

ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ್ದ ಕೆಲ ಮಹತ್ತರ ವಿಚಾರ ಇಲ್ಲಿದೆ.
ವಿಡಿಯೋ ಸರ್ಚಿಂಗ್ ತಾಣ ಯೂ ಟೂಬ್ನಿಂದ ನಿತಿನ್ ಗಡ್ಕರಿ ಅವರಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿ ಆಗ್ತಿದೆಯಂತೆ. ಈ ವಿಚಾರವನ್ನ ಸ್ವತಃ ನಿತಿನ್ ಗಡ್ಕರಿ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಮದುವೆ ಆದ ಹೊಸತರಲ್ಲಿಯೇ ಪತ್ನಿಗೂ ತಿಳಿಯದಂತೆ ಮಾವನ ಮನೆಯನ್ನ ತೆರವು ಮಾಡಿಸಿದ್ದರಂತೆ!
ಕರೊನಾ ಲಾಕ್ಡೌನ್ ವೇಳೆ ತಾವು ಹೇಗೆ ಸಮಯ ಕಳೆದೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ಆ ವೇಳೆ ಅಡುಗೆ ಮಾಡುವುದನ್ನ ಕಲಿತೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲು ಆರಂಭಿಸಿದೆ. ಆ ವಿಡಿಯೋಗಳನ್ನು ಯೂಟೂಬ್ಗೆ ಅಪ್ಲೋಡ್ ಮಾಡುತ್ತಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಾಗಿ ನನಗೀಗ ಯೂಟೂಬ್ನಿಂದ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿ ಆಗ್ತಿದೆ ಎಂದು ನಿತಿನ್ ಗಡ್ಕರಿ ವಿವರಿಸಿದ್ದಾರೆ.
ಅದು ನಾನು ಮದುವೆ ಆದ ಆರಂಭದ ದಿನಗಳು. ನನ್ನ ಮಾವನ ಮನೆ ರಸ್ತೆ ಮಧ್ಯದಲ್ಲಿತ್ತು. ರಸ್ತೆ ಕಾಮಗಾರಿಗೆ ಈ ಮನೆ ಅಡ್ಡವಾಗಿದೆ, ಅದನ್ನು ತೆರವು ಮಾಡಬೇಕಿದೆ ಎಂದು ಅಧಿಕಾರಿಗಳು ನನಗೆ ಹೇಳಿದ್ರು. ನಾನು ಮಾವನ ಮನೆಯನ್ನ ಕೆಡವಲು ಅಧಿಕಾರಿಗಳಿಗೆ ಆದೇಶಿಸಿದೆ. ಈ ವಿಚಾರವನ್ನ ನಾನು ನನ್ನ ಪತ್ನಿಗೂ ಹೇಳಿರಲಿಲ್ಲ ಎಂದು ಹಳೇ ನೆನಪನ್ನೂ ಮೆಲುಕು ಹಾಕಿದ್ದಾರೆ.