ಗಣತಂತ್ರ ಸಂಭ್ರಮಕ್ಕೆ ಹಿಂಸೆಯ ಮಸಿ: ದುಷ್ಕರ್ವಿುಗಳಿಂದ ಹೈಜಾಕ್ ಆಯ್ತು ಟ್ರ್ಯಾಕ್ಟರ್​​ ರ‍್ಯಾಲಿ

Farmer Protest
Published on

ಭಾರತದ ಇತಿಹಾಸದಲ್ಲೇ ಮೊದಲ ಬಾರಿ ಗಣರಾಜ್ಯೋತ್ಸವ ದಿನ ಸಂಭ್ರಮದ ಜತೆಗೆ ತ್ರಿವರ್ಣ ಧ್ವಜದ ಘನತೆಗೆ ಅಪಚಾರ ಎಸಗಿದ ಕಹಿ ಘಟನೆಯೂ ದಾಖಲಾಯಿತು. ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸರಳ ಸಮಾರಂಭ ಭಾರತದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದರೆ, ಅದೇ ಕೆಂಪುಕೋಟೆಯಲ್ಲಿ ಸಂಘಟನೆಗಳ ಧ್ವಜಾರೋಹಣ ಮಾಡಿದ ಅಪಚಾರವೂ ನಡೆಯಿತು. ರೈತರ ಟ್ರಾ್ಯಕ್ಟರ್ ಚಳವಳಿಯನ್ನು ಹೈಜಾಕ್ ಮಾಡಿದ ಸಮಾಜಘಾತಕರು ಇಡೀ ದಿನ ದೆಹಲಿಯಲ್ಲಿ ದಂಗೆ ನಡೆಸಿದರು.

| ರಾಘವ ಶರ್ಮ ನಿಡ್ಲೆ ನವದೆಹಲಿ

ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ದೆಹಲಿಯಲ್ಲಿ ಮಂಗಳವಾರ ಶಾಂತಿಯುತ ರೀತಿಯಲ್ಲಿ ನಡೆಸಬೇಕಿದ್ದ ರೈತರ ಟ್ರಾಕ್ಟರ್ ರ‍್ಯಾಲಿ ಉಗ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ, ದೇಶದ 72ನೇ ಗಣತಂತ್ರ ದಿನ ಅತಿ ಕೆಟ್ಟ ಘಟನಾವಳಿಗಳಿಗೆ ಸಾಕ್ಷಿಯಾಗಿ ಕರಾಳ ಅಧ್ಯಾಯದ ಪುಟ ಸೇರಿದೆ. ಮತ್ತೊಂದೆಡೆ ಹಿಂಸೆ ಎಸಗಿದವರ್ಯಾರೂ ರೈತರಲ್ಲ ಎಂಬ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಹೇಳಿಕೆ ರೈತ ರ‍್ಯಾಲಿ ದಿಕ್ಕು ತಪ್ಪಿರುವುದನ್ನು ಬಹಿರಂಗಪಡಿಸಿದೆ.

