ತ್ರಿಶಂಕು ಸ್ಥಿತಿಯಲ್ಲಿ ಸೋಲಿಲ್ಲದ ಸರದಾರ; ಕೈಕೊಡುತ್ತಾ ತಿಂದು ಉಣ್ಣೋರು ಫಾರ್ಮುಲಾ? ಕೈ ಹಿಡಿಯಬೇಕೋ, ಕಮಲ ಮುಡಿಯಬೇಕೋ ಲೆಕ್ಕಾಚಾರದಲ್ಲಿ ವಾಸು

1
Published on

ತುಮಕೂರು: ಜೆಡಿಎಸ್ ಭದ್ರಕೋಟೆಯಿಂದ ಹೊರಬಿದ್ದಿರುವ ಶಾಸಕ ಎಸ್.ಆರ್.ಶ್ರೀನಿವಾಸ್ ಅವರದು ಈಗ ಅಕ್ಷರಶಃ ತ್ರಿಶಂಕು ಸ್ಥಿತಿ. ಕೈಹಿಡಿಯಬೇಕೋ, ಕಮಲ ಮುಡಿಯಬೇಕೋ ಎಂಬ ಗೊಂದಲದಲ್ಲಿ ಸಿಲುಕಿದ್ದು, ಈ ಬಾರಿ ಸೋಲಿಲ್ಲದ ಸರದಾರನಿಗೆ ಪ್ರತೀ ಚುನಾವಣೆಯಲ್ಲಿ ಬಳಸುತ್ತಿದ್ದ ‘ತಿಂದುಉಣ್ಣೋರು’ ತಂತ್ರವೇ ತಿರುಮಂತ್ರವಾಗಲಿದೆ ಎಂಬ ಲೆಕ್ಕಾಚಾರಗಳಿವೆ.

ಸತತ 5ನೇ ಬಾರಿ ಶಕ್ತಿಸೌಧ ಪ್ರವೇಶಿಸಿ ಇತಿಹಾಸ ಬರೆಯಲು ಅಣಿಯಾಗಿರುವ ವಾಸುಗೆ ಖುದ್ದು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ವರ್ಷದಿಂದಲೇ ‘ಖೆಡ್ಡಾ’ ತೋಡಲು ಸಿದ್ಧತೆ ನಡೆಸಿರುವುದು ಚುನಾವಣಾ ಕಣವನ್ನು ರಂಗೇರಿಸಿದೆ.

ಲಿಂಗಾಯತ ಪ್ರಾಬಲ್ಯದ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಎಸ್.ಆರ್.ಶ್ರೀನಿವಾಸ್ ಗೆಲುವಿಗೆ, ಬಲವಾಗಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಾಮಬಲ!. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ವಾಸು ಸರ್ಕಾರ ಪತನಗೊಳ್ಳುತ್ತಿದ್ದಂತೆ ಎಚ್ಡಿಕೆ ವಿರುದ್ಧ ತೊಡೆತಟ್ಟಿದ್ದಲ್ಲದೆ ಹಾದಿಬೀದಿಯಲ್ಲಿ ನಾಲಿಗೆ ಹರಿಬಿಟ್ಟ ಪರಿಣಾಮ ಪಕ್ಷದಿಂದ ಗೇಟ್‌ಪಾಸ್ ಪಡೆಯುವಂತಾಯಿತು. ಎಚ್ಡಿಕೆ-ವಾಸು ನಡುವಿನ ಮುನಿಸು ಶಮನಗೊಳಿಸುವ ಎಲ್ಲ ಪ್ರಯತ್ನ ವಿಫಲವಾಗಿ ಕೊನೆಗೆ ವಾಸು ಕಾಂಗ್ರೆಸ್ ಮನೆ ಬಾಗಿಲು ತಟ್ಟುವಂತಾಯಿತು.

