ಸಿಬಿಐಗೆ ಯುನಾನಿ ಆಡಳಿತಾಧಿಕಾರಿ ಟ್ರ್ಯಾಪ್

cbi
Published on

ಬೆಂಗಳೂರು: ಮೆಡಿಕಲ್ ಬಿಲ್ ಹಣ ಮಂಜೂರು ಮಾಡಲು 1.10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದ ರಾಷ್ಟ್ರೀಯ ಯುನಾನಿ ಚಿಕಿತ್ಸೆ ಸಂಸ್ಥೆಯ ಆಡಳಿತಾಧಿಕಾರಿಯನ್ನು ಸಿಬಿಐ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.

ಬೆಂಗಳೂರಿನ ರಾಷ್ಟ್ರೀಯ ಯುನಾನಿ ಚಿಕಿತ್ಸೆ ಸಂಸ್ಥೆ ಔಷಧ ವಿಭಾಗ ಆಡಳಿತಾಧಿಕಾರಿ ಬಂಧಿತ. ಔಷಧ ಪೂರೈಕೆ ಸಂಬಂಧ ಬಿಲ್ ಪಾವತಿಗೆ ದೂರುದಾರರಿಂದ 1.10 ಲಕ್ಷ ರೂ. ಲಂಚಕ್ಕೆ ಆಡಳಿತಾಧಿಕಾರಿ ಬೇಡಿಕೆ ಇಟ್ಟಿದ್ದ. ನೊಂದ ದೂರುದಾರ, ಸಿಬಿಐಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಅಧಿಕಾರಿಗಳು, ದೂರುದಾರರಿಂದ ಮುಂಗಡವಾಗಿ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದೇ ವೇಳೆ ಆರೋಪಿತ ಅಧಿಕಾರಿಯ ಕಚೇರಿ ಪರಿಶೀಲನೆ ನಡೆಸಿದಾಗ, 2 ಲಕ್ಷ ರೂ. ನಗದು ಪತ್ತೆಯಾಗಿದೆ. ಆಡಳಿತ ಅಧಿಕಾರಿಯನ್ನು ಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net