ಪೊಲೀಸ್ ಸರ್ಪ ಗಾವಲು, ಬ್ಯಾರಿಕೇಡ್​ಗಳನ್ನು ಮುರಿದುಹಾಕಿದ ಪ್ರತಿಭಟನಾಕಾರರು ದಿಲ್ಲಿಯ ಐತಿಹಾಸಿಕ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಲ್ಲದೆ, ರಾಷ್ಟ್ರಧ್ವಜ ಹಾರಬೇಕಿದ್ದ ಸ್ಥಳದಲ್ಲಿ ಸಿಖ್ ಧ್ವಜ ಹಾರಿಸಿದರು. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವ ಗಣರಾಜ್ಯ ದಿನದಂದು ಸಂಭವಿಸಿದ ಆಕ್ಷೇಪಾರ್ಹ ಘಟನೆಗಳು ಜಾಗತಿಕವಾಗಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಇಂಥದ್ದೊಂದು ಹೇಯ ಘಟನೆಗೆ ಭಾರತ ಸಾಕ್ಷಿಯಾಗಿರಲಿಲ್ಲ. ಆದರೆ, ಕೆಂಪುಕೋಟೆಗೆ ಮುತ್ತಿಗೆ ಹಾಕಿ, ಸ್ವಾತಂತ್ರ್ಯ ದಿನದಂದು ಪ್ರಧಾನಿ ಭಾಷಣ ಮಾಡುವ ಸ್ಥಳಕ್ಕೆ ಪ್ರವೇಶಿಸಿದ ಪ್ರತಿಭಟನಾಕಾರರು ಪೊಲೀಸರ ಮನವಿ ಧಿಕ್ಕರಿಸಿ ಕೋಟೆಯ ಮೇಲ್ಭಾಗಕ್ಕೆ ಹತ್ತಿ, ತಮ್ಮ ಬಾವುಟ ಹಾರಿಸಿದರು. ಪ್ರತಿಭಟನಾಕಾರರು ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಲಾಠಿ ಚಾರ್ಜ್, ಅಶ್ರುವಾಯು ಸಿಡಿಸುವುದು ಪೊಲೀಸರಿಗೂ ಅನಿವಾರ್ಯವಾಗಿತ್ತು. ಆದರೆ, ಪ್ರತಿಭಟನಾಕಾರರು ಮಾತ್ರ ಆ ಸನ್ನಿವೇಶದಲ್ಲಿ ಯಾರ ಮಾತನ್ನೂ ಕೇಳಲಿಲ್ಲ.

ಇದೇ ಮೊದಲು: 2012ರಲ್ಲಿ ನಿರ್ಭಯಾ ಅತ್ಯಾಚಾರ ಖಂಡಿಸಿ ನಡೆಸಿದ್ದ ಹಾಗೂ ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕಪಾಲ್ ಕಾನೂನು ಜಾರಿಗಾಗಿ ನಡೆದಿದ್ದ ಪ್ರತಿಭಟನೆಗಳು ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ್ದ ಪರಿಣಾಮಕಾರಿ ಹೋರಾಟಗಳಾಗಿದ್ದವು. ಆದರೆ, ಕೆಂಪುಕೋಟೆಗೆ ಮುತ್ತಿಗೆ ಹಾಕುವ ಯತ್ನಗಳು ಎಂದೂ ನಡೆದಿರಲಿಲ್ಲ. ಈ ಘಟನೆ, ರೈತರ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡಿರುವುದಲ್ಲದೆ, ಪ್ರತಿಭಟನಾಕಾರರನ್ನೂ ಅನುಮಾನದಿಂದ ನೋಡುವಂತೆ ಮಾಡಿದೆ. ಹೋರಾಟಗಾರರ ಹಿಂದೆ ಮತ್ಯಾವುದೋ ಶಕ್ತಿ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ಮತ್ತೆ ಕೇಳಿಬಂದಿದೆ.