ವರ್ಷದ ಹಿಂದೆಯೇ ಅಭ್ಯರ್ಥಿ ಘೋಷಣೆ: ವಾಸು ಬಹಿರಂಗ ವಾಗ್ದಾಳಿಯಿಂದ ಅಸಮಾಧಾನಗೊಂಡಿದ್ದ ಕುಮಾರಸ್ವಾಮಿ ವರ್ಷದ ಹಿಂದೆಯೇ ಏಕಾಏಕಿ ‘ಎಮು’ ನಾಗರಾಜು (ಬಿ.ಎಸ್.ನಾಗರಾಜು) ಹೆಸರನ್ನು ಘೋಷಣೆ ಮಾಡುವ ಮೂಲಕ ರಾಜಕೀಯ ವೈರಿಗೆ ಸೋಲಿನ ರುಚಿ ತೋರಿಸಲು ಜಾತಿಯ ಅಸ್ತ್ರವನ್ನೇ ಬಳಸಿ ವ್ಯೆಹ ರಚಿಸಿದ್ದಾರೆ. ದೊಡ್ಡಗೌಡರ ಕುಟುಂಬದ ವಿರೋಧ ಕಟ್ಟಿಕೊಂಡಿರುವ ವಾಸುಗೆ ‘ಒಕ್ಕಲಿಗ ಸಮುದಾಯ’ ಕೈಕೊಡುವ ಸಾಧ್ಯತೆಗಳು ನಿಶ್ಚಿತ. ಎಲ್ಲವನ್ನೂ ನುಂಗಿಕೊಂಡು ಮೌನವಾಗಿರುವ ಬಹುಸಂಖ್ಯಾತ ಕುಂಚಿಟಿಗ ಒಕ್ಕಲಿಗರು ಚುನಾವಣೆಯನ್ನೇ ಎದುರು ನೋಡುತ್ತಿದ್ದಾರೆ.

ಕಳೆದ ಬಾರಿ ಪ್ರಬಲ ಆಡಳಿತ ವಿರೋಧಿ ಅಲೆಯಲ್ಲೂ ಬಿಜೆಪಿಯ ಒಡಕಿನ ಲಾಭ ಪಡೆದು ಗೆದ್ದು ಬೀಗಿದ್ದ ಶ್ರೀನಿವಾಸ್ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಜತೆ ಹೆಜ್ಜೆ ಹಾಕಿರುವರಾದರೂ ಅವರಿಗಿನ್ನೂ ಕಾಂಗ್ರೆಸ್ ಮನೆ ಬಾಗಿಲು ಮುಕ್ತವಾಗಿ ತೆರೆದಿಲ್ಲ. ಡಾ.ಜಿ. ಪರಮೇಶ್ವರ ಆಶೀರ್ವಾದ ಸಂಪೂರ್ಣವಾಗಿ ಸಿಗದೇ ಇರುವುದು ವಾಸು ರಾಜಕೀಯ ನಡೆಯನ್ನು ಗೊಂದಲದಲ್ಲಿಟ್ಟಿದೆ.

ಟಿಕೆಟ್ ಆಕಾಂಕ್ಷಿಗಳಾದ ಜಿ.ಎಸ್.ಪ್ರಸನ್ನಕುಮಾರ್, ಹೊನ್ನಗಿರಿಗೌಡರ ವಿರೋಧ ಸಹ ಇದ್ದು ಬಜೆಟ್ ಅಧಿವೇಶನದ ನಂತರವಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ವಾಸು ಕೈಹಿಡಿಯುವ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಮಧ್ಯೆ ಬಿಜೆಪಿ ಸೇರ್ಪಡೆ ವಿಚಾರವನ್ನು ಹರಿಯಬಿಡಲಾಗಿದೆ. ಇದರ ಹಿಂದೆ ಲಿಂಗಾಯತ ಸಮುದಾಯದ ಒಲೈಕೆಯ ಗೇಮ್‌ಪ್ಲಾನ್ ಸಹ ವಾಸುದ್ದಾಗಿದೆ. 2004ರಲ್ಲಿ ಸ್ವತಂತ್ರವಾಗಿ ಗೆದ್ದು ಜೆಡಿಎಸ್ ಸೇರಿದ್ದ ವಾಸು ಸತತ ನಾಲ್ಕು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಕ್ಷೇತ್ರದಲ್ಲಿ ಪಾರಮ್ಯ ಮೆರೆದಿರುವ ಜೆಡಿಎಸ್‌ನಲ್ಲೀಗ ಪಂಚರತ್ನ ಯಾತ್ರೆ ಬಳಿಕ ಬಿ.ಎಸ್.ನಾಗರಾಜು ಕ್ಷೇತ್ರ ಸುತ್ತುತ್ತಿದ್ದು ಬಲಿಷ್ಠ ಸೇನಾನಿಯಾಗಿ ಕಂಡುಬರುತ್ತಿದ್ದಾರೆ. ಹಣಬಲ, ತೋಳ್ಬಲದಲ್ಲೂ ಬಲಾಢ್ಯರೆನಿಸಿದ್ದು ವಾಸು ನಿದ್ದೆಗೆಡಿಸಿದೆ.

