

ಕೆ.ಎಂ.ಪಂಕಜ ಬೆಂಗಳೂರು
ಮಕ್ಕಳಿಗೆ ತುರ್ತು ಸಹಾಯ ಒದಗಿಸಲು ಮಾನವೀಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಜಾಗತಿಕ ಸಂಸ್ಥೆ ಯೂನಿಸೆಫ್. ಸಂಸ್ಥೆಯ ಸಂಸ್ಥಾಪನಾ ದಿನವನ್ನು ಪ್ರತಿ ವರ್ಷ ಡಿ.11ರಂದು ಆಚರಿಸಲಾಗುತ್ತದೆ. ಇದು ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ (United Nations International Children's Emergency Fund) 78ನೇ ವಾರ್ಷಿಕೋತ್ಸವವೂ ಆಗಿದೆ. ಸಂಸ್ಥೆಯು ವಿಶ್ವದಾದ್ಯಂತ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
1946ರಲ್ಲಿ ಯುನೈಟೆಡ್ ನೇಷನ್ಸ್ ಅಂಗಸಂಸ್ಥೆಯಾಗಿ ಸ್ಥಾಪಿತವಾದ ಯೂನಿಸೆಫ್ ಅನ್ನು ಲುಡ್ವಿಕ್ ರಾಜ್ಚ್ಮ್ ಎಂಬುವರು ಸ್ಥಾಪಿಸಿದರು. ಇದು ಮಕ್ಕಳಿಗೆ ತುರ್ತು ಸಹಾಯ ಒದಗಿಸಲು ಮಾನವೀಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಪ್ರಸ್ತುತ ವಿಶ್ವದಾದ್ಯಂತ 190 ದೇಶಗಳಲ್ಲಿ ಕೆಲಸ ಮಾಡುತ್ತಿದೆ. ಸಂಸ್ಥೆಯು ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಬೆಂಬಲ, ಮಕ್ಕಳ ರಕ್ಷಣೆ ಮತ್ತು ತುರ್ತು ಪರಿಹಾರ ಒದಗಿಸುವತ್ತ ಕೇಂದ್ರೀಕರಿಸುತ್ತದೆ. ಮಕ್ಕಳ ಆರೈಕೆ ಮತ್ತು ಅವರಿಗೆ ಸಂಪನ್ಮೂಲಗಳನ್ನು ಒದಗಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಲಸಿಕಾ ಕಾರ್ಯಕ್ರಮಗಳ ಮೂಲಕ ಪೋಲಿಯೋ, ದಡಾರದಂತಹ ರೋಗಗಳ ನಿಮೂಲನೆಗೆ ಕ್ರಮ. ಅಪೌಷ್ಟಿಕತೆ ನಿಭಾಯಿಸುವ ಮೂಲಕ ಆಹಾರ ಕಾರ್ಯಕ್ರಮ ಬೆಂಬಲಿಸುವುದು. ಶಾಲೆಗಳನ್ನು ನಿರ್ವಿುಸಿ ಪುಸ್ತಕಗಳು, ಮಾನವ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಶಿಕ್ಷಣ ಮತ್ತು ಸಮಾನತೆಯನ್ನು ಬೆಂಬಲಿಸುವುದು. ಕುಡಿಯುವ ನೀರಿನ ಸೌಲಭ್ಯ ಮತ್ತು ಸ್ವಚ್ಛ ನೈರ್ಮಲ್ಯ ಖಚಿತಪಡಿಸುವುದಾಗಿದೆ.
ಯೂನಿಸೆಫ್ ಇತಿಹಾಸ: ಯುಎನ್ ಜನರಲ್ ಅಸೆಂಬ್ಲಿಯು 1946ರ ಡಿ.11ರಂದು ಯೂನಿಸೆಫ್ ಸ್ಥಾಪಿಸಿತು. ಇದರ ಪ್ರಧಾನ ಕಚೇರಿ ಯುನೈಟೆಡ್ ಸ್ಟೇಟ್ಸ್ ನ್ಯೂಯಾರ್ಕ್ ನಗರದಲ್ಲಿದೆ. ವಿಶ್ವ ಸಮರ 11ರ ಪ್ರಭಾವಕ್ಕೆ ಒಳಗಾದ ಯೂರೋಪಿನ ಜನರಿಗೆ ಆಹಾರ, ಬಟ್ಟೆ ಮತ್ತು ಆರೋಗ್ಯ ಸೇವೆ ಒದಗಿಸುವ ಸಂಸ್ಥೆಯಾಗಿ ಕಾರ್ಯಾಚರಣೆ ಆರಂಭಿಸಿತು. ಮುಂದುವರಿದು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಲು ಸರ್ಕಾರಗಳು ಎನ್ಜಿಒಗಳು ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದೆ. 1953ರಲ್ಲಿ ಯೂನಿಸೆಫ್ ಅನ್ನು ಯುಎನ್ ವ್ಯವಸ್ಥೆಯ ಶಾಶ್ವತ ಸಂಸ್ಥೆ ಎಂದು ಘೋಷಿಸಲಾಯಿತು. 1956ರಲ್ಲಿ ವಿಶ್ವಾದ್ಯಂತ ಮಕ್ಕಳಿಗಾಗಿ ಕೆಲಸ ಮಾಡಿದ್ದಕ್ಕಾಗಿ ಸಂಸ್ಥೆಯು ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಂಡಿತು.
