ಹಿಂದೂಗಳಿಗೆ ಹಲಾಲ್ ಮಾಂಸವನ್ನು ತಿನ್ನಿಸಿ ಧರ್ಮವನ್ನು ಭ್ರಷ್ಟಗೊಳಿಸಲಾಗುತ್ತಿದೆ: ಗಿರಿರಾಜ್ ಸಿಂಗ್

giriraj singh
Published on

ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಯಾವಾಗಲೂ ತಮ್ಮ ಕಟುವಾದ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಆಗಾಗ ವಿವಾದಾತ್ಮಕ ಹೇಳಿಕೆ ನೀಡುವ ಅವರು, ಮತ್ತೊಮ್ಮೆ ಹಲಾಲ್ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಷಡ್ಯಂತ್ರದ ಭಾಗವಾಗಿ ಹಿಂದೂಗಳಿಗೆ ಹಲಾಲ್ ಮಾಂಸವನ್ನು ನೀಡಲಾಗುತ್ತಿದೆ ಮತ್ತು ಅವರ ಧರ್ಮವನ್ನು ಭ್ರಷ್ಟಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬೇಗುಸರಾಯ್‌ನ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಮಾತನಾಡಿ, ಅನೇಕ ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿ ಹಿಂದೂ ಧರ್ಮದ ಭಾಗವಾಗಿದ್ದರೂ ಅದನ್ನು ನಿಷೇಧಿಸುವ ಷಡ್ಯಂತ್ರ ನಡೆಸಲಾಗುತ್ತಿದೆ. ಮತ್ತೊಂದೆಡೆ ಹಿಂದೂಗಳು ಮಾಡುವ ತ್ಯಾಗ ಬಲಿದಾನವಾದರೆ ಮುಸಲ್ಮಾನರ ಬಲಿದಾನವನ್ನೂ ಸರ್ಕಾರ ನಿಲ್ಲಿಸಬೇಕು. ಹಿಂದೂಗಳ ಮನೆಯಲ್ಲಿ ತಯಾರಿಸಿದ ಮಾಂಸವನ್ನು ಯಾವ ಮುಸಲ್ಮಾನರೂ ತಿನ್ನುವುದಿಲ್ಲ. ಆದರೆ ಹಿಂದೂಗಳು ತಮ್ಮ ಮನೆಯಲ್ಲಿ ಬೇಯಿಸಿದ ಹಲಾಲ್ ಮಾಂಸವನ್ನು ತಿನ್ನುತ್ತಾರೆ ಇದರಿಂದ ಹಿಂದೂಗಳ ಧರ್ಮ ಭ್ರಷ್ಟವಾಗುತ್ತಿದೆ. ರಾಜ್ಯದ ನಿತೀಶ್ ಸರ್ಕಾರಕ್ಕೆ ಈ ವಿಷಯಗಳ ಬಗ್ಗೆ ಕಾಳಜಿ ಇಲ್ಲ, ಅವರು ಕೇವಲ ತಮ್ಮ ವೋಟ್ ಬ್ಯಾಂಕ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿದರು.

ರಸ್ತೆಬದಿಯಲ್ಲಿ ಮಾಂಸ ಕತ್ತರಿಸುವುದರಿಂದ ಸುತ್ತಮುತ್ತ ಕೊಳಚೆ ಹರಡುತ್ತಿದ್ದು, ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಬದಿಯ ಬಯಲಿನಲ್ಲಿ ಮಾಂಸ ಕತ್ತರಿಸುವುದನ್ನು ನಿಷೇಧಿಸಬೇಕು.

ಮಾಂಸ ತಿನ್ನುವ ಎಲ್ಲಾ ಹಿಂದೂಗಳು ಜಟ್ಕಾ ಮಾಂಸವನ್ನು ತಿನ್ನಬೇಕು  ಗಿರಿರಾಜ್ ಸಿಂಗ್ ಹಿಂದೂಗಳಲ್ಲಿ ಮನವಿ ಮಾಡಿದರು. ತಾವೂ ಕೂಡ ಝಟ್ಕಾ ಮಾಂಸ ತಿನ್ನುತ್ತಾರೆ ಎಂದು  ಹೇಳಿದರು.

ಹಲಾಲ್ ವಿಚಾರವಾಗಿ ಗಿರಿರಾಜ್ ಸಿಂಗ್ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ, ಇದಕ್ಕೂ ಮುನ್ನ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net