ಬಿಜೆಪಿಯಲ್ಲೂ ಟಿಕೆಟ್ ಪೈಪೋಟಿ: ಕಳೆದ ಎರಡು ಚುನಾವಣೆಗಳಲ್ಲಿ ತೀವ್ರ ಪೈಪೋಟಿ ನೀಡಿ ಗೆಲುವಿನ ದಡದಲ್ಲಿ ಎಡವಿದ್ದ ಜಿ.ಎನ್.ಬೆಟ್ಟಸ್ವಾಮಿ ಪರ ಅನುಕಂಪ ಇದೆಯಾದರೂ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಗ್ಗಟ್ಟು ಮೂಡಿಲ್ಲ. ಲಿಂಗಾಯತ ಸಮುದಾಯದ ಎಸ್. ಡಿ.ದಿಲೀಪ್‌ಕುಮಾರ್, ಚಂದ್ರಶೇಖರ್‌ಬಾಬು (ಗ್ಯಾಸ್ ಬಾಬು), ಎನ್.ಸಿ.ಪ್ರಕಾಶ್ ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ 30 ಸಾವಿರ ಮತ ಪಡೆದಿದ್ದ ದಿಲೀಪ್‌ಗೆ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸೊಗಡುಶಿವಣ್ಣ ಶ್ರೀರಕ್ಷೆ ಇದೆ. ಟಿಕೆಟ್ ಸಂದರ್ಭದಲ್ಲಿ ಇದು ಗಣನೆಗೆ ಬರುವ ಸಾಧ್ಯತೆಯೂ ಇದೆ. ಒಟ್ಟಾರೆ ಈ ಬಾರಿಯ ಚುನಾವಣೆಯು ತ್ರಿಕೋನ ಸ್ಪರ್ಧೆಯಿಂದ ಕೂಡಿರಲಿದೆ.

ಸೋಲಿಲ್ಲದ ಸರದಾರನಿಗೆ ಭೀತಿ: ಕಳೆದ ಚುನಾವಣೆಯಲ್ಲಿ ಎಸ್.ಆರ್.ಶ್ರೀನಿವಾಸ್ ಬಿಜೆಪಿಯೊಳಗಿನ ಒಡಕಿನ ಲಾಭದಲ್ಲಿ ಗೆಲುವಿನ ದಡ ಮುಟ್ಟಿದ್ದರು. ದೇವೇಗೌಡರ ಕುಟುಂಬ ಎದುರು ಹಾಕಿಕೊಂಡು ಚುನಾವಣೆ ಎದುರಿಸುತ್ತಿರುವ ಸೋಲಿಲ್ಲದ ಸರದಾರನಿಗೆ ಈಗ ಸಹಜವಾಗಿ ಭೀತಿ ಎದುರಾಗಿದೆ. ವಾಸು ಗೆಲುವಿನ ಹಿಂದೆ ಪತ್ನಿ ಭಾರತಿ ಶ್ರಮವೇ ಹೆಚ್ಚು. ಕ್ಷೇತ್ರದ ಮತದಾರರ ನಾಡಿಮಿಡಿತ ಬಲ್ಲ ವಾಸು ಪತ್ನಿಗೆ ಚುನಾವಣೆ ನಡೆಸಬಲ್ಲ ಛಾತಿ ಇದೆ. ಕೆಪಿಸಿಸಿ ಅಧ್ಯಕ್ಷರ ಮನೆಬಾಗಿಲಿಗೆ ಪುತ್ರ ದುಷ್ಯಂತ್ ಜತೆ ಹೋಗಿ ವಾಸುಗೆ ಟಿಕೆಟ್ ಖಚಿತ ಮಾಡಿಕೊಂಡು ಬರುವಷ್ಟು ಸಾಮರ್ಥ್ಯ ಅವರಲ್ಲಿದೆ. ಅಭಿವೃದ್ಧಿ ಅಪಸ್ವರದ ನಡುವೆಯೂ ಕ್ಷೇತ್ರದ ಜನರ ಜತೆಗಿನ ಆತ್ಮೀಯ ಒಡನಾಟ ವಾಸುಗೆ ಪ್ಲಸ್ ಪಾಯಿಂಟ್.