ಭಾರತದಲ್ಲಿ ಯೂನಿಸೆಫ್: ಯೂನಿಸೆಫ್ 1949ರಲ್ಲಿ ಭಾರತದಲ್ಲಿ ಮೂರು ಸಿಬ್ಬಂದಿಯೊಂದಿಗೆ ಕಾರ್ಯ ಚಟುವಟಿಕೆ ಆರಂಭಿಸಿತು. ಮೂರು ವರ್ಷಗಳ ನಂತರ ದೆಹಲಿಯಲ್ಲಿ ಕಚೇರಿ ಸ್ಥಾಪಿಸಿತು. ಪ್ರಸ್ತುತ ದೇಶದ 16 ರಾಜ್ಯಗಳಲ್ಲಿ ಮಕ್ಕಳ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದೆ.
ಮಹಿಳಾ ಪರ ದನಿ: 1960ರಲ್ಲಿ ಶಾಲೆಗಳಲ್ಲಿ ವಿಜ್ಞಾನ ಬೋಧನೆಯ ಮರುಸಂಘಟನೆ ಮತ್ತು ವಿಸ್ತರಣೆಗಾಗಿ ಭಾರತ ಸರ್ಕಾರದೊಂದಿಗೆ ಯೂನಿಸೆಫ್ ಒಪ್ಪಂದಕ್ಕೆ ಸಹಿ ಹಾಕಿದೆ. 1989ರಲ್ಲಿ ಮಹಿಳಾ ಸಮಾನತೆಗಾಗಿ ಶಿಕ್ಷಣ (ಮಹಿಳಾ ಸಮಾಖ್ಯ) ಕಾರ್ಯಕ್ರಮ ಆರಂಭ. 1970ರಲ್ಲಿ ವಿಶ್ವದ ಅತಿದೊಡ್ಡ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಕ್ಕೆ ಯೂನಿಸೆಫ್ ಸಹಕಾರ ನೀಡಿದೆ. ಹೀಗೆ ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಅಗತ್ಯ ನೆರವು ಮತ್ತು ಸಹಕಾರ ನೀಡುವ ಮೂಲಕ ಹಲವಾರು ಮಹತ್ವದ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ.
ಕಾರ್ಯಚಟುವಟಿಕೆ: ಭಾರತದಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸೇರಿ ಹಲವು ವಲಯಗಳಲ್ಲಿ ಯೂನಿಸೆಫ್ ಕೊಡುಗೆ ನೀಡಿದೆ. 1949ರಲ್ಲಿ ಯೂನಿಸೆಫ್ ಸಹಾಯದೊಂದಿಗೆ ಭಾರತದ ಪಿಂಪ್ರಿಯಲ್ಲಿ ಮೊದಲ ಪೆನಿಸಿಲಿನ್ ಸ್ಥಾವರ ಸ್ಥಾಪನೆ ಮಾಡಲಾಯಿತು. 1954ರ ಶ್ವೇತ ಕ್ರಾಂತಿಯ ಸಂದರ್ಭದಲ್ಲಿ ಹಾಲು ಸಂಸ್ಕರಣಾ ಘಟಕಗಳಿಗೆ ಧನಸಹಾಯ ನೀಡಲು ಭಾರತ ಸರ್ಕಾರದೊಂದಿಗೆ ಸಂಸ್ಥೆ ಒಪ್ಪಂದಕ್ಕೆ ಸಹಿ ಹಾಕಿತು. ಆಗ ಯೂನಿಸೆಫ್ ನೆರವಿನೊಂದಿಗೆ 13 ಹಾಲು ಸಂಸ್ಕರಣಾ ಘಟಕ ಸ್ಥಾಪಿಸಲಾಯಿತು. 1954ರಲ್ಲಿ ರಾಷ್ಟ್ರೀಯ ಮಲೇರಿಯಾ ನಿಮೂಲನೆ ಕಾರ್ಯಕ್ರಮ ಪೂರೈಸಲು ಯೂನಿಸೆಫ್ ನೆರವಿನೊಂದಿಗೆ ಡಿಡಿಟಿ ಸ್ಥಾವರ ಸ್ಥಾಪನೆ. 2001ರಲ್ಲಿ ಅಪೌಷ್ಟಿಕತೆ, ಶಿಶು ಮರಣ, ಕಳಪೆ ತಾಯಂದಿರ ಆರೋಗ್ಯ ಸಮಸ್ಯೆ ನಿಯಂತ್ರಿಸಲು ಬಿಹಾರ, ಜಾರ್ಖಂಡ್ ಸೇರಿ ಆಯ್ದ ಜಿಲ್ಲೆಗಳಲ್ಲಿ ದುಲಾರ್ ಯೋಜನೆ ಜಾರಿಯಾಗಿದೆ.