

ಸೊರಬ: ದೇಶದಲ್ಲಿ ಮತಗಳ್ಳತನ ನಡೆಯುತ್ತಿದೆ ಎಂದು ಆರೋಪಿಸಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪಟ್ಟಣದ ಬಸ್ ನಿಲ್ದಾಣದ ಎದುರು ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಸಂವಿಧಾನ ಎಲ್ಲ ವರ್ಗಗಳಿಗೂ ಸರಿಸಮಾನವಾಗಿ ಬದುಕುವ ಹಕ್ಕು ನೀಡಿದೆ. ಆದರೆ ಕೇಂದ್ರದಲ್ಲಿ ಸರ್ಕಾರ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ ದೂರಿದರು.
ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಆಡಳಿತ ನಡೆಸುವವರನ್ನು ದೂರವಿಡುವ ಕಾಲ ಸನಿಹವಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ ಪಾಕಿಸ್ತಾನದ ವಿರುದ್ಧ ಜಯಿಸಿದ ಯುದ್ಧವನ್ನು ದೇಶವೇ ಸ್ಮರಿಸುತ್ತಿದೆ. ಆದರೆ ಕದನ ವಿರಾಮ ಘೋಷಿಸಿ ದೇಶದ ಭವಿಷ್ಯದ ವಿರುದ್ಧ ನಿರ್ಣಯ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಟೀಕಿಸಿದರು.
ಈ ಹಿಂದೆ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದು ಮತದಾರರಿಗೆ ಸುಳ್ಳು ಭರವಸೆ ನೀಡಿ ವಂಚಿಸಿದ್ದಾರೆ. ಹಾಗಾಗಿ ಒಗ್ಗಟ್ಟಿನಿಂದ ಕಾಂಗ್ರೆಸ್ ಕಟ್ಟುವ ಕೆಲಸ ಮಾಡೋಣ. ಪ್ರತಿ ಬೂತ್ ಮಟ್ಟದಲ್ಲಿ ಸಹಿ ಸಂಗ್ರಹ ಮಾಡುವ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿ ನಾಯಕರ ವಿರುದ್ಧ ಸಂವಿಧಾನವನ್ನು ಗಟ್ಟಿಗೊಳಿಸಬೇಕಿದೆ. ದೇಶದ ಐಕ್ಯತೆಯ ಭಾಗವಾಗಿ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್‌ಜೋಡೊ ಯಾತ್ರೆ ಸ್ಮರಣೀಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ, ಯುವ ಘಟಕದ ಅಧ್ಯಕ್ಷ ಪ್ರವೀಣಕುಮಾರ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲ ಗೌಡ, ಮುಖಂಡರಾದ ನಾಗರಾಜ್, ಹಿರಿಯಣ್ಣ, ಕಲ್ಲಪ್ಪ, ಸೋಮಪ್ಪ, ಪ್ರಕಾಶ್, ಶೋಭಾ, ತಾರಾ, ಪರಸಪ್ಪ, ಆಫ್ರಿನಾ ಬಾನು, ಸುಲ್ತಾನಾ ಬೇಗಂ, ಅನ್ಸರ್ ಅಹಮದ್ ಇತರರಿದ್ದರು.