ಪೊಲೀಸರೇ ಟಾರ್ಗೆಟ್

ಘಾಜಿಪುರ್ ಗಡಿಯಿಂದ ದೆಹಲಿಯ ಐಟಿಒ ಸರ್ಕಲ್ (ಇನ್ಕಮ್ ಟ್ಯಾಕ್ಸ್ ಆಫೀಸ್) ಮಾರ್ಗವಾಗಿ ಬಂದ ಟ್ರಾಕ್ಟರ್ ಗಳನ್ನು ಪ್ರತಿಭಟನಾಕಾರರು ಮನಸೋಇಚ್ಛೆ ಚಲಾಯಿಸಿದ ಪರಿಣಾಮ ಅವರನ್ನು ತಡೆಯಲು ಪೊಲೀಸರು ಮುಂದಾದರು. ಇದರಿಂದ ಆಕ್ರೋಶಗೊಂಡ ಮೂರು ಟ್ರಾಕ್ಟರ್ ಚಾಲಕರು ಪೊಲೀಸರ ಮೇಲೆಯೇ ಟ್ರಾಕ್ಟರ್ ಓಡಿಸಿ ಗಾಯಗೊಳಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕಾಲಿನ ಮೇಲೆ ಟ್ರಾ್ಯಕ್ಟರ್ ಹರಿಯಿತು. ಅದೇ ವೇಳೆ, ಅತಿ ವೇಗದಲ್ಲಿ ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರಾಕ್ಟರ್​ನಿಂದ ಕೆಳ ಬಿದ್ದ ಚಾಲಕ ಮೃತಪಟ್ಟ. ಮನಸಿಗೆ ಬಂದಂತೆ ಟ್ರಾಕ್ಟರ್ ಓಡಿಸುತ್ತಿದ್ದವರನ್ನು ತಡೆಯಲೆಂದು ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಸಿಟ್ಟಾದ ಹೋರಾಟಗಾರರು, ಐಟಿಒದಲ್ಲಿದ್ದ ಸ್ಟೀಲ್ ಬ್ಯಾರಿಕೇಡ್ ಮುರಿದು ಹಾಕಿ, 5 ಸರ್ಕಾರಿ ಬಸ್ ಗಳನ್ನೂ ಧ್ವಂಸಗೊಳಿಸಿದ್ದರು. ಈ ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ವಣಗೊಂಡು, 2-3 ಗಂಟೆಗಳ ಕಾಲ ಐಟಿಒ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಕೆಂಪುಕೋಟೆ ಬಳಿ ಟಿವಿ ಚಾನೆಲ್ ಗಳ ಕ್ಯಾಮರಾ ಕಿತ್ತುಕೊಂಡದ್ದಲ್ಲದೆ, ವರದಿಗಾರರು, ಕ್ಯಾಮರಾಮನ್​ಗಳ ಮೇಲೂ ಹಲ್ಲೆ ಮಾಡಲಾಯಿತು.

ರೈತನ ಮೃತ ದೇಹ

ಟ್ರಾಕ್ಟರ್ ಚಲಾಯಿಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರಿಂದ ಆತನ ದೇಹವನ್ನು ಹೋರಾಟಗಾರರು ಐಟಿಒ ಸರ್ಕಲ್ ರಸ್ತೆಯ ಹೃದಯ ಭಾಗದಲ್ಲಿ ಇರಿಸಿದ್ದರು. ಆತನ ಸಾವಿನಿಂದ ಪ್ರತಿಭಟನಾಕಾರರ ಆಕ್ರೋಶ ಮುಗಿಲುಮುಟ್ಟಿತ್ತು. ಆದರೆ, ಆತನ ಸಾವಿಗೆ ಟ್ರಾ್ಯಕ್ಟರ್ ಪಲ್ಟಿಯಾಗಿದ್ದೇ ಕಾರಣ ಎಂದು ಪೊಲೀಸರು ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡಿದ ಬಳಿಕ ಸಂಜೆ 5.45ರ ಸುಮಾರಿಗೆ ಮೃತದೇಹ ಕೊಂಡೊಯ್ಯಲು ಹೋರಾಟಗಾರರು ತೀರ್ವನಿಸಿದರು.

ಅಮಿತ್ ಷಾ: ಸಂಜೆ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಜತೆಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವಂತೆ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

ಖಾಕಿ ಸಂಯಮವೇಕೆ? ಮಂಗಳವಾರ ಇಡೀ ದಿನ ಪ್ರತಿಭಟನಾಕಾರರು ಹಿಂಸಾತ್ಮಕ ಕೃತ್ಯವೆಸಗಿದರೂ ಪೊಲೀಸರು ಸಂಯಮ ಪ್ರದರ್ಶಿಸಿದರು. ರೈತ ಸಂಬಂಧಿ ವಿಚಾರದಲ್ಲಿ ದುಡುಕದಂತೆ ಕೇಂದ್ರ ಸರ್ಕಾರ ಕಟ್ಟಪ್ಪಣೆ ವಿಧಿಸಿತ್ತು. ಇವರ ತಾಳ್ಮೆಯನ್ನೇ ಪ್ರತಿಭಟನಾಕಾರರು ಅವಕಾಶವಾಗಿ ಬದಲಿಸಿಕೊಂಡರೆಂದು ಹೇಳಲಾಗುತ್ತಿದೆ.

