

ಕಳೆದ ಮೂರು ತಿಂಗಳಿನಿಂದಲೂ ದೆಹಲಿಯ ಶಾಹೀನ್ ಭಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿ ಪ್ರತಿಭಟನೆ ನಡೆಯುತ್ತಲೇ ಇದೆ.
ಧರಣಿ ಕುಳಿತವರು ಕರೊನಾವನ್ನೂ ಲೆಕ್ಕಿಸದೆ ತಮ್ಮ ವಿರೋಧವನ್ನು ಮುಂದುವರಿಸುತ್ತಿದ್ದಾರೆ. ಇಂದು ಜನತಾ ಕರ್ಫ್ಯೂ ರಾಷ್ಟ್ರದೆಲ್ಲೆಡೆ ನಡೆಯುತ್ತಿದ್ದರೂ ಶಾಹೀನ್ ಬಾಗ್ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮುಂದುವರಿಸಿದ್ದರು. ಆದರೆ ಇಂದು ಇಲ್ಲಿ ಸಣ್ಣ ಅವಘಡವೊಂದು ನಡೆದಿದೆ.
ಮುಸುಕು ಧರಿಸಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಧರಣಿ ಕುಳಿತವರ ಕಡೆಗೆ ರಾಸಾಯನಿಕವನ್ನು ಎರಚಿ ಪರಾರಿಯಾಗಿದ್ದಾರೆ. ಘಟನೆ ನಡೆದ ಬಳಿಕ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಬೈಕ್ ಚಾಲನೆ ಮಾಡುತ್ತಿದ್ದವನೇ ಗಾಜಿನ ಬಾಟಲಿಯಿಂದ ಕೆಮಿಕಲ್ಸ್ನ್ನು ಪ್ರತಿಭಟನಾಕಾರರ ಕಡೆಗೆ ಎರಚಿದ್ದಾನೆ ಎನ್ನಲಾಗಿದೆ. ಕೇವಲ ಶಾಹೀನ್ ಬಾಗ್ ಮಾತ್ರವಲ್ಲದೆ, ಜಾಮಿಯಾ ಮಿಲಿಯಾ ಯೂನಿವರ್ಸಿಟಿಯ ಗೇಟ್ ನಂಬರ್ 7 ರ ಬಳಿ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದವರ ಮೇಲೆ ಕೂಡ ರಾಸಾಯನಿಕ ಸಿಂಪಡಣೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಪ್ರದೇಶಗಳಲ್ಲಿ ಇದ್ದ ಸಿಸಿಟಿವಿ ಕ್ಯಾಮರಾಗಳ ಫೂಟೇಜ್ಗಳನ್ನು ಪರಿಶೀಲನೆ ಮಾಡಲಾಗುವುದು. ಪ್ರಕರಣವನ್ನು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)