

ಕೋಲ್ಕತ್ತ: ಪಬ್ ಜಿ ಆಟವಾಡಲು ಸಾಧ್ಯವಾಗದ ಕಾರಣ ಬೇಸತ್ತು 21 ವರ್ಷದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬಂಗಾಳದ ನಾದಿಯಾದಲ್ಲಿ ನಡೆದಿದೆ. ಪ್ರೀತಮ್ ಹಲ್ದರ್ ಮೃತ. ಈತ ಐಟಿಐ ವಿದ್ಯಾರ್ಥಿಯಾಗಿದ್ದು, ಪುರ್ಬಾ ಲಾಲ್ಪುರ್ದಲ್ಲಿರುವ ತನ್ನ ಮನೆಯಲ್ಲೇ ನೇಣುಬಿಗಿದುಕೊಂಡಿದ್ದಾನೆ.
ಶುಕ್ರವಾರ ಬೆಳಗ್ಗೆ ತಿಂಡಿ ತಿಂದ ನಿಂತರ ಈತ ತನ್ನ ಕೋಣೆಗೆ ಹೋಗಿದ್ದ. ಆದರೆ ಮಧ್ಯಾಹ್ನ ಊಟಕ್ಕೆ ಸಮಯವಾದರೂ ಹೊರಗೆ ಬರಲಿಲ್ಲ. ನಾನು ತುಂಬ ಸಲ ಕರೆದೆ, ಬಾಗಲಿನ್ನೂ ಬಡಿದೆ. ಆದರೆ ಎಷ್ಟೇ ಕೂಗಿದರೂ ಆತ ಬಾಗಿಲು ತೆರೆಯದಿದ್ದಾಗ ಭಯಗೊಂಡು ನೆರೆಮನೆಯವರನ್ನು ಕರೆದೆ. ನಂತರ ಕೋಣೆಯ ಬಾಗಿಲನ್ನೇ ಒಡೆದು ಒಳ ಹೋಗಿ ನೋಡಿದರೆ ಆತ್ಮ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದ ಎಂದು ಯುವಕನ ತಾಯಿ ರತ್ನಾ ತಿಳಿಸಿದ್ದಾರೆ. ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಹಚರನಿಂದ ಮಹಾರಾಷ್ಟ್ರ ಸಿಎಂಗೆ ಬೆದರಿಕೆ; ಮನೆಯನ್ನೇ ಸ್ಫೋಟಿಸುವುದಾಗಿ ಕರೆ
ನನ್ನ ಮಗ ತುಂಬ ಪಬ್ ಜಿ ಆಡುತ್ತಿದ್ದ. ರಾತ್ರಿಯೆಲ್ಲ ಅದನ್ನೇ ಆಡುತ್ತ ಕುಳಿತಿರುತ್ತಿದ್ದ. ಆದರೆ ಪಬ್ ಜಿ ಆಡಲು ಸಾಧ್ಯವಾಗದ ಕಾರಣ ತುಂಬ ಬೇಸರಗೊಂಡಿದ್ದ. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೂ ಅವರು ಹೇಳಿದ್ದಾರೆ. ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಪ್ರೀತಂ ತಂದೆ ಬಿಸ್ವಜಿತ್ ಹಾಲ್ದರ್ ನಿವೃತ್ತ ಸೈನಿಕ ಹಾಗೂ ತಾಯಿ ಗೃಹಿಣಿ. ಇವರಿಗೆ ಇನ್ನೋರ್ವ ಮಗಳು ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)