ದೆಹಲಿ ಹಿಂಸಾಚಾರ ನಿಜಕ್ಕೂ ಆಘಾತಕಾರಿ. ಇದು ಸ್ವೀಕಾರಾರ್ಹವಲ್ಲ. ಕಿಸಾನ್ ನಾಯಕರು ಟ್ರಾ್ಯಕ್ಟರ್ ರ್ಯಾಲಿಯನ್ನು ಅಮಾನತುಗೊಳಿಸಿದ್ದಾರೆ. ಎಲ್ಲ ನಿಜವಾದ ರೈತರು ದೆಹಲಿ ತೊರೆದು ಗಡಿಗೆ ಮರಳಬೇಕೆಂದು ಒತ್ತಾಯಿಸುವೆ. ಅಮರಿಂದರ್ ಸಿಂಗ್, ಪಂಜಾಬ್ ಸಿಎಂ

ಮುನ್ನೆಚ್ಚರಿಕೆ ಕ್ರಮ

  • ಮುಂಜಾಗ್ರತಾ ಕ್ರಮವಾಗಿ ಸಿಂಘು, ಘಾಜಿಪುರ್, ಟಿಕ್ರಿ, ಮುಕಾರ್ಬ ಹಾಗೂ ನಂಗ್ಲೋಯಿ ಪ್ರದೇಶ ಹಾಗೂ ಹರಿಯಾಣದ 3 ಜಿಲ್ಲೆಗಳಲ್ಲೂ ಇಂಟರ್ನೆಟ್ ಸ್ಥಗಿತ
  • ದೆಹಲಿಗೆ ಹೆಚ್ಚುವರಿ ಅರಸೇನಾ ಪಡೆಗಳ ನಿಯೋಜನೆ
  • ದೆಹಲಿ, ಪಂಜಾಬ್​ನಲ್ಲಿ ಹೈ ಅಲರ್ಟ್ ಘೋಷಣೆ

ಸಮಾಜ ವಿರೋಧಿಗಳ ಕೃತ್ಯ

ಕೆಲವು ಸಮಾಜ ವಿರೋಧಿಗಳು ನಮ್ಮೊಂದಿಗೆ ನುಸುಳಿ ಬಂದು ಎಸಗಿರುವ ದುಷ್ಕೃತ್ಯ ಇದಾಗಿದೆ. ಈ ಕೃತ್ಯ ಎಸಗಿರುವವರಿಗೂ ನಮ್ಮ ಸಂಘಟನೆಗೂ ಸಂಬಂಧ ಇಲ್ಲ.

