ಮೆಸ್ಕಾಂನಿಂದ ಅನಧಿಕೃತವಾಗಿ ಮರಗಳ ಕಡಿತಲೆ

eeshwaravana
ಈಶ್ವರ ವನದಲ್ಲಿ ಮೆಸ್ಕಾಂ ಸಿಬ್ಬಂದಿ ಬಿದಿರು ಕಡಿದಿರುವುದು.
Published on

ಶಿವಮೊಗ್ಗ: ಅಬ್ಬಲಗೆರೆ ಸಮೀಪದ ಈಶ್ವರ ವನದಲ್ಲಿ ಬೆಳೆಸಿದ್ದ ಅಮೂಲ್ಯವಾದ ಮರಗಳನ್ನು ಮೆಸ್ಕಾಂ ಸಿಬ್ಬಂದಿ ಕಡಿದು ಹಾಕಿದ್ದಾರೆ ಎಂದು ನವ್ಯಶ್ರೀ ಈಶ್ವರ ವನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಶ್ವರ ವನದ ಮುಂಭಾಗದ ರಸ್ತೆ ಪಕ್ಕದಲ್ಲಿದ್ದ 20ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ವಿದ್ಯುತ್ ಮಾರ್ಗದಿಂದ ದೂರವಿದ್ದ ಮರಗಳನ್ನೂ ನೆಲಸಮ ಮಾಡಲಾಗಿದೆ. ಮರಕಡಿತಲೆ ಆದೇಶ ಮಾಡಿದ ಅಧಿಕಾರಿಗಳ ಬೇಜವಾಬ್ದಾರಿಗೆ ಇದು ನಿದರ್ಶನ ಎಂದು ಕಿಡಿಕಾರಿದ್ದಾರೆ.

ಬುಧವಾರ ಮಾಧ್ಯಮದವರನ್ನು ಸ್ಥಳಕ್ಕೆ ಕರೆದೊಯ್ದು ಮರಕಡಿತಲೆ ಆಗಿರುವುದನ್ನು ತೋರಿಸಿದ ಅವರು, ಮೆಸ್ಕಾಂ ಸಿಬ್ಬಂದಿ ಈಶ್ವರ ವನದೊಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಬಿಲ್ಯಾರಾ, ಬೇವು, ಸಪ್ತಪರ್ಣಿ, ನುಗ್ಗೆ, ಸಾಗುವಾನಿ, ಹೊಂಗೆ ಇತ್ಯಾದಿ ಜಾತಿಯ ಮರಗಳನ್ನು ಕಡಿಯಲಾಗಿದೆ. ಬಿದಿರು ಕಡಿತಲೆಗೆ ಅರಣ್ಯ ಇಲಾಖೆಯೇ ನಿಷೇಧ ವಿಧಿಸಿದೆ. ಆದರೂ ಬಿದಿರು ಕಡಿಯಲಾಗಿದೆ. ಅನಗತ್ಯ ಹಾಗೂ ಅನಧಿಕೃತವಾಗಿ ಮರಗಳ ಮಾರಣ ಹೋಮ ಮಾಡಿರುವ ಮೆಸ್ಕಾಂ ವಿರುದ್ಧ ದೂರು ಸಲ್ಲಿಸಿರುವುದಾಗಿ ನಾಗೇಶ್ ಮಾಹಿತಿ ನೀಡಿದರು.

7 ವರ್ಷಗಳಿಂದ ಅಬ್ಬಲಗೆರೆಯ ಈಶ್ವರವನದಲ್ಲಿ 150ಕ್ಕೂ ಹೆಚ್ಚು ಜಾತಿಯ ಅಳಿವಿನಂಚಿನಲ್ಲಿರುವ ಮರಗಳನ್ನು ಬೆಳೆಸಲಾಗಿದೆ. ಪ್ರಕೃತಿ ಆರಾಧನೆಯ ಪ್ರತೀಕವಾಗಿ ಪ್ರತಿವರ್ಷ ಶಿವರಾತ್ರಿಯಂದು ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ.

ಪ್ರಕೃತಿ ಸಂರಕ್ಷಣೆ, ಪ್ಲಾಸ್ಟಿಕ್‌ಮುಕ್ತ ಜೀವನ, ಶಾಲಾ ಮಕ್ಕಳಿಗೆ ಪರಿಸರ ಶಿಕ್ಷಣ ಬೋಧನೆ, ಪ್ರಕೃತಿ ಪೂರಕ ಹಬ್ಬಗಳ ಆಚರಣೆಯ ಮಹತ್ವ ಸಾರುವ ಕೆಲಸಗಳನ್ನು ಇಲ್ಲಿ ನಡೆಸಲಾಗುತ್ತಿದೆ. ವಿದ್ಯುತ್ ತಂತಿಗಳ ಬಳಿ ಚಾಚಿಕೊಂಡಿರುವ ಟೊಂಗೆಗಳನ್ನು ಮಾತ್ರ ಕಡಿಯಲು ಅವಕಾಶವಿದೆ. ಅಳಿವಿನಂಚಿನ ಮರಗಳನ್ನೂ ಲೆಕ್ಕಿಸದೆ ನೆಲಮಟ್ಟದವರೆಗೆ ಕಡಿದು ಹಾಕಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ನೀಡುವುದಾಗಿ ತಿಳಿಸಿದರು. ಇದರಲ್ಲಿ ಭಾಗಿಯಾದ ಎಲ್ಲರನ್ನೂ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net