವರು ವಿಡಿಯೋ ಅಪ್ಲೋಡ್ ಮಾಡಿ, ತಮ್ಮ ಮೇಲೆ ದೌರ್ಜನ್ಯ ಆಗುತ್ತಿರುವ ಆರೋಪ ಮಾಡಿದ ಬೆನ್ನಲ್ಲೇ ಸಚಿವೆ ರೇಣುಕಾ ಸಿಂಗ್ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಾಗೇ ಸ್ಥಳೀಯ ಅಧಿಕಾರಿಗಳಿಗೆ ಬೆಂಡೆತ್ತಿದ್ದಾರೆ.
ದಾದಾಗಿರಿ ಎಲ್ಲ ನಡೆಯೋದಿಲ್ಲ, ಛತ್ತೀಸ್ಗಢದಲ್ಲಿ ನಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿಲ್ಲ ಎಂದು ಯಾರೂ ಭಾವಿಸುವುದು ಬೇಡ. 15ವರ್ಷ ಇಲ್ಲಿ ಆಡಳಿತ ನಡೆಸಿದ್ದೇವೆ. ಬಿಜೆಪಿ ಕಾರ್ಯಕರ್ತರು ದುರ್ಬಲರು ಎಂದು ಭಾವಿಸಬೇಡಿ. ಈಗಲೂ ಅಷ್ಟೇ ಕರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದ ಬಳಿ ಸಾಕಷ್ಟು ಹಣ ಇದೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಬೈದಿದ್ದನ್ನು ವಿಡಿಯೋದಲ್ಲಿ ಕೇಳಬಹುದು.
ಇನ್ನು ಬಲರಾಂಪುರ ಕ್ವಾರಂಟೈನ್ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ದಿಲೀಪ್ ಗುಪ್ತಾ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)