ದುಬೈನಲ್ಲಿ ಕೆಲಸ ಕಳೆದುಕೊಂಡ ಭಾರತೀಯ ರಾತ್ರೋರಾತ್ರಿ ಕೋಟ್ಯಧಿಪತಿಯಾದ! ಅದೃಷ್ಟವೆಂದರೆ ಇದೇ ನೋಡಿ

kerla'
Published on

ದುಬೈ: ಅದೃಷ್ಟವೆನ್ನೋದು ಯಾರಿಗೆ ಯಾವಾಗ ಒಲಿದುಬರುತ್ತದೆ ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು, ದುಬೈ ಬಿಟ್ಟು ಬರುವ ಯೋಚನೆ ಮಾಡುತ್ತಿದ್ದ ಭಾರತೀಯನೊಬ್ಬನಿಗೆ ಅದೃಷ್ಟ ಒಲಿದಿದ್ದು, ರಾತ್ರೋರಾತ್ರಿ ಆತ ಕೋಟ್ಯಧಿಪತಿಯಾಗಿ ಬದಲಾಗಿದ್ದಾನೆ.

ಭಾರತದ ಕೇರಳ ಮೂಲದ ನವನೀತ್​ ಸಜೀವನ್​ (30) ತಮ್ಮ ಹೆಂಡತಿ ಮತ್ತು ಮಗುವೊಂದಿಗೆ ದುಬೈನಲ್ಲಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕರೊನಾ ಬಂದ ನಂತರ ಅವರ ಸಂಸ್ಥೆಯಲ್ಲಿ ಸಾಕಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಿದ್ದು, ನವನೀತ್​ ಕೂಡ ನಿರುದ್ಯೋಗಿಯಾಗಿದ್ದಾರೆ. ಇತ್ತೀಚೆಗೆ ಇಂಟರ್​ವ್ಯೂ ಒಂದನ್ನು ಮುಗಿಸಿಕೊಂಡು ಮನೆಗೆ ಬರುವ ಸಮಯದಲ್ಲಿ ಅವರಿಗೆ ಅದೃಷ್ಟ ಒಲಿದುಬಂದಿದೆ.

ಇಂಟರ್​ವ್ಯೂನಿಂದ ಮನೆಗೆ ಬರುವಾಗ ನವನೀತ್​ಗೆ ಫೋನ್​ ಕಾಲ್​ ಒಂದು ಬಂದಿದೆ. ನೀವು ಲಾಟರಿಯಲ್ಲಿ 1 ಮಿಲಿಯನ್​ ಡಾಲರ್​ (7.3 ಕೋಟಿ ರೂಪಾಯಿ) ಗೆದ್ದಿದ್ದೀರಿ ಎಂದು ಕರೆಯಲ್ಲಿ ತಿಳಿಸಲಾಗಿದೆ. ವಿಚಾರ ತಿಳಿದ ನವನೀತ್​ ಖುಷಿಯಲ್ಲಿ ತೇಲಾಡಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ಸಾಲವಿದ್ದು, ಅದನ್ನು ಈ ಹಣದಲ್ಲಿ ತೀರಿಸಿಕೊಳ್ಳುವ ಯೋಚನೆ ಮಾಡಿದ್ದಾರೆ.

ಕೆಲಸ ಕಳೆದುಕೊಂಡಾಗಿನಿಂದ ಜಿಗುಪ್ಸೆಯಲ್ಲಿದ್ದ ನವನೀತ್​ ಇತ್ತೀಚೆಗೆ ದುಬೈ ಬಿಟ್ಟು ಕೇರಳಕ್ಕೆ ವಾಪಾಸಾಗುವ ಯೋಚನೆಯನ್ನೂ ಮಾಡಿದ್ದರಂತೆ. ಆದರೆ ನವೆಂಬರ್​ 22ರಂದು ದುಬೈ ಡ್ಯೂಟಿ ಫ್ರೀ ಟಿಕೆಟ್ ಖರೀದಿಸಿದ್ದಾರೆ. ಅದೇ ಅವರಿಗೆ ಭಾಗ್ಯದ ಬಾಗಿಲನ್ನು ತೆರೆದುಕೊಟ್ಟಿದೆ.

ದುಬೈನಲ್ಲಿ ಅತಿ ಹೆಚ್ಚು ಲಾಟರಿ ಟಿಕೆಟ್​ ಖರೀದಿಸುವವರು ಭಾರತೀಯರೇ ಆಗಿದ್ದಾರೆ. ಅಲ್ಲಿ 1 ಮಿಲಿಯನ್​ ಡಾಲರ್​ಲಾಟರಿ ಗೆದ್ದಿರುವ 171ನೇ ಭಾರತೀಯನಾಗಿ ನವನೀತ್​ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net