

ಸುಂಟಿಕೊಪ್ಪ : ರಕ್ತದಾನವು ಜಾತಿ ಮತ ಪಂತ ಭೇದವಿಲ್ಲದೆ ಮನುಷ್ಯರ ಜೀವ ಉಳಿಸುವ ಕಾರ್ಯಕ್ರಮವಾಗಿದ್ದು, ರಕ್ತದಾನ ಮಹತ್ವದ ಬಗ್ಗೆ ಯುವಜನತೆಯಲ್ಲಿ ಹೆಚ್ಚಾಗಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ.ಫಾ.ವಿಜಯಕುಮಾರ್ ಹೇಳಿದರು.
ಇತ್ತೀಚೆಗೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸಂತ ಅಂತೋಣಿಯವರ ದೇವಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ 14ನೇ ವರ್ಷ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನಕ್ಕೆ ಯಾವುದೇ ಜಾತಿ ಮತ ಇಲ್ಲ. ಯಾಕೆಂದರೆ ಎಲ್ಲರ ರಕ್ತದ ಬಣ್ಣ ಕೆಂಪು. ಈ ಸರಳ ಸತ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ವಿವಿಧತೆಯಲ್ಲಿ ಏಕತೆಯನ್ನು ಪಾಲಿಸಿಕೊಂಡು ಪರಸ್ಪರ ಸಾಮರಸ್ಯ ಮತ್ತು ಸೌಹಾರ್ಧತೆಯಿಂದ ಬಾಳಬಹುದು ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಸಮಾಜ ಸಾಗುತ್ತಿರುವ ದಾರಿಯನ್ನು ನೋಡಿದಾಗ ರಕ್ತದಾನ ಶಿಬಿರದ ಮೂಲಕ ನಾವೆಲ್ಲರೂ ಒಂದೇ ಎಂಬ ಪರಮಸತ್ಯವನ್ನು ಸಾರಿ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಮತ್ತು ಎಲ್ಲ ಜಾತಿ ಜನಾಂಗದ ಪ್ರಮುಖರು ರಕ್ತದಾನ ಶಿಬಿರಗಳನ್ನು ಹೆಚ್ಚು ಹೆಚ್ಚಾಗಿ ಸಂಘಟಿಸುವಂತೆ ಮನವಿ ಮಾಡಿದರು.
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಅನಿಲ್ ಕರುಂಬಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದಾನದ ಮಹತ್ವ ಹೆಚ್ಚಾಗಿ ಪ್ರಚಾರಗೊಳ್ಳುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಸಾಮೂಹಿಕ ರಕ್ತದಾನ ಶಿಬಿರ ಏರ್ಪಡಿಸುತ್ತಿರುವುದು ಶ್ಲಾಘನೀಯ. ವೈಯಕ್ತಿಕ ನೆಲೆಗಟ್ಟಿನಲ್ಲಿ ಕೂಡ ನಿಯಮಿತವಾಗಿ ರಕ್ತದಾನ ಮಾಡುವುದು ಹವ್ಯಾಸವಾಗಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ವಹಿಸಿದ್ದರು. 25 ಕ್ಕೂ ಹೆಚ್ಚು ಜನ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ಆಮ್ಮತ್ತಿ ದೇವಾಲಯದ ಧರ್ಮಗುರು ಮದಲೈಮುತ್ತು, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೋವಿಟಾ ವಾಝ್, ಸಂತ ಅಂತೋಣಿ ದೇವಾಲಯದ ಕ್ರೀಡಾ ಆರ್ಥಿಕ ಸಮಿತಿ ಅಧ್ಯಕ್ಷ ಪಿ.ಎಂ.ಬಿಜು, ಖಜಾಂಜಿ ಜೇಮ್ಸ್ ಡಿಸೋಜ, ಮಹಿಳಾ ಘಟಕದ ಅಧ್ಯಕ್ಷ ಪಿಲೋಮಿನಾ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಹಾಗೂ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಹಿಳಾ ಘಟಕಗಳ ಸದಸ್ಯರಾದ ರೋಸ್‌ಮೇರಿ ರಾಡ್ರಿಗಸ್, ಗ್ರೇಸಿ ಡೇವಿಡ್, ಗೌರವ ಸಲಹೆಗಾರರಾದ ಎಸ್.ಎಂ.ಡಿಸಿಲ್ವ, ಪಿ.ಎಫ್.ಸಬಾಸ್ಟೀನ್,ಪಿಲಿಫ್‌ವಾಸ್, ಯುವಘಟಕದ ಅಧ್ಯಕ್ಷ ಬಬುಲು ಸೇರಿದಂತೆ ಮತ್ತಿತರರು ಇದ್ದರು.