| ಕಿಸಾನ್ ಮೋರ್ಚಾ ನಡೆಯಬಾರದ್ದು ನಡೆಯಿತು

  • ಕೆಂಪುಕೋಟೆಯ ಇತಿಹಾಸ ದಲ್ಲೇ ಮೊದಲ ಬಾರಿ ಗಣ ರಾಜ್ಯೋತ್ಸವದ ದಿನ ಮತ್ತೊಂದು ಧ್ವಜ ಹಾರಾಡಿತು
  • ರೈತ ಧ್ವಜ ಹಾರಿಸಲು ಬಂದ ವ್ಯಕ್ತಿ ಕೈನಲ್ಲಿದ್ದ ಭಾರತ ಧ್ವಜವನ್ನು ಕಿತ್ತೆಸೆದ ದೃಶ್ಯ ವಿಡಿಯೋದಲ್ಲಿ ಸೆರೆಯಾಯಿತು
  • ದೆಹಲಿ ಪ್ರವೇಶಿಸುವ ವೇಳೆಯೇ ಸಾವಿರಾರು ಪ್ರತಿಭಟನಾಕಾರರು ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್​ಗಳನ್ನು ಧ್ವಂಸಗೊಳಿಸಿದರು
  • ಪೊಲೀಸರನ್ನು ಗುರಿಯಾಗಿಸಿಕೊಂಡು ಮೈಮೇಲೆ ಟ್ರಾ್ಯಕ್ಟರ್ ಹತ್ತಿಸುವ ಪ್ರಯತ್ನಗಳು ನಡೆದವು
  • ರಾಷ್ಟ್ರಧ್ವಜ, ಸಿಖ್ ಧ್ವಜ ಹಿಡಿದವರ ಕೈಗಳಲ್ಲಿ ಕತ್ತಿ, ದೊಣ್ಣೆಗಳು ಕಾಣಿಸಿಕೊಂಡವು
  • ವಾಹನಗಳನ್ನು ಪುಡಿಪುಡಿ ಮಾಡಲಾಯಿತು. ಬಸ್, ಟ್ರಕ್​ಗಳನ್ನು ಉರುಳಿಸಿದ್ದರಿಂದ ಜನರು ತೊಂದರೆ ಅನುಭವಿಸುವಂತಾಯಿತು.
  • ಪ್ರತಿಭಟನಾಕಾರರ ದಾಂಧಲೆಯಿಂದ ಮಹಿಳೆಯರೂ ಗಾಯಗೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಕಾಡುವ ಪ್ರಶ್ನೆಗಳು

  • ಕೆಂಪುಕೋಟೆಯಲ್ಲಿ ಸಿಖ್ ಧರ್ಮದ ಬಾವುಟ ಹಾರಿಸಿದ್ದು ಸರಿಯೇ?, ಹಾಗಿದ್ದರೆ ಇದು ಪೂರ್ವ ಯೋಜಿತ ಕೃತ್ಯ ಇರಬಹುದೇ?
  • ಗಣರಾಜ್ಯೋತ್ಸವ ದಿನದಂದು ಈ ಕೃತ್ಯ ಎಸಗಿದ್ದರ ಉದ್ದೇಶವೇನು?
  • ಹೋರಾಟಗಾರರು ಶಾಂತಿಯ ಬದಲು ಹಿಂಸೆಯ ಹಾದಿ ತುಳಿದದ್ದೇಕೆ?, ಪೊಲೀಸರಿಗೆ ಈ ಕುರಿತ ಗುಪ್ತಚರ ಮಾಹಿತಿ ಇರಲಿಲ್ಲವೇ?
  • ಇದು ಪೊಲೀಸ್ ಭದ್ರತಾ ಲೋಪವೂ ಅಲ್ಲವೇ?
  • ರೈತ ಹೋರಾಟದ ದಿಕ್ಕು ತಪ್ಪಲಿದೆಯೇ?
  • ಹಿಂಸಾಚಾರ ಹಾಗೂ ಕೆಂಪುಕೋಟೆ ಘಟನೆಗಳಿಗೆ ರೈತರು ಕಾರಣರಲ್ಲ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಹಾಗಿದ್ದರೆ, ಈ ಕೃತ್ಯಗಳ ಜವಾಬ್ದಾರಿ ಹೊರುವವರು ಯಾರು?

ವಿಜಯನಗರ ವೈಭವ

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ರಾಜಪಥದಲ್ಲಿ ನಡೆದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಗಮನ ಸೆಳೆದ ಕರ್ನಾಟಕದ ವಿಜಯನಗರ ವೈಭವ. ಹಂಪಿಯ ಉಗ್ರನರಸಿಂಹ, ಅಂಜನಾದ್ರಿ ಬೆಟ್ಟದ ಭಿತ್ತಿ ಚಿತ್ರಗಳನ್ನು ಈ ಸ್ತಬ್ಧ ಚಿತ್ರ ಬಿಂಬಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net