ಹಿಂದುಳಿದ ಜಾತಿಗಳು ನಿರ್ಣಾಯಕ: ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಒಕ್ಕಲಿಗರಿದ್ದರೂ ಇತರ ಹಿಂದುಳಿದ ಜಾತಿಗಳು ನಿರ್ಣಾಯಕವೆನಿಸಿವೆ. ಪರಿಶಿಷ್ಟರ ಸಂಖ್ಯೆ ಹೆಚ್ಚಿದೆ. ಲಿಂಗಾಯತ ಕ್ಷೇತ್ರದಲ್ಲಿ ಈ ಬಾರಿ ‘ತಿಂದುಉಣ್ಣೋರು’ ಫಾರ್ಮುಲಾ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬ ಚರ್ಚೆ ನಡೆದಿದೆ. ವಾಸು, ನಾಗರಾಜು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಗೊಲ್ಲ ಸಮಾಜದ ಜಿ.ಎನ್.ಬೆಟ್ಟಸ್ವಾಮಿಗೆ ಬಿಜೆಪಿ ಮಣೆಹಾಕಿದ್ದೇ ಆದಲ್ಲಿ ಅನುಕಂಪದ ಜತೆ ಲಿಂಗಾಯತರು, ಹಿಂದುಳಿದ ವರ್ಗಗಳ ಜಾತಿ ಸಮೀಕರಣ ಕೈಹಿಡಿಯಬಹುದು. ಒಂದು ವೇಳೆ ಬೆಟ್ಟಸ್ವಾಮಿಗೆ ಟಿಕೆಟ್ ಕೈತಪ್ಪಿದರೆ ಗೊಲ್ಲ ಸಮಾಜದ ಹೆಚ್ಚಿನ ಪ್ರಮಾಣದ ಮತವನ್ನು ಹಾಗಲವಾಡಿ ಸುತ್ತಮುತ್ತ ಶಕ್ತಿ ಬೆಳೆಸಿಕೊಂಡಿರುವ ಜೆಡಿಎಸ್‌ನ ನಾಗರಾಜು ಪಡೆಯುವ ಲೆಕ್ಕಾಚಾರಗಳಿವೆ.

ಎ.ಕೃಷ್ಣಪ್ಪ ಸಹೋದರ ಪ್ರತ್ಯಕ್ಷ: ಮಾಜಿ ಸಚಿವ ದಿವಂಗತ ಎ.ಕೃಷ್ಣಪ್ಪ ಸಹೋದರ ಎ.ಗೋಪಾಲ್ ಕೈ ಟಿಕೆಟ್‌ಗೆ ಅರ್ಜಿ ಸಲ್ಲಿಸಿರುವುದು ರಾಜಕೀಯವಾಗಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. 2014ರಲ್ಲಿ ಎ.ಕೃಷ್ಣಪ್ಪ ಲೋಕಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡಗೆ ಬಹಿರಂಗವಾಗಿ ಬೆಂಬಲ ನೀಡಿದ್ದ ವಾಸುಗೆ ಪಾಠ ಕಲಿಸಲೆಂದೇ ಗೋಪಾಲ್ ಗುಬ್ಬಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆಂಬ ಗುಸುಗುಸು ಇದೆ.

ತೆರೆಗೆ ಸರಿದಿರುವ: ಜಿಎಸ್‌ಎಸ್, ಸಾಗರನಹಳ್ಳಿ ಕುಟುಂಬಗಳು ಮಾಜಿ ಸಚಿವ ದಿವಂಗತ ಸಾಗರನಹಳ್ಳಿ ರೇವಣ್ಣ ಹಾಗೂ ಮಾಜಿ ಶಾಸಕ ದಿವಂಗತ ಜಿ.ಎಸ್.ಶಿವನಂಜಪ್ಪ ಕುಟುಂಬಗಳು ಕ್ಷೇತ್ರದಲ್ಲಿ ತಮ್ಮದೇ ಆದ ರಾಜಕೀಯ ವರ್ಚಸ್ಸು ಹೊಂದಿದ್ದು, ರಾಜಕೀಯವಾಗಿ ಪ್ರಭಾವ ಬೀರಬಲ್ಲ ಶಕ್ತಿ ಹೊಂದಿವೆ. ಕಳೆದ 4 ಚುನಾವಣೆಗಳಲ್ಲಿ ಜೆಡಿಎಸ್ ಗೆಲುವು ಈ ಕುಟುಂಬಗಳನ್ನು ರಾಜಕೀಯವಾಗಿ ತೆರೆಗೆ ಸರಿಸಿದೆ.

