ದುರದೃಷ್ಟ ನನಗಿನ್ನೂ ಮಂತ್ರಿ ಸ್ಥಾನವೇ ಸಿಕ್ಕಿಲ್ಲ: ಅಶೋಕ್ ಪಟ್ಟಣ ಬೇಸರ

PATTAN
Published on

ಬೆಂಗಳೂರು: ನಮ್ಮ ದುರದೃಷ್ಟ ನಮಗಿನ್ನೂ ಮಂತ್ರಿ ಸ್ಥಾನವೇ ಸಿಕ್ಕಿಲ್ಲ. ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನಾರಚನೆ ಇದೆ ಎಂದು ಹೈ ಕಮಾಂಡ್ ಹೇಳಿದೆ. ಆಗ ನಮಗೂ ಚಾನ್ಸ್ ಸಿಗುವ ವಿಶ್ವಾಸವಿದೆ ಎಂದು ವಿಧಾನಸಭೆ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ನೋಡಿ ಮಂತ್ರಿ ಮಾಡಬೇಡಿ, ಸೀನಿಯಾರಿಟಿ ನೋಡಿ ಎಂದು ಹೇಳಿದ್ದೇವೆ ಎಂದರು.

ಎರಡೂವರೆ ವರ್ಷದ ಬಳಿಕ ಸಂಪುಟ ಪುನಾರಚನೆ ಇದೆ. ಆಗ ನಿಮಗೂ ಚಾನ್ಸ್ ಕೊಡೋಣ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ನಾನು ಈಗಾಗಲೇ ಎರಡು ಬಾರಿ ಸಚಿವನಾಗಬೇಕಿತ್ತು. ಆದರೆ ಜಾತಿ ನೋಡಿ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ನನಗೆ ಸಿಕ್ಕಿಲ್ಲ. ಜಾತಿ ನೋಡಬೇಡಿ. ಪಕ್ಷಕ್ಕೆ ತೋರಿರುವ ನಿಷ್ಠೆ ನೋಡಿ ಕೊಡಿ ಎಂದು ಹೇಳಿದ್ದೇವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ತಿಳಿಸಿದ್ದೇವೆ. ಎರಡೂವರೆ ವರ್ಷ ಇರಿ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಸೀನಿಯರ್, ಜ್ಯೂನಿಯರ್ ಎಂದೇನೂ ಇಲ್ಲ. ದುರದೃಷ್ಟ ನಾವು ಇಲ್ಲೇ ಇದ್ದೇವೆ. ನಮ್ಮ ತಂದೆ ಎಂಎಲ್‌ಎ ಆದರೂ ನಮಗೆ ಮಂತ್ರಿ ಆಗುವ ಚಾನ್ಸ್ ಸಿಕ್ಕಿಲ್ಲ. ಅದೃಷ್ಟ ಚನ್ನಾಗಿಲ್ಲ. ಪೂಜೆ ಪುನಸ್ಕಾರ ಮಾಡಬೇಕು ಎಂದು ಬೇಸರ ಹೊರ ಹಾಕಿದರು.

ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ನನಗೆ ಗೊತ್ತಿಲ್ಲ. ಆ ವಿಚಾರ ನಮ್ಮ ಮಟ್ಟದ್ದಲ್ಲ. ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೈಸೂರಿಗೆ ಬರುವಂತೆ ಸಚಿವ ಸತೀಶ್ ಜಾರಕಿಹೊಳಿ ನನ್ನನ್ನು ಕರೆದಿಲ್ಲ ಎಂದರಲ್ಲದೆ, ಡಿಸಿಎಂ ಬೆಳಗಾವಿ ಭೇಟಿ ವೇಳೆ ನಾನು ಬೆಂಗಳೂರಿನಲ್ಲಿದ್ದೆ. ಹಾಗಾಗಿ ಸ್ವಾಗತಕ್ಕೆ ಹೋಗಲಾಗಲಿಲ್ಲ. ಊರಲ್ಲಿ ಇದ್ದಿದ್ದರೆ ಹೋಗೇ ಹೋಗುತ್ತಿದ್ದೆ ಎಂದು ಅಶೋಕ್ ಪಟ್ಟಣ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net