ಪ್ಲಸ್-ಮೈನಸ್ ಜಿ.ಎನ್.ಬೆಟ್ಟಸ್ವಾಮಿ

+ ಸತತ ಎರಡು ಸೋಲಿನ ಅನುಕಂಪ+ ಕಾಡುಗೊಲ್ಲರ ಜತೆ ಲಿಂಗಾಯತ ಮತಬ್ಯಾಂಕ್+ ಹಾಲಿ ಶಾಸಕರ ಪಕ್ಷಾಂತರದ ಲಾಭ- ಗೆಲುವಿಗೆ ಹತ್ತಿರ ಬಂದರೂ ಗೆಲ್ಲದ ಕುಖ್ಯಾತಿ- ಕ್ಷೇತ್ರದಲ್ಲಿ ಕೈಕೊಡುತ್ತಿರುವ ಜಾತಿ ಸಮೀಕರಣ- ಚುನಾವಣೆಗೆ ಸಂಪನ್ಮೂಲದ ಕೊರತೆಎಸ್.ಆರ್.ಶ್ರೀನಿವಾಸ್+ ಸೋಲಿಲ್ಲದ ಸರದಾರ ಖ್ಯಾತಿ+ ಜನರೊಂದಿಗಿನ ನಿರಂತರ ಒಡನಾಟ+ ಪಕ್ಷಾಂತರದಿಂದ ಹೊಸ ಜಾತಿ ಸಮೀಕರಣ- ಸೋಲಿಸಲು ಜೆಡಿಎಸ್ ಮುಖಂಡರ ಪಣ- ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ- ಕಾಂಗ್ರೆಸ್‌ಗೆ ಮತಬ್ಯಾಂಕ್ ಇಲ್ಲದಿರುವುದುಬಿ.ಎಸ್.ನಾಗರಾಜು+ ಸತತ ಮೂರು ಚುನಾವಣೆ ಗೆದ್ದಿರುವ ಜೆಡಿಎಸ್ + ಕ್ಷೇತ್ರದಲ್ಲಿರುವ ಒಕ್ಕಲಿಗ ಪ್ರಾಬಲ್ಯ+ ಸಕಲ ಸಂಪನ್ಮೂಲದ ಶಕ್ತಿ- ಗುಳೆ ಹೋದ ಜೆಡಿಎಸ್ ಕಾರ್ಯಕರ್ತರು- ಹುಟ್ಟೂರು ಸಿ.ಎಸ್.ಪುರ ಹೋಬಳಿ ಈಗ

ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿರುವುದು- ಚುರುಕಾಗದ ಕ್ಷೇತ್ರದ ಸಂಘಟನೆ

ಪಕ್ಷಗಳ ಸಿದ್ಧತೆ

ಕಾಂಗ್ರೆಸ್

ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ

•ಕಾರ್ಯಕರ್ತರ ಸಭೆ •ಅಭ್ಯರ್ಥಿ ಹುಡುಕಾಟ

ಬಿಜೆಪಿ

•ಪ್ರಧಾನಿ ಮೋದಿ ಅವರಿಂದ ಎಚ್‌ಎಎಲ್ ಉದ್ಘಾಟನೆ •ಕ್ಷೇತ್ರದೆಲ್ಲೆಡೆ

ವಿಜಯಸಂಕಲ್ಪ ಅಭಿಯಾನ •ಕಾರ್ಯಕರ್ತರ ಸಭೆ

ಜೆಡಿಎಸ್

•ಆರು ತಿಂಗಳ ಮುಂಚೆಯೇ ಅಭ್ಯರ್ಥಿ ಘೋಷಣೆ •ಪಂಚರತ್ನಯಾತ್ರೆ

•ಘೋಷಿತ ಅಭ್ಯರ್ಥಿಯಿಂದ ಮನೆಮನೆ ಭೇಟಿ

2018ರ ಚುನಾವಣೆ ಲಿತಾಂಶ

ಅಭ್ಯರ್ಥಿ ಪಕ್ಷ ಪಡೆದಮತ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ 55572 ಜಿ.ಎನ್.ಬೆಟ್ಟಸ್ವಾಮಿ ಬಿಜೆಪಿ 46491 ಕೆ.ಕುಮಾರ್ (ಬಾಲಾಜಿ) ಕಾಂಗ್ರೆಸ್ 13938 ಎಸ್.ಡಿ.ದಿಲೀಪ್‌ಕುಮಾರ್ ಪಕ್ಷೇತರ 30528 ಗೆಲುವಿನ ಅಂತರ 9081

2013ರ ಚುನಾವಣೆ ಲಿತಾಂಶ

ಅಭ್ಯರ್ಥಿ ಪಕ್ಷ ಪಡೆದಮತ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ 58883 ಜಿ.ಎನ್.ಬೆಟ್ಟಸ್ವಾಮಿ ಕೆಜೆಪಿ 51539 ಹೊನ್ನಗಿರಿಗೌಡ ಕಾಂಗ್ರೆಸ್ 18548 ಎಸ್.ಆರ್.ನಟರಾಜು ಬಿಜೆಪಿ 2395 ಗೆಲುವಿನ ಅಂತರ 7344

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net